Caste Census | ಜಾತಿಗಣತಿ ವರದಿ ವಿರೋಧಿಸಿ ಮತ್ತೆ ಹೋರಾಟ; ಲಿಂಗಾಯತ, ಒಕ್ಕಲಿಗ ಸಮುದಾಯ ಸಿದ್ಧತೆ?

2015 ರಲ್ಲಿ ಸಿದ್ಧಪಡಿಸಿದ ಕಾಂತರಾಜ ನೇತೃತ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಈ ಮೊದಲಿನಿಂದಲೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿದ್ದು, ಈಗ ಮತ್ತೊಮ್ಮೆ ಪ್ರಬಲ ಹೋರಾಟಕ್ಕಿಳಿಯಲು ಸಜ್ಜಾಗಿವೆ.;

Update: 2025-04-11 08:19 GMT

ತೀವ್ರ ಕುತೂಹಲ ಮೂಡಿಸಿದ್ದ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷಾ ವರದಿಯನ್ನು ರಾಜ್ಯ ಸಚಿವ ಸಂಪುಟದ ಮುಂದೆ ಮಂಡಿಸಲಾಗಿದೆ. ಜಾತಿಗಣತಿ ವರದಿ ಎಂದೇ ಪರಿಗಣಿಸಿರುವ ವರದಿ ಈಗ ಮತ್ತೊಮ್ಮೆ ರಾಜ್ಯದಲ್ಲಿ ಜಾತಿಗಳ ಮಧ್ಯೆ ಕಿಚ್ಚು ಹೊತ್ತಿಸಲು ಸಜ್ಜಾಗಿದೆ.

2015 ರಲ್ಲಿ ಸಿದ್ಧಪಡಿಸಿದ ಕಾಂತರಾಜ ನೇತೃತ್ವದ ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಈ ಮೊದಲಿನಿಂದಲೂ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯ ವಿರೋಧ ವ್ಯಕ್ತಪಡಿಸುತ್ತಿದ್ದು, ಈಗ ಮತ್ತೊಮ್ಮೆ ಪ್ರಬಲ ಹೋರಾಟಕ್ಕಿಳಿಯಲು ಸಜ್ಜಾಗಿವೆ.

ಸಂಪುಟದ ಮುಂದೆ ಜಾತಿವಾರು ಜನಗಣತಿ ವರದಿ ಮಂಡನೆಯಾಗಿ, ಅಲ್ಲಿ ನಡೆಯುವ ಚರ್ಚೆಗಳನ್ನು ಆಧರಿಸಿ ಸಿಡಿದೇಳಲು ಎರಡೂ ಸಮುದಾಯಗಳು ನಿರ್ಧರಿಸಿವೆ.

ಜನಗಣತಿ ವರದಿ ಮಂಡನೆ ಹಿನ್ನೆಲೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದ ಸಂಘದ ಪ್ರಮುಖರು ಸಮಾಲೋಚನೆ ನಡೆಸಿದ್ದು, ಮುಂದಿನ ಹೋರಾಟದ ರೂಪುರೇಷಗಳ ಕುರಿತು ಅನೌಪಚಾರಿಕ ಚರ್ಚೆ ನಡೆಸಿದ್ದಾರೆ.

ಎರಡೂ ಸಮುದಾಯಗಳು ಒಟ್ಟಾಗಿ ಹೋರಾಟಕ್ಕಿಳಿಯಲು ನಿರ್ಧರಿಸಿದ್ದು, ವರದಿಯ ಅಂಕಿ ಅಂಶಗಳು ಬಹಿರಂಗವಾಗುತ್ತಿದ್ದಂತೆ ಸಿಡಿದೇಳಲು ಯೋಜನೆ ರೂಪಿಸಿವೆ.

ಹೋರಾಟದ ಪ್ಲಾನ್ ಹೇಗಿರಲಿದೆ?

ಒಕ್ಕಲಿಗ ಹಾಗೂ ಲಿಂಗಾಯತ ಸಮುದಾಯ ಜಂಟಿ ಹೋರಾಟಕ್ಕೆ ನಿರ್ಧರಿಸಿ, ಸಮುದಾಯದ ಪ್ರಮುಖರು ಜಂಟಿ ಸಭೆ ನಡೆಸಿದ್ದಾರೆ. ಆ ಮೂಲಕ ಜಾತಿಗಣತಿ ವರದಿಗೆ ಪ್ರತಿರೋಧ ವ್ಯಕ್ತಪಡಿಸಿದ್ದಾರೆ.

ಸಭೆಯ ಬಳಿಕ ಎರಡು ಸಮುದಾಯದ ಸ್ವಾಮೀಜಿಗಳು ಹಾಗೂ ಪಕ್ಷಾತೀತವಾಗಿ ರಾಜಕೀಯ ನಾಯಕರನ್ನು ಭೇಟಿ ಮಾಡಲು ಉದ್ದೇಶಿಸಲಾಗಿದೆ. ಇದೆಲ್ಲದ ಬಳಿಕ ಮತ್ತೊಮ್ಮೆ ಜಂಟಿಯಾಗಿ ಸಭೆ ನಡೆಸಿ ಮುಂದಿನ ಹೋರಾಟದ ಬಗ್ಗೆ ಚರ್ಚಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂಕಿ ಅಂಶ ಬಿಡುಗಡೆ ಸಾಧ್ಯತೆ ಕಡಿಮೆ

ಜಾತಿ ಜನಗಣತಿ ವರದಿಯನ್ನು ಸಚಿವ ಸಂಪುಟ ಸಭೆಯಲ್ಲಿ ಸ್ವೀಕರಿಸುವುದಕ್ಕಷ್ಟೇ ಸೀಮಿತಗೊಳಿಸಿದ್ದು, ಅಂಕಿ ಅಂಶಗಳನ್ನು ಬಿಡುಗಡೆ ಮಾಡುವ ಸಾಧ್ಯತೆ ಕಡಿಮೆ ಇದೆ ಎಂದು ಮೂಲಗಳು ತಿಳಿಸಿವೆ.

ಸಂಪುಟ ಸಭೆಯಲ್ಲಿ ಯಾವುದೇ ಅಂಕಿ ಅಂಶ ಬಿಡುಗಡೆ ಮಾಡದಿರಲು ತೀರ್ಮಾನಿಸಲಾಗಿದೆ. ಸಚಿವ ಸಂಪುಟ ಉಪ ಸಮಿತಿ ರಚನೆ ಮಾಡಿ, ಅದು ನೀಡುವ ಶಿಫಾರಸುಗಳ ಬಳಿಕ ಅಂಕಿ ಅಂಶ ಬಿಡುಗಡೆ ಮಾಡುವ ಬಗ್ಗೆ ತೀರ್ಮಾನಿಸುವ ಸಾಧ್ಯತೆ ಇದೆ ಎನ್ನಲಾಗಿದೆ.

Tags:    

Similar News