ಜಾತಿ ಸಮೀಕ್ಷೆ ಕುಂಠಿತ| ಜಿಬಿಎ ವ್ಯಾಪ್ತಿಯಲ್ಲಿ ರಾತ್ರಿ 9ರವರೆಗೆ ಸಮೀಕ್ಷೆಗೆ ಅವಕಾಶ
ನಗರದಲ್ಲಿ ಗಣತಿದಾರರು ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಕುಟುಂಬ ಸದಸ್ಯರು ಸಿಗುತ್ತಿಲ್ಲ. ಮನೆ ಬಾಗಿಲು ಹಾಕಿರುತ್ತದೆ. ಹೀಗಾಗಿ, ಸಂಜೆ 6 ರಿಂದ 9 ಗಂಟೆವರೆಗೆ ಸಮೀಕ್ಷೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ ಎಂದು ಜಿಬಿಎ ಆಯುಕ್ತ ಮಹೇಶ್ವರ್ ರಾವ್ ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ರಾಜ್ಯದ ವಿವಿಧ ಜಿಲ್ಲೆಗಳಿಗೆ ಹೋಲಿಸಿದರೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಜಾತಿ ಸಮೀಕ್ಷೆ ಪ್ರಗತಿ ಕಡಿಮೆಯಾಗಿದೆ. ಆದ್ದರಿಂದ, ನಗರ ವ್ಯಾಪ್ತಿಯಲ್ಲಿ ರಾತ್ರಿ 9ರವರೆಗೆ ಸಮೀಕ್ಷೆಗೆ ಅವಕಾಶ ನೀಡಲಾಗಿದೆ.
ಈ ಕುರಿತು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಸೂಚನೆ ನೀಡಿದ್ದಾರೆ. ನಗರದಲ್ಲಿ ಕಚೇರಿ, ಕಾರ್ಖಾನೆ ಸೇರಿದಂತೆ ವಿವಿಧ ಕೆಲಸ ಕಾರ್ಯಗಳಿಗೆ ಕುಟುಂಬ ಸದಸ್ಯರು ತೆರಳುವ ಹಿನ್ನೆಲೆಯಲ್ಲಿ ಸಂಜೆ 6 ರಿಂದ 9 ಗಂಟೆವರೆಗೆ ಸಾಮಾಜಿಕ - ಶೈಕ್ಷಣಿಕ ಸಮೀಕ್ಷೆ ನಡೆಸುವುದಕ್ಕೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.
ನಗರದಲ್ಲಿ ಕೆಲಸಗಳಿಗೆ ತೆರಳುವವರ ಸಂಖ್ಯೆ ಹೆಚ್ಚಾಗಿದೆ. ಗಣತಿದಾರರು ಮನೆಗೆ ಎರಡು ಬಾರಿ ಭೇಟಿ ನೀಡಿದರೂ ಕುಟುಂಬ ಸದಸ್ಯರು ಸಿಗುತ್ತಿಲ್ಲ. ಹೀಗಾಗಿ, ಸಂಜೆ 6 ರಿಂದ 9 ಗಂಟೆವರೆಗೆ ಸಮೀಕ್ಷೆ ನಡೆಸುವುದಕ್ಕೆ ನಿರ್ಧರಿಸಲಾಗಿದೆ ಎಂದರು.
ಸಂಜೆ 6 ರಿಂದ 9 ಗಂಟೆವರೆಗೆ ಸಮೀಕ್ಷೆ ನಡೆಸುವ ಕಾರ್ಯಕ್ಕೆ ಮಹಿಳಾ ಗಣತಿದಾರರಿಗೆ ವಿನಾಯಿತಿ ನೀಡಲಾಗಿದೆ. ಗಣತಿದಾರರು ತಂಡಗಳನ್ನು ರೂಪಿಸಿಕೊಂಡು ಸಂಜೆ ವೇಳೆಯಲ್ಲಿ ಭೇಟಿ ನೀಡಿ ಮಾಹಿತಿ ಸಂಗ್ರಹಿಸುವ ಕಾರ್ಯ ಮಾಡಲಾಗುವುದು. ಮೂರ್ನಾಲ್ಕು ದಿನ ಸಂಜೆ ಸಮೀಕ್ಷೆ ನಡೆಸಲಾಗುವುದು. ಆ ಬಳಿಕ ಮುಂದಿನ ತೀರ್ಮಾನ ಮಾಡಲಾಗುವುದು ಎಂದು ತಿಳಿಸಿದರು.
ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರು ಸಮೀಕ್ಷೆ ನಿರಾಕರಣೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಮಾಹಿತಿ ಗುಪ್ತವಾಗಿ ಇರುವಂತೆ ನೋಡಿಕೊಳ್ಳಬೇಕು. ಆ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ ಎಂದರು.
ಇನ್ನೂ ನಗರದಲ್ಲಿ ಸಮೀಕ್ಷೆಗೆ ನಿರಾಕರಣೆ ಮಾಡಿರುವವರ ಸಂಖ್ಯೆ ಬಗ್ಗೆ ಮಾಹಿತಿ ಇಲ್ಲ ಸಂಗ್ರಹಿಸುತ್ತಿದ್ದೇವೆ. ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ ಗತಿ ಸಮೀಕ್ಷೆ ಕಾರ್ಯ ನಡೆಯುತ್ತಿದ್ದು, ಸಮೀಕ್ಷೆ ಪ್ರಾರಂಭದಿಂದ ಅ.16ರವರೆಗೆ 16.41 ಲಕ್ಷ ಮನೆಗಳ ಸಮೀಕ್ಷೆ ನಡೆಸಲಾಗಿದೆ. ಐದು ನಗರ ಪಾಲಿಕೆಗಳಲ್ಲಿ ರಾತ್ರಿ 8.30ರವರೆಗೆ 96,979 ಮನೆಗಳನ್ನು ಸಮೀಕ್ಷೆ ನಡೆಸಲಾಗಿದೆ.
ಸಮೀಕ್ಷೆ ಪ್ರಾರಂಭ ದಿನದಿಂದ ಈವರೆಗೆ ಜಿಬಿಎ 5 ನಗರ ಪಾಲಿಕೆಗಳ ವ್ಯಾಪ್ತಿಯಲ್ಲಿ 16,41,366 ಮನೆಗಳ ಸಮೀಕ್ಷೆ ನಡೆಸಲಾಗಿದೆ.
ಐದು ನಗರ ಪಾಲಿಕೆವಾರು ಸಮೀಕ್ಷೆ ನಡೆಸಿದ ಒಟ್ಟು ಮನೆಗಳು
1. ಕೇಂದ್ರ ನಗರ ಪಾಲಿಕೆ : 2,18,423
2. ಪೂರ್ವ ನಗರ ಪಾಲಿಕೆ : 2,56,676
3. ಉತ್ತರ ನಗರ ಪಾಲಿಕೆ : 3,99,576
4. ದಕ್ಷಿಣ ನಗರ ಪಾಲಿಕೆ : 3,01,948
5. ಪಶ್ಚಿಮ ನಗರ ಪಾಲಿಕೆ : 4,64,743