Union Budget 2025 | ಪ್ರತಿ ಜಿಲ್ಲಾಸ್ಪತ್ರೆಯಲ್ಲಿ ಕ್ಯಾನ್ಸರ್ ಕೇಂದ್ರ; ರೋಗಿಗಳಿಗೆ ಕೇಂದ್ರದ ಅಭಯ
Union Budget 2025: 2025-26 ನೇ ಸಾಲಿನ ಬಜೆಟ್‌ನಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ತೆರೆಯುವುದಾಗಿ ಘೋಷಿಸಿದೆ.;
ಕ್ಯಾನ್ಸರ್ ವಿರುದ್ಧ ಹೋರಾಡುವವರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ, ಪ್ರತಿ ಜಿಲ್ಲಾಆಸ್ಪತ್ರೆಯಲ್ಲಿ ʼಡೇ ಕೇರ್ ಕ್ಯಾನ್ಸರ್ ಕೇಂದ್ರʼ ಸ್ಥಾಪಿಸಲು ಬಜೆಟ್‌ನಲ್ಲಿ ಪ್ರಕಟಿಸಲಾಗಿದೆ.
2024-25ರಲ್ಲಿ ದೇಶಾದ್ಯಂತ ಒಟ್ಟು 14.1ಲಕ್ಷ ಕ್ಯಾನ್ಸರ್ ಪ್ರಕರಣಗಳು ದಾಖಲಾಗಿರುವ ಕುರಿತು ʼವಿಶ್ವ ಆರೋಗ್ಯ ಸಂಸ್ಥೆʼ ವರದಿ ಬಿಡುಗಡೆ ಮಾಡಿತ್ತು. ಪ್ರತಿ ವರ್ಷ 9.1 ಲಕ್ಷ ಜನರು ಕ್ಯಾನ್ಸರ್ ಕಾಯಿಲೆಯಿಂದ ಮೃತಪಡುತ್ತಿದ್ದಾರೆ ಎಂಬ ವರದಿ ಬಹಿರಂಗಪಡಿಸಿತ್ತು.ಇದರಿಂದ ಎಚ್ಚೆತ್ತುಕೊಂಡಿರುವ ಕೇಂದ್ರ ಸರ್ಕಾರ 2025-26 ನೇ ಸಾಲಿನ ಬಜೆಟ್‌ನಲ್ಲಿ ಪ್ರತಿ ಜಿಲ್ಲಾ ಆಸ್ಪತ್ರೆಗಳಲ್ಲಿ ಡೇ ಕೇರ್ ಕ್ಯಾನ್ಸರ್ ಕೇಂದ್ರ ತೆರೆಯುವುದಾಗಿ ಘೋಷಿಸಿದೆ.
2025-26 ನೇ ಆರ್ಥಿಕ ವರ್ಷದಲ್ಲಿ 200 ಕೇಂದ್ರಗಳನ್ನು ʼಡೇ ಕೇರ್ ಕ್ಯಾನ್ಸರ್ ಕೇಂದ್ರʼಗಳನ್ನು ಸ್ಥಾಪಿಸಲು ಯೋಜಿಸಿದೆ. ಮುಂದಿನ ಮೂರು ವರ್ಷಗಳಲ್ಲಿ ದೇಶದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಕೇಂದ್ರಗಳನ್ನು ತೆರೆಯಲಾಗುವುದು ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ.
ಕ್ಯಾನ್ಸರ್ ಕೇಂದ್ರಗಳಲ್ಲಿ ಸಿಗುವ ಸೌಲಭ್ಯವೇನು?
ಡೇ ಕೇರ್ ಕ್ಯಾನ್ಸರ್ ಕೇಂದ್ರಗಳು ಹೊರರೋಗಿಗಳಿಗೆ ಮೀಸಲಾಗಿದೆ. ಈ ಕೇಂದ್ರಗಳಲ್ಲಿ ಕೀಮೋಥೆರಪಿ, ಇನ್ಫ್ಯೂಷನ್ ಥೆರಪಿ, ನೋವು ನಿರ್ವಹಣೆ ಹಾಗೂ ಪೌಷ್ಟಿಕಾಂಶದ ಸಮಾಲೋಚನೆಯ ಸೌಲಭ್ಯ ದೊರೆಯಲಿದೆ. ಖಾಸಗಿ ಆಸ್ಪತ್ರೆಗಳಿಗೆ ಹೋಲಿಸಿದರೆ ಡೇ ಕೇರ್ ಕ್ಯಾನ್ಸರ್ ಕೇಂದ್ರಗಳಲ್ಲಿ ಕ್ಯಾನ್ಸರ್ ಪೀಡಿತರಿಗೆ ಆರಾಮದಾಯಕ ವಾತಾವರಣ ಇರಲಿದೆ. ವೈದ್ಯರು ರೋಗಿಗಳಲ್ಲಿರುವ ಆತಂಕವನ್ನು ಕಡಿಮೆ ಮಾಡಿ, ಚಿಕಿತ್ಸೆ ನೀಡಲಿದ್ದಾರೆ.
ಭಾರತದಲ್ಲಿ ಅತಿ ಹೆಚ್ಚು ಸ್ತನ, ಗರ್ಭಕೋಶ, ಶ್ವಾಸಕೋಶದ ಕ್ಯಾನ್ಸರ್ ಪ್ರಕರಣಗಳು ಹೆಚ್ಚು ಕಂಡು ಬಂದಿವೆ.
ತಗ್ಗಲಿದೆ ಕ್ಯಾನ್ಸರ್ ಚಿಕಿತ್ಸಾ ವೆಚ್ಚ
ಡೇಕೇರ್ ಕ್ಯಾನ್ಸರ್ ಕೇಂದ್ರಗಳಲ್ಲಿ ಅಗ್ಗದ ದರದಲ್ಲಿ ಚಿಕಿತ್ಸೆ ದೊರೆಯಲಿದೆ. ಆರ್ಥಿಕವಾಗಿ ಸಂಕಷ್ಟದಲ್ಲಿರುವ ರೋಗಿಗಳ ಕುಟುಂಬಗಳಿಗೆ ಇದರಿಂದ ನೆರವಾಗಲಿದೆ. ಇದಲ್ಲದೇ ಕ್ಯಾನ್ಸರ್ ಸೇರಿದಂತೆ ಪ್ರಮುಖ ಔಷಧಗಳ ಮೇಲಿನ ಆಮದು ಸುಂಕಕ್ಕೆ ವಿನಾಯಿತಿ ನೀಡಲಾಗಿದೆ. ಕ್ಯಾನ್ಸರ್ ಹಾಗೂ ಇತರೆ ಅಪರೂಪದ ಕಾಯಿಲೆಗಳಿಗೆ ಸಂಬಂಧಿಸಿದ 30 ಔಷಧಗಳಿಗೆ ಆಮದು ಮೇಲಿನ ಅಬಕಾರಿ ಸುಂಕ ವಿನಾಯಿತಿ ಘೋಷಣೆ ಮಾಡಲಾಗಿದೆ. ಇದರಿಂದ ಕ್ಯಾನ್ಸರ್ ಚಿಕಿತ್ಸೆ ಅಗ್ಗವಾಗಲಿದೆ ಎಂದು ತಿಳಿದು ಬಂದಿದೆ.