ಇಂದಿನಿಂದ ಸಿಇಟಿ ಪರೀಕ್ಷೆ | ಪರೀಕ್ಷಾ ಕೇಂದ್ರ ಹುಡುಕಲು ವಿದ್ಯಾರ್ಥಿಗಳ ಪರದಾಟ

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ನಿರ್ಧಾರಗಳಿಗೆ ಇತ್ತೀಚಿನ ದಿನಗಳಲ್ಲಿ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಸಿಇಟಿ ಪರೀಕ್ಷೆ ನಿಗದಿ ವಿಚಾರದಲ್ಲೂ ಲೋಪವಾಗಿರುವುದು ವರದಿಯಾಗಿದೆ.

Update: 2024-04-18 05:42 GMT
ಪರೀಕ್ಷೆ

ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪರೀಕ್ಷೆಗಳನ್ನು ಸಮರ್ಪಕವಾಗಿ ನಡೆಸುತ್ತಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೇ ಸಿಇಟಿ ಪರೀಕ್ಷೆಯಲ್ಲೂ ಲೋಪವಾಗಿರುವುದು ವರದಿಯಾಗಿದೆ.

ರಾಜ್ಯದಲ್ಲಿ ಗುರುವಾರ ಹಾಗೂ ಶುಕ್ರವಾರ (ಏಪ್ರಿಲ್ 18 ಹಾಗೂ 19)ರಂದು ಸಿಇಟಿ ಪರೀಕ್ಷೆ ನಡೆಯುತ್ತಿದೆ. ಆದರೆ, ಪರೀಕ್ಷೆಯಲ್ಲಿ ಹಲವು ಗೊಂದಲ ಸೃಷ್ಟಿಯಾಗಿರುವುದು ವರದಿಯಾಗಿದೆ. ಪರೀಕ್ಷೆ ಬರೆಯುವ ಅಭ್ಯರ್ಥಿಗಳ ಪರೀಕ್ಷಾ ಕೇಂದ್ರ ನಿಗದಿಯಲ್ಲಿ ಲೋಪವಾಗಿದ್ದು, ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈ ಬಾರಿ ಸಿಇಟಿಗೆ ದಾಖಲೆಯ ಪ್ರಮಾಣದಲ್ಲಿ ಅರ್ಜಿ ಸಲ್ಲಿಕೆಯಾಗಿವೆ. ನಿರೀಕ್ಷೆಗೂ ಮೀರಿ ಅರ್ಜಿಗಳು ಸಲ್ಲಿಕೆಯಾಗಿದ್ದು, ಪ್ರಸಕ್ತ ಸಾಲಿನಲ್ಲಿ ಸಿಇಟಿ ಪರೀಕ್ಷೆ ಬರೆಯಲು 3,49637 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಈ ಪ್ರಮಾಣವು 2023ನೇ ಸಾಲಿಗೆ ಹೋಲಿಕೆ ಮಾಡಿದರೆ, 1 ಲಕ್ಷ ಜನ ವಿದ್ಯಾರ್ಥಿಗಳು ಹೆಚ್ಚಾದಂತಾಗಿದೆ. ಇನ್ನು ಕರ್ನಾಟಕದ 737 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಯುತ್ತಿದ್ದು, ಬೆಂಗಳೂರಿನಲ್ಲಿ 167 ಪರೀಕ್ಷಾ ಕೇಂದ್ರಗಳನ್ನು ನಿಗದಿ ಮಾಡಲಾಗಿದೆ.

ಎಂಜಿನಿಯರಿಂಗ್, ವೆಟರ್ನರಿ, ಫಾರ್ಮಸಿ, ನ್ಯಾಚುರೋಪಥಿ, ಯೋಗ, ಬಿ.ಎಸ್ಸಿ (ನರ್ಸಿಂಗ್) ಹಾಗೂ ಕೃಷಿ ವಿಜ್ಞಾನ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ಸಿಇಟಿ ಪರೀಕ್ಷೆ ನಡೆಸಲಾಗುತ್ತಿದೆ.

ಪರೀಕ್ಷಾ ಕೇಂದ್ರ ಬದಲಾವಣೆ: ಆಕ್ರೋಶ

ಸಿಇಟಿ ಪರೀಕ್ಷೆಯಲ್ಲಿ ಯಾವುದೇ ಅಕ್ರಮ ನಡೆಯದಂತೆ ಎಚ್ಚರಿಕೆ ವಹಿಸುವ ಉದ್ದೇಶದಿಂದ ಪರೀಕ್ಷಾ ಪ್ರಾಧಿಕಾರವು ವಿದ್ಯಾರ್ಥಿಗಳ ಪರೀಕ್ಷಾ ಕೇಂದ್ರವನ್ನು ದೂರದ ಪ್ರದೇಶಗಳಲ್ಲಿ ನಿಗದಿ ಮಾಡಿದ್ದು, ಇದು ವಿದ್ಯಾರ್ಥಿಗಳ ಆಕ್ರೋಶಕ್ಕೆ ಕಾರಣವಾಗಿದೆ. ಪರೀಕ್ಷೆಯಲ್ಲಿ ಅಕ್ರಮವನ್ನು ತಡೆಯುವುದಕ್ಕೆ ಶಿಕ್ಷಕರು ಹಾಗೂ ಮೇಲ್ವಿಚಾರಕನ್ನು ಬದಲಾಯಿಸಬಹುದಾಗಿತ್ತು. ಇದೀಗ ಲೋಕಸಭೆ ಚುನಾವಣೆಯ ಪ್ರಚಾರವೂ ನಡೆಯುತ್ತಿರುವುದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆ ಇರುವ ಸಾಧ್ಯತೆಯೂ ಇದೆ. ದೂರದ ಊರುಗಳಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಿರುವುದರಿಂದ ಪರೀಕ್ಷಾ ಕೇಂದ್ರಗಳನ್ನು ಹುಡುಕುವುದು ಸಹ ಸವಾಲಾಗಿದೆ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Tags:    

Similar News