CAFE BLAST | ಶೋಭಾ ಕರಂದ್ಲಾಜೆ ಹೇಳಿಕೆಗೆ ಸ್ಟಾಲಿನ್‌ ಖಂಡನೆ; ಕ್ಷಮೆ ಯಾಚಿಸಿದ ಕೇಂದ್ರ ಸಚಿವೆ

“ತಮಿಳುನಾಡಿನ ವ್ಯಕ್ತಿಯೊಬ್ಬ, ಅಲ್ಲಿ ತರಬೇತಿ ಪಡೆದುಕೊಂಡುಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದ" ಎಂಬ ಶೋಭಾ ಕರಂದ್ಲಾಜೆ ಹೇಳಿಕೆ ವಿವಾದಕ್ಕೀಡಾಗಿತ್ತು.;

Update: 2024-03-20 06:56 GMT

ರಾಮೇಶ್ವರಂ ಕೆಫೆ ಸ್ಫೋಟ ಘಟನೆಗೆ ಸಂಬಂಧಿಸಿದಂತೆ "ತಮಿಳುನಾಡು ಮೂಲದಿಂದ ಬಂದವನೇ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ" ಎಂಬ ತಮ್ಮ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಸೇರಿದಂತೆ ಹಲವರು ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಕೇಂದ್ರ ಸಚಿವೆ ಹಾಗೂ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ, ತಮ್ಮ ವಿವಾದಾತ್ಮಕ ಹೇಳಿಕೆಯನ್ನು ವಾಪಸ್ ಪಡೆದಿದ್ದಾರೆ.

ಮಂಗಳವಾರ ಬೆಳಿಗ್ಗೆ “ತಮಿಳುನಾಡಿನ ವ್ಯಕ್ತಿಯೊಬ್ಬ, ಅಲ್ಲಿ ತರಬೇತಿ ಪಡೆದುಕೊಂಡುಬಂದು ಕೆಫೆಯಲ್ಲಿ ಬಾಂಬ್ ಇಟ್ಟಿದ್ದ, ದೆಹಲಿಯಿಂದ ಬಂದವನೊಬ್ಬ ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗಿದ್ದ. ಕೇರಳದಿಂದ ಬಂದ ವ್ಯಕ್ತಿಯೊಬ್ಬ ವಿದ್ಯಾರ್ಥಿಗಳ ಮೇಲೆ ಆಸಿಡ್ ಎರಚಿದ್ದ” ಎಂದು ಹೇಳಿಕೆ ನೀಡಿದ್ದರು.

ನಗರತ್ ಪೇಟೆಯಲ್ಲಿ ಲೌಡ್ ಸ್ಪೀಕರ್ ವಿಷಯದಲ್ಲಿ ಬಿಜೆಪಿ ನಡೆಸಿದ ಪ್ರತಿಭಟನಾ ರ್ಯಾಲಿಯ ವೇಳೆ ಶೋಭಾ ಕರಂದ್ಲಾಜೆ ಅವರು ಈ ಹೇಳಿಕೆ ನೀಡಿದ್ದರು.

ಅವರ ಈ ಹೇಳಿಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಪ್ರಕರಣದ ತನಿಖೆ ಇನ್ನೂ ನಡೆಯುತ್ತಿರುವಾಗ, ಕೇಂದ್ರ ಸಚಿವೆಯಾಗಿ ಶೋಭಾ ಅವರು ಯಾವ ಆಧಾರದ ಮೇಲೆ ಕೆಫೆಯಲ್ಲಿ ಬಾಂಬ್ ಇಟ್ಟವನು ತಮಿಳುನಾಡಿನವನು ಎಂದು ಹೇಳುತ್ತಾರೆ? ತಮಿಳರು ಮತ್ತು ಕನ್ನಡಿಗರ ನಡುವೆ ವೈಷಮ್ಯ ಬಿತ್ತುವ ಇಂತಹ ಹೇಳಿಕೆ ಸರಿಯೇ? ಎಂಬ ಚರ್ಚೆಗಳಿಗೂ ಈ ಹೇಳಿಕೆ ಆಸ್ಪದ ನೀಡಿತ್ತು.

ಆ ಹಿನ್ನೆಲೆಯಲ್ಲಿ ತಮ್ಮ ʼಎಕ್ಸ್ʼ ಖಾತೆಯಲ್ಲಿ ಪ್ರತಿಕ್ರಿಯಿಸಿದ್ದ ತಮಿಳುನಾಡು ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್, “ಇದೊಂದು ಬೇಜವಾಬ್ದಾರಿಯ ಹೇಳಿಕೆ. ಪ್ರಕರಣದ ತನಿಖೆ ನಡೆಸುತ್ತಿರುವ ಎನ್ ಐಎ ಅಥವಾ ಪ್ರಕರಣದ ತನಿಖೆಗೆ ಸಂಬಂಧಿಸಿದ ವ್ಯಕ್ತಿಗಳು ಮಾತ್ರ ಇಂತಹ ಹೇಳಿಕೆ ನೀಡಬಹುದು. ಇಂತಹ ಹೇಳಿಕೆ ನೀಡಲು ಇವರಿಗೆ ಯಾವ ಅಧಿಕಾರವೂ ಇಲ್ಲ. ತಮಿಳರು ಮತ್ತು ಕನ್ನಡಿಗರು ಬಿಜೆಪಿಯ ಇಂತಹ ವಿಭಜನೆಯ ಹೇಳಿಕೆಯನ್ನು ತಿರಸ್ಕರಿಸುತ್ತಾರೆ. ಶಾಂತಿ, ಸೌಹಾರ್ದತೆ ಮತ್ತು ರಾಷ್ಟ್ರೀಯ ಐಕ್ಯತೆಗೆ ಧಕ್ಕೆ ತರುವ ಹೇಳಿಕೆ ನೀಡಿರುವ ಶೋಭಾ ಕರಂದ್ಲಾಜೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸುತ್ತೇನೆ” ಎಂದು ಕಿಡಿ ಕಾರಿದ್ದರು.

ತಮಿಳುನಾಡು ಪ್ರತಿಪಕ್ಷ ನಾಯಕ ಎಡಪ್ಪಾಡಿ ಪಳನಿಸ್ವಾಮಿ ಕೂಡ ಶೋಭಾ ಕರಂದ್ಲಾಜೆ ಅವರ ಈ ಹೇಳಿಕೆಯನ್ನು ಖಂಡಿಸಿ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ಹಿನ್ನೆಲೆಯಲ್ಲಿ ಶೋಭಾ ವಿರುದ್ಧ ಚುನಾವಣಾ ಆಯೋಗ ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದರು.

ತಮ್ಮ ಹೇಳಿಕೆಗೆ ವ್ಯಾಪಕ ಟೀಕೆ ಭುಗಿಲೇಳುತ್ತಿದ್ದಂತೆ ಎಚ್ಚೆತ್ತುಕೊಂಡು ಕೇಂದ್ರ ಸಚಿವೆ, ತಮ್ಮ ಎಕ್ಸ್ ಖಾತೆಯಲ್ಲಿ ಹೇಳಿಕೆಯ ಕುರಿತು ಕ್ಷಮೆ ಯಾಚಿಸಿರುವುದೇ ಅಲ್ಲದೆ, ಆ ಹೇಳಿಕೆಯನ್ನು ಹಿಂತೆಗೆದುಕೊಳ್ಳುವುದಾಗಿಯೂ ಹೇಳಿದ್ದಾರೆ.

“ನನ್ನ ಮಾತುಗಳು ಪ್ರಕರಣದ ಬಗ್ಗೆ ಬೆಳಕು ಚೆಲ್ಲುವ ಉದ್ದೇಶದಿಂದ ಕೂಡಿದ್ದವೇ ವಿನಃ ಆರೋಪ ಹೊರಿಸುವ ಆಶಯವಿರಲಿಲ್ಲ ಎಂದು ಸ್ಪಷ್ಟಪಡಿಸುತ್ತೇನೆ. ಆದರೂ ನನ್ನ ಮಾತುಗಳು ಕೆಲವರಿಗೆ ನೋವು ತಂದಿವೆ ಎಂಬುದನ್ನು ಗಮನಿಸಿದ್ದೇನೆ. ಅದಕ್ಕಾಗಿ ನಾನು ಕ್ಷಮೆ ಯಾಚಿಸುತ್ತೇನೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೆ ಸಂಬಂಧಿಸಿ ಕೃಷ್ಣಗಿರಿಯಲ್ಲಿ ತರಬೇತಿ ಪಡೆದವರ ಕುರಿತು ನನ್ನ ಹೇಳಿಕೆ ಇತ್ತು. ತಮಿಳುನಾಡಿನ ಎಲ್ಲರಿಗೂ ನಾನು ಹೃದಯಪೂರ್ವಕ ಕ್ಷಮೆ ಯಾಚಿಸುತ್ತೇನೆ. ಅಲ್ಲದೆ ನಾನು ನನ್ನ ಮಾತುಗಳನ್ನು ಹಿಂತೆಗೆದುಕೊಳ್ಳುತ್ತೇನೆ” ಎಂದು ಶೋಭಾ ಎಕ್ಸ್ ನಲ್ಲಿ ಹೇಳಿಕೊಂಡಿದ್ದಾರೆ.

ಮಾ,1ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಲಾಗಿತ್ತು. ಘಟನೆಯಲ್ಲಿ ಹಲವರು ಗಾಯಗೊಂಡಿದ್ದರು. ಪ್ರರಕಣಕ್ಕೆ ಸಂಬಂಧಿಸಿದಂತೆ ಹಲವು ಶಂಕಿತರನ್ನು ವಿಚಾರಣೆ ನಡೆಸಲಾಗುತ್ತಿದೆ. ಆದರೆ, ಪ್ರಕರಣದ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು, ತನಿಖೆ ನಡೆಸುತ್ತಿರುವ ಎನ್ ಐಎ, ಆರೋಪಿಯ ಪತ್ತೆಗೆ ಹತ್ತು ಲಕ್ಷ ರೂ ಬಹುಮಾನ ಘೋಷಿಸಿದೆ.

Tags:    

Similar News