ವಾಲ್ಮೀಕಿ ಸಮುದಾಯಕ್ಕೆ ನಿಂದನೆ ಆರೋಪ: ಮಾಜಿ ಸಂಸದ ರಮೇಶ್‌ ಕತ್ತಿ ವಿರುದ್ಧ ಜಾತಿ ನಿಂದನೆ ಕೇಸ್​​

ವಾಲ್ಮೀಕಿ ಸಮುದಾಯದ ಬಗ್ಗೆ ಮಾಜಿ ಸಂಸದ ರಮೇಶ್‌ ಕತ್ತಿ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿರುವ ಮುಖಂಡರು ಬೆಳಗಾವಿಯಲ್ಲಿ ಬೃಹತ್‌ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ.

Update: 2025-10-20 06:07 GMT

ಮಾಜಿ ಸಂಸದ ರಮೇಶ್‌ ಕತ್ತಿ

Click the Play button to listen to article

ವಾಲ್ಮೀಕಿ ಸಮುದಾಯದ ವಿರುದ್ಧ ಅವಹೇಳನಕಾರಿ ಪದ ಬಳಸಿದ್ದಾರೆಂಬ ಆರೋಪದ ಮೇಲೆ ಮಾಜಿ ಸಂಸದ ರಮೇಶ ಕತ್ತಿ ಅವರ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಾಗಿದೆ. ಈ ಘಟನೆಯನ್ನು ಖಂಡಿಸಿರುವ ವಾಲ್ಮೀಕಿ ಸಮುದಾಯದ ಮುಖಂಡರು ರಾಜ್ಯಾದ್ಯಂತ ಹೋರಾಟ ನಡೆಸಲು ನಿರ್ಧರಿಸಿದ್ದಾರೆ. ಆದರೆ, ತಮ್ಮ ಹೇಳಿಕೆಯನ್ನು ತಿರುಚಲಾಗಿದೆ ಎಂದು ರಮೇಶ ಕತ್ತಿ ಸ್ಪಷ್ಟನೆ ನೀಡಿದ್ದಾರೆ.

ಭಾನುವಾರ, ಅಕ್ಟೋಬರ್ 19ರಂದು ಬೆಳಗಾವಿಯ ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಜಿಲ್ಲಾ ಸಹಕಾರ ಬ್ಯಾಂಕ್‌ನ (ಬಿಡಿಸಿಸಿ) ಚುನಾವಣೆ ನಡೆಯುತ್ತಿತ್ತು. ಚುನಾವಣೆಯಲ್ಲಿ ಗೆಲುವು ಸಾಧಿಸಿದ ನಂತರ ರಮೇಶ ಕತ್ತಿ ಅವರು ತಮ್ಮ ಬೆಂಬಲಿಗರೊಂದಿಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅವರು ವಾಲ್ಮೀಕಿ ಸಮುದಾಯದ ಕುರಿತು ಅಶ್ಲೀಲ ಮತ್ತು ಅವಹೇಳನಕಾರಿ ಮಾತುಗಳನ್ನಾಡಿದ್ದಾರೆ ಎಂದು ಆರೋಪಿಸಲಾಗಿದೆ.

ದೂರು ದಾಖಲು ಮತ್ತು ಹೋರಾಟದ ಎಚ್ಚರಿಕೆ

ರಮೇಶ ಕತ್ತಿ ಅವರು ವಾಲ್ಮೀಕಿ ಸಮಾಜದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಆರೋಪಿಸಿ, ಸಮುದಾಯದ ಮುಖಂಡರಾದ ರಾಜಶೇಖರ ತಳವಾರ ಅವರು ಬೆಳಗಾವಿ ನಗರದ ಕ್ಯಾಂಪ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನನ್ವಯ ಕತ್ತಿ ವಿರುದ್ಧ ಜಾತಿ ನಿಂದನೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಸಮುದಾಯದ ನಾಯಕರು, ಮೊದಲು ಬೆಳಗಾವಿಯಲ್ಲಿ ಬೃಹತ್ ಪ್ರತಿಭಟನೆ ನಡೆಸಿ, ಮುಂದಿನ ದಿನಗಳಲ್ಲಿ ಹೋರಾಟವನ್ನು ರಾಜ್ಯಾದ್ಯಂತ ವಿಸ್ತರಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

"ನನ್ನ ಹೇಳಿಕೆ ತಿರುಚಲಾಗಿದೆ": ರಮೇಶ ಕತ್ತಿ ಸ್ಪಷ್ಟನೆ

ಈ ಆರೋಪಗಳ ಕುರಿತು ವಿಡಿಯೊ ಹೇಳಿಕೆ ಮೂಲಕ ಸ್ಪಷ್ಟನೆ ನೀಡಿರುವ ರಮೇಶ ಕತ್ತಿ, ತಮ್ಮ ಮೇಲಿನ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. "ಬಿಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಗೆದ್ದ ಮೇಲೆ ಅಭಿಮಾನಿಗಳು ಡಾಲ್ಬಿ ಸಂಗೀತದೊಂದಿಗೆ ಮೆರವಣಿಗೆ ಮಾಡಲು ಮುಂದಾದರು. ಆಗ ನಾನು 'ಬೇಡರೋ' ಎಂದು ಹೇಳಿದೆ. ಈ ಹೇಳಿಕೆಯನ್ನೇ ತಿರುಚಿ, ನಾನು ವಾಲ್ಮೀಕಿ ಸಮುದಾಯಕ್ಕೆ ನಿಂದನೆ ಮಾಡಿದ್ದೇನೆ ಎಂದು ದುರುದ್ದೇಶಪೂರ್ವಕವಾಗಿ ವಿಡಿಯೊವನ್ನು ವೈರಲ್ ಮಾಡಿದ್ದಾರೆ," ಎಂದು ಅವರು ತಿಳಿಸಿದ್ದಾರೆ.

"ನನ್ನ ಗೆಲುವನ್ನು ಸಹಿಸಲಾಗದವರು ನನ್ನನ್ನು ವಾಲ್ಮೀಕಿ ಸಮುದಾಯದ ವಿರೋಧಿ ಎಂದು ಬಿಂಬಿಸಲು ಷಡ್ಯಂತ್ರ ನಡೆಸಿದ್ದಾರೆ. ನಾನು ಯಾವುದೇ ಸಮುದಾಯವನ್ನು ಉದ್ದೇಶಿಸಿ ಮಾತನಾಡಿಲ್ಲ. ಒಂದು ವೇಳೆ ನನ್ನ ಮಾತಿನಿಂದ ಯಾರಿಗಾದರೂ ನೋವಾಗಿದ್ದರೆ, ಅದಕ್ಕಾಗಿ ನಾನು ವಿಷಾದ ವ್ಯಕ್ತಪಡಿಸುತ್ತೇನೆ," ಎಂದು ರಮೇಶ ಕತ್ತಿ ಹೇಳಿದ್ದಾರೆ. 

Tags:    

Similar News