ವಾಲ್ಮಿಕಿ ನಿಗಮ ಹಗರಣ | ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ ಸಿಬಿಐ
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿರುವ ಮೂವರು ಯೂನಿಯನ್ ಬ್ಯಾಂಕ್‌ನ ಅಧಿಕಾರಿಗಳು ಸೇರಿ ಐವರ ವಿರುದ್ಧ ಎಫ್‌ಐಆರ್ ದಾಖಲಿಸಿದೆ.;
ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಕೈಗೆತ್ತಿಕೊಂಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಯೂನಿಯನ್ ಬ್ಯಾಂಕ್‌ನ ಅಧಿಕಾರಿಗಳು ಸೇರಿ ಐವರ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಪ್ರಕರಣದ ತನಿಖೆಯನ್ನು ಸಿಬಿಐ ತೆಗೆದುಕೊಂಡಿರುವುದರಿಂದ ರಾಜ್ಯ ಸರ್ಕಾರದ ಎಸ್‌ಐಟಿ ತನಿಖೆ ಸ್ಥಗಿತಗೊಳ್ಳಲಿದೆ.
ಬೆಂಗಳೂರಿನ ಎಂ.ಜಿ.ರಸ್ತೆ ಶಾಖೆಯ ಉಪ ಪ್ರಧಾನ ವ್ಯವಸ್ಥಾಪಕ ಜೆ.ಮಹೇಶ್ ನೀಡಿರುವ ದೂರಿನನ್ವಯ ಸಿಬಿಐ ಎಫ್‌ಐಆರ್ ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದೆ. ಪ್ರಕರಣ ಸಂಬಂಧ ಅಮಾನತುಗೊಂಡಿರುವ ಯೂನಿಯನ್ ಬ್ಯಾಂಕ್ ಅಧಿಕಾರಿಗಳಾದ ಸುಚಿಸ್ಮಿತಾ ರೌಲ್, ಡಿ.ದೀಪಾ, ಕೆ.ವಿ.ಕೃಷ್ಣಮೂರ್ತಿ ಹಾಗೂ ಇಬ್ಬರು ಖಾಸಗಿ ವ್ಯಕ್ತಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ.
ವಾಲ್ಮೀಕಿ ಅಭಿವೃದ್ಧಿ ನಿಗಮ ನಿಯಮಿತದಲ್ಲಿ ಅನುದಾನದ ಹಣ ದುರುಪಯೋಗವಾಗಿದೆ ಎಂದು ಆರೋಪಿಸಿದ್ದ ಅದರ ಅಧೀಕ್ಷಕ ಚಂದ್ರಶೇಖರನ್ ಡೆತ್‌ನೋಟ್ ಬರೆದಿಟ್ಟು ಮೇ 26 ರಂದು ಆತ್ಮಹತ್ಯೆ ಮಾಡಿಕೊಂಡಿದ್ದರು. ಚಂದ್ರಶೇಖರನ್ ಅವರ ಪತ್ನಿಯ ದೂರಿನ ಅನ್ವಯ ಶಿವಮೊಗ್ಗದ ವಿನೋಬ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಸಂಬಂಧ ಎಸ್‌ಐಟಿ ತನಿಖೆಯನ್ನು ಕೈಗೊಂಡಿದ್ದು, ಹಗರಣದಲ್ಲಿ ಪಾಲ್ಗೊಂಡಿರುವ ಸಚಿವ ಬಿ ನಾಗೇಂದ್ರ ಆಪ್ತರು ಸೇರಿದಂತೆ ಹಲವರನ್ನು ಬಂಧಿಸಿತ್ತು. ಇದೀಗ ಈ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿದೆ.
ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ರೂಪಾಯಿ ಹಣ ವರ್ಗಾವಣೆ ಪ್ರಕರಣ ತನಿಖೆಯನ್ನು ಸಿಬಿಐ ಕೈಗೆತ್ತಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ ಪರಮೇಶ್ವರ್, ಸಿಬಿಐಗೆ ಬ್ಯಾಂಕ್ನವರು ಪತ್ರ ಬರೆದಿದ್ದರು. ಮೂರು ಕೋಟಿ ರೂಪಾಯಿ ಮೊತ್ತಕ್ಕಿಂತ ಹಚ್ಚಿನ ಹಗರಣ ಆಗಿದ್ದರೆ ಸ್ವಯಂಪ್ರೇರಿತ ಕೇಸ್ ದಾಖಲಿಸಬಹುದು ಅಂತ ಕಾನೂನು ಇದೆ. ಅದರಂತೆ ಸಿಬಿಐ ಕೇಸ್ ತೆಗೆದುಕೊಂಡಿದೆ. ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ" ಎಂದು ಹೇಳಿದ್ದಾರೆ.