Cabinet Reshuffle | ಸಂಪುಟ ವರ್ಸಸ್‌ ಕೆಪಿಸಿಸಿ ಗಾದಿ: ಸಿಎಂ- ಡಿಸಿಎಂ ನಡುವಿನ ಹೊಸ ಲೆಕ್ಕಾಚಾರವೇನು?

Cabinet Reshuffle: ಸಂಪುಟ ಪುನರ್‌ ರಚನೆ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ವಿಷಯದಲ್ಲಿ ಇದ್ದಕ್ಕಿದ್ದಂತೆ ಗದ್ದಲ ಸದ್ದಡಗಿದೆ. ಹಾಗಾದರೆ ನಾಯಕರ ನಡುವೆ ಏನು ನಡೆಯಿತು?;

Update: 2025-02-07 01:30 GMT

ರಾಜ್ಯ ಸಚಿವ ಸಂಪುಟ ಪುನರ್ ರಚನೆ ವಿಷಯ ಮತ್ತೆ ಸಾರ್ವಜನಿಕ ಚರ್ಚೆಯ ಹಿನ್ನೆಲೆಗೆ ಸರಿದಿದೆ. ಈ ನಡುವೆ ಕೆಲವು ಬೆಳವಣಿಗೆಗಳು ಸಚಿವ ಸ್ಥಾನ ಆಕಾಂಕ್ಷಿಗಳ ನಿರೀಕ್ಷೆಗಳನ್ನು ಹುಸಿ ಮಾಡುವ ಸೂಚನೆ ನೀಡಿವೆ.

ಬೆಳಗಾವಿಯಲ್ಲಿ ನಡೆದ ಎಐಸಿಸಿ ಕಾರ್ಯಕಾರಿಣಿ ಮತ್ತು ಗಾಂಧಿ ಭಾರತ ಕಾರ್ಯಕ್ರಮದ ಆಸುಪಾಸಿನಲ್ಲಿ ಸಚಿವ ಸಂಪುಟ ಪುನರ್ ರಚನೆ ಮತ್ತು ಕರ್ನಾಟಕ ಪ್ರದೇಶ ಕಾಂಗ್ರೆಸ್(ಕೆಪಿಸಿಸಿ) ಅಧ್ಯಕ್ಷರ ಬದಲಾವಣೆಯ ವಿಷಯಗಳ ವ್ಯಾಪಕ ಸದ್ದು ಮಾಡಿದ್ದವು. ಒಂದು ಕಡೆ ಸರ್ಕಾರದ ಹಿರಿಯ ಸಚಿವರು, ಸಚಿವ ಸ್ಥಾನ ಆಕಾಂಕ್ಷಿ ಹಿರಿಯ ಶಾಸಕರು, ಮತ್ತೊಂದು ಕಡೆ ಕೆಪಿಸಿಸಿ ಅಧ್ಯಕ್ಷ ಗಾದಿಯ ಮೇಲೆ ಕಣ್ಣಿಟ್ಟ ಹಿರಿಯ ಮುಖಂಡರು ಬಹಿರಂಗ ಹೇಳಿಕೆಗಳ ಮೂಲಕ ಭಾರೀ ಚರ್ಚೆಗೆ ನಾಂದಿ ಹಾಡಿದ್ದರು.

ಅದರ ಬೆನ್ನಲ್ಲೇ ಹಿರಿಯ ಸಚಿವರ ಡಿನ್ನರ್ ಪಾಲಿಟಿಕ್ಸ್ ಮತ್ತು ದೆಹಲಿ ಯಾತ್ರೆಗಳು ಕೂಡ ಸಂಪುಟ ಮತ್ತು ಕೆಪಿಸಿಸಿ ಅಧ್ಯಕ್ಷರ ಕುರ್ಚಿಯ ವಿಷಯದಲ್ಲಿ ಸದ್ಯದಲ್ಲೇ ಮಹತ್ತರ ಬದಲಾವಣೆಗಳಾಗಲಿವೆ ಎಂಬ ಸೂಚನೆಗಳನ್ನು ನೀಡಿದ್ದವು.

ಆದರೆ, ಪಕ್ಷದ ಆಂತರಿಕ ವಿಷಯಗಳು ಮಾಧ್ಯಮಗಳ ಚರ್ಚೆಯ ಮೂಲಕ ಬಹಿರಂಗವಾಗುತ್ತಿರುವುದು ಮತ್ತು ಪಕ್ಷ ಮತ್ತು ಸರ್ಕಾರಕ್ಕೆ ಸಾರ್ವಜನಿಕ ಮುಜುಗರಕ್ಕೆ ಕಾರಣವಾಗುತ್ತಿರುವುದನ್ನು ಗಮನಿಸಿದ ಹೈಕಮಾಂಡ್, ಕೂಡಲೇ ಮಧ್ಯಪ್ರವೇಶಿಸಿ ʼಎಲ್ಲರೂ ಬಾಯಿಮುಚ್ಚಿಕೊಂಡು ಇರಬೇಕು, ನಾವು ಎಲ್ಲವನ್ನೂ ಗಮನಿಸುತ್ತಿದ್ದೇವೆ. ಯಾವಾಗ ಏನು ಮಾಡಬೇಕು ಎಂಬುದು ನನಗೆ ಗೊತ್ತಿದೆ. ನಿಮಗೆ ವಹಿಸಿರುವ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸಿʼ ಎಂದು ಖಡಕ್ ಸೂಚನೆ ನೀಡಿತ್ತು.

ಆ ಸೂಚನೆಯ ಬೆನ್ನಲ್ಲೇ ಬಹುತೇಕ ಬಹಿರಂಗ ಹೇಳಿಕೆ- ಪ್ರತಿ ಹೇಳಿಕೆಗಳು, ಡಿನ್ನರ್ ಪಾಲಿಟಿಕ್ಸ್, ದೆಹಲಿ ಯಾತ್ರೆಗಳಿಗೆ ಬ್ರೇಕ್ ಬಿದ್ದಿತ್ತು.

ಸಿಎಂ- ಡಿಸಿಎಂ ನಡುವೆ ಒಪ್ಪಂದ!

ಈ ನಡುವೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನಡುವಿನ ಮುಸುಕಿನ ಗುದ್ದಾಟಕ್ಕೂ ಹೈಕಮಾಂಡ್ ಬೆಳಗಾವಿ ಕಾರ್ಯಕಾರಿಣಿಯ ವೇಳೆ ಪ್ರತ್ಯೇಕ ಮಾತುಕತೆಯ ಮೂಲಕ ಮದ್ದು ಅರೆದಿದೆ. ಹಾಗಾಗಿ ಸದ್ಯಕ್ಕೆ ಇಬ್ಬರೂ ನಾಯಕರು ಪರಸ್ಪರ ಒಪ್ಪಂದಕ್ಕೆ ಬಂದಿದ್ದು, ಮುಂದಿನ ಮೇವರೆಗೆ, ಅಂದರೆ ಸರ್ಕಾರಕ್ಕೆ ಎರಡು ವರ್ಷ ಪೂರೈಸುವವರೆಗೆ ಸಚಿವ ಸಂಪುಟದಲ್ಲಿ ಯಾವುದೇ ಬದಲಾವಣೆ ಬೇಡ ಮತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ಕೂಡ ಇಲ್ಲ ಎಂದು ನಿರ್ಧರಿಸಿದ್ದಾರೆ. ಜೊತೆಗೆ ಉಭಯ ನಾಯಕರ ಬೆಂಬಲಿಗರಿಗೆ ಆ ಕುರಿತ ಯಾವುದೇ ಬಹಿರಂಗ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎನ್ನಲಾಗಿದೆ.

ಸಂಪುಟದ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ತಮ್ಮದೇ ಆದ ವಾದ ಮುಂದಿಟ್ಟಿದ್ದು, ಅಧಿಕಾರ ವಹಿಸಿಕೊಂಡು ಎರಡು ವರ್ಷ ಪೂರ್ಣಗೊಂಡ ಬಳಿಕ ಮೇನಲ್ಲಿ ಸಾಧನಾ ಸಮಾವೇಶ ಮಾಡಲಾಗುವುದು. ಆವರೆಗೆ ಈಗಿನ ತಮ್ಮ ಟೀಂ ಬದಲಾವಣೆ ಬೇಡ. ಆ ಸಮಾವೇಶಕ್ಕೆ ಮುನ್ನ ಸಚಿವರ ಸಾಧನೆ ಮತ್ತು ವೈಫಲ್ಯಗಳ ಮೌಲ್ಯಮಾಪನ ಮಾಡಿ ಯಾರನ್ನು ಕೈಬಿಡಬೇಕು, ಯಾರ ಖಾತೆ ಬದಲಾಯಿಸಬೇಕು, ಯಾರನ್ನು ಹೊಸದಾಗಿ ಸೇರಿಸಿಕೊಳ್ಳಬೇಕು ಎಂಬುದನ್ನು ನಿರ್ಧರಿಸೋಣ. ಆವರೆಗೆ ಸಂಪುಟ ವಿಸ್ತರಣೆ ಅಥವಾ ಪುನರ್ ರಚನೆಗೆ ಕೈಹಾಕಬಾರದು ಎಂದು ಹೈಕಮಾಂಡಿಗೆ ಮನವರಿಕೆ ಮಾಡಿದ್ದಾರೆ. ಆ ವಾದಕ್ಕೆ ಹೈಕಮಾಂಡ್ ನಾಯಕರು ಕೂಡ ಒಪ್ಪಿದ್ದಾರೆ ಎಂಬುದು ಕೆಪಿಸಿಸಿಯ ಉನ್ನತ ಮೂಲಗಳ ಮಾಹಿತಿ.

ಅದೇ ವೇಳೆ, ಡಿ ಕೆ ಶಿವಕುಮಾರ್ ಕೂಡ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಕುರಿತು ತಮ್ಮದೇ ವಾದ ಮುಂದಿಟ್ಟಿದ್ದು, ಬಿಬಿಎಂಪಿ ಮತ್ತು ಜಿಲ್ಲಾ ಹಾಗೂ ತಾಲೂಕು ಪಂಚಾಯ್ತಿ ಚುನಾವಣೆಗಳು ಸಮೀಪಿಸಿವೆ. ಪಕ್ಷವನ್ನು ತಳಮಟ್ಟದಲ್ಲಿ ಇನ್ನಷ್ಟು ಗಟ್ಟಿಗೊಳಿಸಲು ಈ ಚುನಾವಣೆಗಳು ನಿರ್ಣಾಯಕ. ಹಾಗಾಗಿ ಈ ಚುನಾವಣೆಗಳು ಮುಗಿಯುವವರೆಗೆ ಅಧ್ಯಕ್ಷ ಸ್ಥಾನದಲ್ಲಿ ತಮ್ಮನ್ನೇ ಮುಂದುವರಿಸಬೇಕು ಎಂದು ಹೇಳಿದ್ದಾರೆ. ಸಿಎಂ ಮತ್ತು ಡಿಸಿಎಂಗಳ ಪರಸ್ಪರ ಷರತ್ತುಗಳನ್ನು ಪಕ್ಷದ ಮತ್ತು ಸರ್ಕಾರದ ಹಿತದಿಂದಲೂ ಸರಿ ಎನಿಸಿದ ಹಿನ್ನೆಲೆಯಲ್ಲಿ ಹೈಕಮಾಂಡ್ ನಾಯಕರು ಆ ಒಪ್ಪಂದಕ್ಕೆ ಒಪ್ಪಿಗೆಯ ಮುದ್ರೆ ಒತ್ತಿದ್ದಾರೆ ಎನ್ನಲಾಗಿದೆ.

ಬದಲಾವಣೆ ಇಲ್ಲ ಎನ್ನುತ್ತಿವೆ ಬೆಳವಣಿಗೆ

ಈ ನಡುವೆ, ಅದಕ್ಕೆ ಪೂರಕವಾಗಿ ಸರ್ಕಾರದ ಮಟ್ಟದಲ್ಲಿ ಕೆಲವು ಬದಲಾವಣೆಗಳು ನಡೆಯುತ್ತಿದ್ದು, ಸದ್ಯಕ್ಕೆ ಸಂಪುಟ ಬದಲಾವಣೆ ಇಲ್ಲ ಎಂಬ ಸೂಚನೆಗಳನ್ನು ನೀಡುತ್ತಿವೆ. ಮೊದಲನೆಯದಾಗಿ ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬೊಬ್ಬರೇ ಪರ್ಯಾಯ ದಾರಿಗಳನ್ನು ಕಂಡುಕೊಳ್ಳತೊಡಗಿದ್ದಾರೆ.

ಕಳೆದ ವಾರ, ಸಚಿವ ಸ್ಥಾನದ ಪ್ರಬಲ ಆಕಾಂಕ್ಷಿಗಳಲ್ಲಿ ಒಬ್ಬರಾಗಿದ್ದ, ಹಲವು ಬಾರಿ ಆ ಬಗ್ಗೆ ಬಹಿರಂಗ ಹೇಳಿಕೆಗಳನ್ನು ನೀಡುವ ಮೂಲಕ ಪದೇಪದೆ ಸುದ್ದಿಯಾಗುತ್ತಿದ್ದ ಹಿರಿಯ ಶಾಸಕ ಬಿ ಆರ್ ಪಾಟೀಲ್ ಅವರು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ತಮ್ಮ ನಿರೀಕ್ಷೆಯಂತೆ ಸದ್ಯಕ್ಕೆ ಸಂಪುಟ ಬದಲಾವಣೆಯಾಗಲಾರದು ಎಂಬ ಹಿನ್ನೆಲೆಯಲ್ಲಿ ಅವರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.

ಅದೇ ರೀತಿ ಮತ್ತೊಬ್ಬ ಪ್ರಬಲ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಹಾಗೂ ಹಿರಿಯ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರನ್ನು ದಿಢೀರ್ ಬೆಳವಣಿಗೆಯಲ್ಲಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ(ಕೆಎಸ್ಪಿಸಿಬಿ) ಅಧ್ಯಕ್ಷರನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಆ ಮೂಲಕ ಅವರ ಸಚಿವ ಸ್ಥಾನದ ನಿರೀಕ್ಷೆ ಸದ್ಯಕ್ಕೆ ಫಲಿಸಲಾರದು ಎಂಬ ಸೂಚನೆಯನ್ನು ಸರ್ಕಾರವೇ ನೀಡಿದೆ!

ಏಳು ವರ್ಷ ಏಳು ತಿಂಗಳ ಟಾರ್ಗೆಟ್!

ಈ ನಡುವೆ ಇನ್ನೊಂದು ಕಡೆ; ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯವನ್ನು ಸುದೀರ್ಘ ಅವಧಿಗೆ ಆಳಿದ ನಾಯಕ ಎಂದು ಇತಿಹಾಸದಲ್ಲಿ ಉಳಿಯುವ ಲೆಕ್ಕಾಚಾರದಲ್ಲಿದ್ದಾರೆ. ಹಾಗಾಗಿ ಈವರೆಗೆ ಡಿ ದೇವರಾಜ ಅರಸು ಅವರ ಹೆಸರಿನಲ್ಲಿ ಇರುವ ಸುದೀರ್ಘ ಏಳು ವರ್ಷ ಏಳು ತಿಂಗಳ ಆಡಳಿತ ನಡೆಸಿದ ಸಿಎಂ ಎಂಬ ದಾಖಲೆಯನ್ನು ಮುರಿಯಲು ಕಾದಿದ್ದಾರೆ. ಅಂದರೆ; 2025ರ ಮೇನಲ್ಲಿ ಏಳು (ಹಿಂದಿನ ಐದು ವರ್ಷದ ಪೂರ್ಣಾವಧಿ ಸೇರಿ) ಪೂರೈಸುವ ಸಿದ್ದರಾಮಯ್ಯ, ಮುಂದಿನ ನವೆಂಬರ್ ವೇಳೆಗೆ ಏಳು ವರ್ಷ, ಏಳು ತಿಂಗಳ ಅಧಿಕಾರ ಪೂರೈಸಲಿದ್ದಾರೆ. ಹಾಗಾಗಿ ಬಹುತೇಕ ಮುಂದಿನ ವರ್ಷದ ಸಂಕ್ರಾಂತಿಯವರೆಗೆ ಅವರು ಮುಂದುವರಿಯುವ ಸಾಧ್ಯತೆಗಳೇ ಹೆಚ್ಚು ಎಂಬುದು ಅವರ ಆಪ್ತ ವಲಯದ ಚರ್ಚೆ.

ಒಟ್ಟಾರೆ, ಸದ್ಯಕ್ಕೆ ಸಂಪುಟ ಮತ್ತು ಕೆಪಿಸಿಸಿ ಅಧ್ಯಕ್ಷ ಗಾದಿಯ ವಿಷಯದಲ್ಲಿ ಯಥಾಸ್ಥಿತಿ ಮುಂದುವರಿಯುವ ಸೂಚನೆಗಳು ಸಿಗುತ್ತಿದ್ದಂತೆ ಆಕಾಂಕ್ಷಿಗಳು ಧ್ವನಿಗಳು ಸದ್ದಡಗಿವೆ ಮತ್ತು ಪರ್ಯಾಯ ಆಯ್ಕೆಗಳತ್ತ ಪ್ರಬಲ ಆಕಾಂಕ್ಷಿಗಳ ಚಿತ್ತ ಹರಿದಿದೆ ಎಂಬುದಕ್ಕೆ ಇತ್ತೀಚಿನ ಬೆಳವಣಿಗೆಗಳೇ ಸಾಕ್ಷಿ.

Tags:    

Similar News