ಕುಂದಾನಗರಿಯಲ್ಲಿ ಶತಮಾನದ ಸಹಕಾರಿ ಸಂಸ್ಥೆಯ ಮೇಲೆ ಘಟಾನುಘಟಿಗಳ ಹಿಡಿತಕ್ಕೆ ಹೋರಾಟ
x

ಕುಂದಾನಗರಿಯಲ್ಲಿ ಶತಮಾನದ ಸಹಕಾರಿ ಸಂಸ್ಥೆಯ ಮೇಲೆ ಘಟಾನುಘಟಿಗಳ ಹಿಡಿತಕ್ಕೆ ಹೋರಾಟ

ಬೆಳಗಾವಿ ಡಿಸಿಸಿ ಬ್ಯಾಂಕ್​ ಚುನಾವಣೆ ಭಾನುವಾರ ನಡೆಯಲಿದೆ. 16 ಸ್ಥಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಒಂದು ಸ್ಥಾನಕ್ಕೆ ಮುಂದೂಡಿಕೆಯಾಗಿದೆ.


Click the Play button to hear this message in audio format

ಕುಂದಾನಗರಿ ಬೆಳಗಾವಿ, ರಾಜ್ಯ ರಾಜಕಾರಣದ ಕೇಂದ್ರ ಬಿಂದು. ಸಾಹುಕಾರರ ನಾಡು ಬೆಳಗಾವಿ ಇದೀಗ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ನ ಸಮರಕ್ಕೆ ಸಜ್ಜಾಗಿದೆ. ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ (ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​) ಡಿಸಿಸಿ ಬ್ಯಾಂಕ್​ ಚುನಾವಣೆ ಭಾನುವಾರ ನಡೆಯಲಿದ್ದು, ರಾಜಕೀಯದ ಗಮನಸೆಳೆದಿದೆ. 16 ಸ್ಥಾನಗಳ ಪೈಕಿ ಈಗಾಗಲೇ 9 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, 6 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಇನ್ನೊಂದು ಸ್ಥಾನಕ್ಕೆ ಚುನಾವಣೆ ಮುಂದೂಡಿಕೆ ಮಾಡಲಾಗಿದೆ. ಹುಕ್ಕೇರಿ ಸ್ಥಾನದ ಚುನಾವಣೆಯನ್ನು ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಮುಂದಕ್ಕೆ ಹೋಗಿದೆ.

ಭಾನುವಾರ ನಡೆಯುವ ಚುನಾವಣೆಗೆ ಅಡ್ಡ ಮತದಾನದ ಭೀತಿಯೂ ಎದುರಾಗಿದೆ. ಹೀಗಾಗಿ ಮಾಜಿ ಸಂಸದ ರಮೇಶ್‌ ಕತ್ತಿ- ಶಾಸಕ ಲಕ್ಷ್ಮಣ್‌ ಸವದಿ ಮತ್ತು ಜಾರಕಿಹೊಳಿ ಸಹೋದರರ ನಡುವೆ ಜಿದ್ದಾಜಿದ್ದಿ ಏರ್ಪಟ್ಟಿದ್ದೆ. ಬ್ಯಾಂಕ್‌ನ ಆಡಳಿತ ಚುಕ್ಕಾಣಿ ಹಿಡಿಯಲು ಜಾರಕಿಹೊಳಿ ಸಹೋದರ ಬಣಕ್ಕೆ ಮ್ಯಾಜಿಕ್‌ ನಂಬರ್‌ ತಲುಪಲು ಇನ್ನೂ ಎರಡು ಸ್ಥಾನಗಳಲ್ಲಿ ಗೆಲ್ಲಲೇ ಬೇಕಿದೆ. ಬ್ಯಾಂಕ್‌ನ 16 ನಿರ್ದೇಶಕ ಸ್ತಾನಗಳ ಪೈಕಿ 9 ಸ್ಥಾನಗಳಿಗೆ ಅವಿರೋಧ ಆಯ್ಕೆಯಾಗಿದ್ದು, ಜಾರಕಿಹೊಳಿ ಬಣಕ್ಕೆ ಏಳು ಸ್ಥಾನಗಳು ದಕ್ಕಿವೆ. ಇಬ್ಬರು ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ಪಕ್ಷೇತರರು ರಮೇಶ್‌ ಕತ್ತಿ ಬಣ ಅಥವಾ ಜಾರಕಿಹೊಳಿ ಬಣಕ್ಕೆ ಬೆಂಬಲ ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

7 ಸ್ಥಾನಕ್ಕೆ ನಿಗದಿಯಾಗಿದ್ದ ಚುನಾವಣೆಯು ಹುಕ್ಕೇರಿ ಹೊರತುಪಡಿಸಿ 6 ಸ್ಥಾನಕ್ಕೆ ನಡೆಯಲಿದೆ. ಕೆಲವೊಂದು ಸಮಸ್ಯೆಗಳು ಇರುವ ಕಾರಣ ಹುಕ್ಕೇರಿ ಸ್ಥಾನದ ಚುನಾವಣೆ ಮುಂದೂಡುವಂತೆ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಾಲಯವು ಚುನಾವಣೆ ಮುಂದೂಡುವಂತೆ ಆದೇಶ ನೀಡಿದೆ. ಹೀಗಾಗಿ 6 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಈ ಸ್ಥಾನಗಳಿಗೆ ನಡೆಯುವ ಚುನಾವಣೆಯಲ್ಲಿ ಅಡ್ಡ ಮತದಾನದ ಭೀತಿ ಎದುರಾಗಿದೆ. ಜಾರಕಿಹೊಳಿ ಸಹೋದರರು ರಮೇಶ್‌ಕತ್ತಿ-ಲಕ್ಷ್ಮಣ್‌ ಸವದಿ ಬಣದ ಮತದಾರರನ್ನು ಓಲೈಕೆ ಮಾಡಿ ತಮ್ಮ ಪರವಾಗಿ ಮತ ಹಾಕಿಸಿಕೊಳ್ಳುವ ತಂತ್ರಗಾರಿಕೆ ಹೆಣೆದಿದ್ದಾರೆ ಎಂದು ಹೇಳಲಾಗಿದೆ. ಈ ಎಲ್ಲ ಕೂತುಹಲಕ್ಕೆ ಭಾನುವಾರ ಸಂಜೆ ಫಲಿತಾಂಶ ಪ್ರಕಟವಾಗುವ ಮೂಲಕ ತೆರೆಬೀಳಲಿದೆ.

ಅವಿರೋಧವಾಗಿ ಆಯ್ಕೆಯಾದವರು:

ರಾಜ್ಯದ ಗಮನ ಸೆಳೆದಿರುವ ಬೆಳಗಾವಿ ಡಿಸಿಸಿ ಬ್ಯಾಂಕ್‌ ​ ಚುನಾವಣೆಯಲ್ಲಿ 9 ಮಂದಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಚಿಕ್ಕೋಡಿ ತಾಲೂಕಿನಿಂದ ಗಣೇಶ ಹುಕ್ಕೇರಿ, ಗೋಕಾಕ್​ನಲ್ಲಿ ಅಮರನಾಥ್‌ ಜಾರಕಿಹೊಳಿ, ಸವದತ್ತಿಯಲ್ಲಿ ವಿರೂಪಾಕ್ಷ ಮಾಮನಿ, ಯರಗಟ್ಟಿಯಿಂದ ವಿಶ್ವಾಸ ವೈದ್ಯ, ಕಾಗವಾಡದಿಂದ ಶಾಸಕ ರಾಜು ಕಾಗೆ, ಖಾನಾಪುರದಿಂದ ಮಾಜಿ ಶಾಸಕ ಅರವಿಂದ ಪಾಟೀಲ, ಬೆಳಗಾವಿಯಿಂದ ರಾಹುಲ್ ಜಾರಕಿಹೊಳಿ, ಮೂಡಲಗಿಯಿಂದ ನೀಲಕಂಠ ಕಪ್ಪಲಗುದ್ದಿ, ಇತರೆ ಕ್ಷೇತ್ರದಿಂದ ಚನ್ನರಾಜ ಹಟ್ಟಿಹೊಳಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆ ನಡೆಯುವ ಕ್ಷೇತ್ರಗಳು :

ಅಥಣಿ ಕ್ಷೇತ್ರದಲ್ಲಿ ಶಾಸಕ ಲಕ್ಷ್ಮಣ ಸವದಿ ಮತ್ತು ಮಹೇಶ ಕುಮಠಳ್ಳಿ, ನಿಪ್ಪಾಣಿ ಕ್ಷೇತ್ರದಲ್ಲಿ ಅಣ್ಣಾಸಾಹೇಬ ಜೊಲ್ಲೆ ಮತ್ತು ಉತ್ತಮ ಪಾಟೀಲ, ಬೈಲಹೊಂಗಲ ಕ್ಷೇತ್ರದಲ್ಲಿ ಮಹಾಂತೇಶ ದೊಡ್ಡಗೌಡರ ಮತ್ತು ಡಾ.ವಿಶ್ವನಾಥ ಪಾಟೀಲ, ಕಿತ್ತೂರು ಕ್ಷೇತ್ರದಲ್ಲಿ ಸಾಹೇಬ ಪಾಟೀಲ ಮತ್ತು ವಿಕ್ರಮ್ ಇನಾಮದಾರ್, ರಾಮದುರ್ಗ ಕ್ಷೇತ್ರದಲ್ಲಿ ಮಲ್ಲಣ್ಣ ಯಾದವಾಡ ಮತ್ತು ಎಸ್.ಎಸ್.ಢವಣ ರಾಯಬಾಗ ಕ್ಷೇತ್ರದಲ್ಲಿ ಅಪ್ಪಾಸಾಹೇಬ ಕುಲಗುಡೆ ಮತ್ತು ಬಸನಗೌಡ ಆಸಂಗಿ ನಡುವೆ ಹಣಾಹಣಿ ಇದೆ.

ಮಾಜಿ ಇದ್ದವರು ಹಾಲಿಯಾಗಲು ಸಹಕಾರಿ:

ಡಿಸಿಸಿ ಬ್ಯಾಂಕ್‌ ಜಿಲ್ಲೆಯ ಘಟಾನುಘಟಿ ನಾಯಕರಿಗೆ ರಾಜಕೀಯ ನೆಲೆ ಕಲ್ಪಿಸಿಕೊಟ್ಟ ಹೆಗ್ಗಳಿಕೆ ಇದೆ. ನಿರ್ದೇಶಕರಾಗಿ ಆಯ್ಕೆ ಆದವರು ಮುಂದೆ ಶಾಸಕರಾಗಬಹುದು. ಮಾಜಿಗಳು ಮತ್ತೆ ಮುಂದೆ ಎಂಎಲ್ಎಗಳಾಗಿ ಆಗಿ ಆಯ್ಕೆ ಆಗಬಹುದು ಎಂಬ ಲೆಕ್ಕಾಚಾರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನದ ಅಭ್ಯರ್ಥಿಗಳದ್ದಾಗಿದೆ. ಜಿಲ್ಲೆಯಲ್ಲಿ ಅನೇಕ ರಾಜಕಾರಣಿಗಳು ಡಿಸಿಸಿ ಬ್ಯಾಂಕ್ ನಿರ್ದೇಶಕರಾಗಿ ಸಹಕಾರ ರಂಗದ ಮೂಲಕ ರಾಜಕೀಯಕ್ಕೆ ಪದಾರ್ಪಣೆ ಮಾಡಿದವರೇ ಹೆಚ್ಚು. ಬಳಿಕ ಶಾಸಕರು, ಸಂಸದರು, ಸಚಿವರು ಆಗಿದ್ದಾರೆ. ಆ ಶಕ್ತಿ ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಇದೆ. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಮೇಲೆಯೇ ಲಕ್ಷ್ಮಣ ಸವದಿ ಶಾಸಕ, ಸಚಿವ ಮತ್ತು ಉಪಮುಖ್ಯಮಂತ್ರಿಯಾಗಿದ್ದರು. ಅದೇ ರೀತಿ ಸತೀಶ್ ಜಾರಕಿಹೊಳಿ ಶಾಸಕ ಮತ್ತು ಸಚಿವ ಸ್ಥಾನ ಪಡೆದಿದ್ದಾರೆ. ಇನ್ನು ರಮೇಶ ಕತ್ತಿ, ಅಣ್ಣಾಸಾಹೇಬ ಜೊಲ್ಲೆ ಸಂಸದರಾಗಿದ್ದರು. ಮಹಾಂತೇಶ ದೊಡ್ಡಗೌಡರ, ಅರವಿಂದ ಪಾಟೀಲ, ಗಣೇಶ ಹುಕ್ಕೇರಿ ಸೇರಿ‌ ಮೊದಲಾದವರು ಶಾಸಕರಾಗಿದ್ದರು.

ಡಿಸಿಸಿ ಬ್ಯಾಂಕ್‌ನ ಇತಿಹಾಸ:

ಬೆಳಗಾವಿ ಡಿಸಿಸಿ ಬ್ಯಾಂಕ್‌ಗೆ ಶತಮಾನದ ಇತಿಹಾಸ ಇದೆ. ಲೇವಾದೇವಿದಾರರ ಕಪಿಮುಷ್ಠಿಯಿಂದ ಜಿಲ್ಲೆಯ ರೈತರನ್ನು ಮುಕ್ತಗೊಳಿಸಲು 106 ವರ್ಷಗಳ ಹಿಂದೆ ಸಹಕಾರಿ ಧುರೀಣರು ಸೇರಿಕೊಂಡು ಬೆಳಗಾವಿ ಡಿಸಿಸಿ ಬ್ಯಾಂಕ್​ ಹುಟ್ಟುಹಾಕಿದ್ದರು. ಈಗ ಅದು ಹೆಮ್ಮರವಾಗಿ ಬೆಳೆದು ನಿಂತಿದ್ದು, ಲಕ್ಷಾಂತರ ಮಂದಿಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ನೆರವಾಗಿದೆ. 19ನೇ ಶತಮಾನದ ಆರಂಭದಲ್ಲಿ ಪ್ರಾರಂಭವಾದ ಸಹಕಾರಿ ಚಳವಳಿ ಬೆಳಗಾವಿ ಜಿಲ್ಲೆಗೂ ಕಾಲಿಟ್ಟಿತ್ತು. 1918ರ ಸುಮಾರಿಗೆ ಜಿಲ್ಲೆಯಲ್ಲಿ 103 ಸಹಕಾರಿ ಸಂಘಗಳು ನೋಂದಾಯಿಸಲ್ಪಟ್ಟಿದ್ದು, ಇದೇ ಹೊತ್ತಿಗೆ ಈ ಭಾಗದ ವಿಭಾಗೀಯ ಗೌರವ ಸಂಘಟಕರಾಗಿದ್ದ ರಾಯ್‌ ಬಹದ್ದೂರ ಆರ್.ಜಿ‌.ನಾಯಿಕ ಅವರು ಬೆಳಗಾವಿ ಜಿಲ್ಲೆಯಲ್ಲೂ ಒಂದು ಮಧ್ಯವರ್ತಿ ಸಹಕಾರಿ‌ ಬ್ಯಾಂಕ್ ಸ್ಥಾಪಿಸಬೇಕೆಂಬ ಮಹದಾಸೆ ಹೊಂದಿದ್ದರು. ಅಂದಿನ ಹಿರಿಯ ಸಹಕಾರಿ ಧುರೀಣರ ಮುಂದೆ ಈ‌ ವಿಚಾರವನ್ನು ಪ್ರಸ್ತಾಪಿಸಿದಾಗ ಒಮ್ಮತದ ನಿರ್ಧಾರ ಕೈಗೊಂಡರು. ಆ ವೇಳೆ ಲೇವಾದೇವಿದಾರರು, ಬಡ್ಡಿ ದಂಧೆಕೋರರ ಶೋಷಣೆ ಅಧಿಕವಾಗಿತ್ತು. ಇದಕ್ಕೆಲ್ಲ ಇತಿಶ್ರೀ ಹಾಡಲು ಆಗಿನ ಸಹಕಾರಿಗಳು ಮುಂದಾದರು.

ಆರ್.ಜಿ.ನಾಯಿಕ ಅವರೊಂದಿಗೆ ಸಹಕಾರಿಗಳಾದ ಚಿಕ್ಕೋಡಿಯ ಆರ್.ಬಿ.ಕುಲಕರ್ಣಿ,‌ ಕಲ್ಲೋಳದ ಎ.ಬಿ‌. ಕುಲಕರ್ಣಿ, ಠಾಕಳಿಯ ಆರ್.ಎಂ.ಪಾಟೀಲ, ಅಕ್ಕಿವಾಟದ ಎ.ಬಿ.ಪಾಟೀಲ‌ ಸೇರಿದಂತೆ ಮತ್ತಿತರರು ಬ್ಯಾಂಕ್ ಸ್ಥಾಪನೆಗೆ ನಿರ್ಧರಿಸಿ ಮುಂಬೈ ಪ್ರಾಂತದ ರಿಜಿಸ್ಟ್ರಾರ್​ ಅವರಿಗೆ ಪ್ರಸ್ತಾವನೆ ಸಲ್ಲಿಸಿದರು. ಅಲ್ಲಿ ಅಂಗೀಕಾರಗೊಂಡ ಹಿನ್ನೆಲೆಯಲ್ಲಿ ದಿ ಬೆಳಗಾವಿ ಡಿಸ್ಟ್ರಿಕ್ಟ್​ ಸೆಂಟ್ರಲ್ ಕೋ-ಆಪ್ ಬ್ಯಾಂಕ್ ಲಿ. ನೋಂದಾಯಿಸಲ್ಪಟ್ಟಿತ್ತು. ಫೆ.೧೦ರ, 1919ರಂದು ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಅಧಿಕೃತವಾಗಿ ಶುಭಾರಂಭ ಮಾಡಿತು. ಮೊದಲ ಅಧ್ಯಕ್ಷರಾಗಿ ಆರ್.ಬಿ.ಕುಲಕರ್ಣಿ ಅವರು ಆಯ್ಕೆಯಾಗಿದ್ದರು. ಆರಂಭದಲ್ಲಿ ಬೆಳಗಾವಿ ನಗರದ ಮಾರುತಿ ಗಲ್ಲಿಯಲ್ಲಿದ್ದ ಪಾಯೋನಿಯರ್ ಅರ್ಬನ್ ಸೊಸೈಟಿಯ ಕಟ್ಟಡದ ಒಂದು ಕೋಣೆಯಲ್ಲಿ ಬಾಡಿಗೆ ಪಡೆದು ಬ್ಯಾಂಕ್ ಕಾರ್ಯಾರಂಭ ಮಾಡಿತು. 1926ರಲ್ಲಿ ರಾಮದೇವ ಗಲ್ಲಿಯಲ್ಲಿ 7 ವರ್ಷ ಬಾಡಿಗೆ ಕಟ್ಟಡದಲ್ಲಿ, 1933ರಲ್ಲಿ ಬಾಂಧೂರ್​​ ಗಲ್ಲಿಯಲ್ಲಿ ಜಾಗ ಖರೀದಿಸಿ ಬ್ಯಾಂಕಿನ ಪ್ರಧಾನ ಕಚೇರಿಯ ಕಟ್ಟಡ ನಿರ್ಮಿಸಲಾಯಿತು.

ಕಚೇರಿಯನ್ನು ಅಂದಿನ ಮುಂಬೈ ಪ್ರಾಂತದ ಗವರ್ನರ್ ಆಗಿದ್ದ ಎಫ್.ಎಚ್.ಸಾಯಿಕ್ಸ್​ ಉದ್ಘಾಟಿಸಿದ್ದರು. ಅದೇ ಕಟ್ಟಡದಲ್ಲಿ 1969ರ ವರೆಗೆ ಬ್ಯಾಂಕ್ ಕಾರ್ಯನಿರ್ವಹಿಸಿತು. ಬ್ಯಾಂಕ್ ಬೆಳೆದಂತೆ ಇನ್ನೂ ದೊಡ್ಡ ಕೇಂದ್ರ ಕಚೇರಿ ಹೊಂದಬೇಕೆಂಬ ಉದ್ದೇಶದಿಂದ ಈಗಿನ ಹಳೆ ಪುಣೆ-ಬೆಂಗಳೂರು ಹೆದ್ದಾರಿ ಮೇಲೆ ಕೇಂದ್ರ ಬಸ್ ನಿಲ್ದಾಣದ ಹತ್ತಿರ ವಿಶಾಲವಾದ ಕಟ್ಟಡವನ್ನು ಖರೀದಿಸಿ ಪ್ರಧಾನ ಕಚೇರಿಗೆ ಯೋಗ್ಯ ಎನಿಸುವಂತೆ ಮಾರ್ಪಾಡು ಮಾಡಲಾಗಿತ್ತು. ಆ ಕಟ್ಟಡಕ್ಕೆ ಮುರಗೋಡದ ಮಹಾಂತ ಶಿವಯೋಗಿಗಳು ಚಾಲನೆ ನೀಡಿದ್ದರು. ಏ. 24 1969ರಂದು ಅಂದಿನ ಕೇಂದ್ರ ಸರ್ಕಾರದ ಸಹಕಾರ ಮತ್ತು ಗ್ರಾಮೀಣ ಇಲಾಖೆ ರಾಜ್ಯ ಸಚಿವರಾದ ಎಂ.ಎಸ್. ಗುರುಪಾದಸ್ವಾಮಿ ಉದ್ಘಾಟಿಸಿದ್ದರು. ಈಗ ಅದೇ ಜಾಗದಲ್ಲಿ ಐದು ಅಂತಸ್ತಿನ ಸುಸಜ್ಜಿತ ಕಟ್ಟಡ ತಲೆ ಎತ್ತಿದೆ‌. ಜಿಲ್ಲಾ ಮಧ್ಯವರ್ತಿ ಬ್ಯಾಂಕ್​ ಹೆಸರಿನಿಂದ ಕರೆಯುತ್ತಿದ್ದ ಈ ಬ್ಯಾಂಕ್ ಕರ್ನಾಟಕ ಸಹಕಾರ ಸಂಘಗಳ ಅಧಿನಿಯಮ 1959 ಕಾಯ್ದೆ ಜಾರಿಯಾದ ನಂತರ ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್​ ಎಂದು ಮರುನಾಮಕರಣಗೊಂಡಿತು.

Read More
Next Story