ಉಪ ಚುನಾವಣೆ ಫಲಿತಾಂಶ ಜನಾದೇಶವಲ್ಲ: ಬಸವರಾಜ ಬೊಮ್ಮಾಯಿ

ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಪಕ್ಷದ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಸರ್ಕಾರದಿಂದ ಅಭಿವೃದ್ಧಿ ಕೆಲಸಗಳು ಸಂಪೂರ್ಣ ಸ್ಥಗಿತವಾಗಿವೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.;

Update: 2024-11-26 13:09 GMT

ರಾಜ್ಯದ ಮೂರು ಕ್ಷೇತ್ರಗಳ ಚುನಾವಣೆ ಫಲಿತಾಂಶವು ರಾಜ್ಯ ಸರ್ಕಾರಕ್ಕೆ ಮತದಾರರು ನೀಡಿದ ಜನಾದೇಶವಲ್ಲ. ಉಪ ಚುನಾವಣೆಗಳು ಸರ್ಕಾರದ ಪರವಾಗಿಯೇ ಇರುತ್ತವೆ. ಈ ಫಲಿತಾಂಶವನ್ನೇ ಸರ್ಕಾರದ ಪರ ಜನರ ತೀರ್ಪು ಎಂದು ಬಿಂಬಿಸಿಕೊಳ್ಳುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರಿಗೆ ಮಾಜಿ ಸಿಎಂ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ತಟಸ್ಥವಾಗಿದೆ. ಸರ್ಕಾರದ ಕಾರ್ಯವೈಖರಿಗೆ ಆಡಳಿತ ಪಕ್ಷದ ಶಾಸಕರೇ ಭ್ರಮನಿರಸನಗೊಂಡಿದ್ದಾರೆ. ಗ್ಯಾರೆಂಟಿ ಯೋಜನೆಗಳನ್ನು ಸ್ಥಗಿತಗೊಳಿಸುವ ಬಗ್ಗೆ ಆಡಳಿತ ಪಕ್ಷದ ಶಾಸಕರೇ ಪಕ್ಷದ ವೇದಿಕೆಗಳಲ್ಲಿ ಹೇಳುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದು ಲಕ್ಷ ಕೋಟಿಗಿಂತಲೂ ಹೆಚ್ಚು ಸಾಲ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ಭಿನ್ನಮತದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷದಲ್ಲಿ ಯಾವುದೇ ಭಿನ್ನಮತವಿಲ್ಲ. ಎಲ್ಲರೂ ಬಿಜೆಪಿ ಪರವಿದ್ದಾರೆ. ಕೆಲವು ವಿಚಾರಗಳಲ್ಲಿ ಭಿನ್ನಾಭಿಭಿಪ್ರಾಯಗಳಿವೆ. ಒಂದು ತಿಂಗಳಲ್ಲಿ ಎಲ್ಲವೂ ಸರಿಯಾಗುವ ವಿಶ್ವಾಸವಿದೆ ಎಂದು ತಿಳಿಸಿದ್ದಾರೆ.

ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್ ಆರ್ ಗವಿಯಪ್ಪ ಗ್ಯಾರಂಟಿ ಯೋಜನೆಗಳ ಕುರಿತು ಆಕ್ರೋಶ ವ್ಯಕ್ತಪಡಿಸಿ, ಈ ಯೋಜನೆಗಳಿಂದಾಗಿ ಕ್ಷೇತ್ರದ ಅಭಿವೃದ್ಧಿ ಅನುದಾನಕ್ಕೆ ಕತ್ತರಿ ಬಿದ್ದಿದೆ ಎಂದು ಹೇಳಿದ್ದರು.

“ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಎರಡನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡುತ್ತೇನೆ” ಎಂದು ಹೇಳಿರುವ ಅವರು, “ಗ್ಯಾರಂಟಿಗಳಿಂದ ಆಶ್ರಯ ಮನೆಗಳು ಬರುತ್ತಿಲ್ಲ. ಶಕ್ತಿ ಯೋಜನೆ ಸೇರಿದಂತೆ ಗ್ಯಾರಂಟಿಗಳನ್ನು ಕಡಿತ ಮಾಡಲು ಮುಖ್ಯಮಂತ್ರಿಗಳಿಗೆ ಹೇಳುತ್ತೇವೆ. ಅವರೇನು ತೀರ್ಮಾನ ಮಾಡುತ್ತಾರೆ ನೋಡೋಣ” ಎಂದು ಹೇಳಿಕೆ ನೀಡಿದ್ದರು.

ಆ ಮೂಲಕ ಗ್ಯಾರಂಟಿ ಯೋಜನೆಗಳಿಂದಾಗಿ ತಮಗೆ ಬರಬೇಕಿದ್ದ ಕ್ಷೇತ್ರಾಭಿವೃದ್ಧಿ ಅನುದಾನ ಬರುತ್ತಿಲ್ಲ ಎಂಬ ಅಸಮಾಧಾನವನ್ನು ಅವರು ತೋಡಿಕೊಂಡಿದ್ದಾರೆ. ಅಲ್ಲದೆ, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರದಿಂದ ಯಾವುದೇ ಅನುದಾನ ಬಂದಿಲ್ಲ ಎಂದೂ ಈ ಮೊದಲು ಹೇಳಿದ್ದ ಅವರು, ಇದೀಗ ಅನುದಾನ ಬರದೇ ಇರೋದಕ್ಕೆ ಗ್ಯಾರಂಟಿ ಯೋಜನೆಗಳೇ ಕಾರಣ ಎಂದೂ ಹೇಳಿದ್ದರು. ಆ ಹೇಳಿಕೆಗಳ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿರುವ ಮಾಜಿ ಮುಖ್ಯಮಂತ್ರಿ ಬೊಮ್ಮಾಯಿ, ಗ್ಯಾರಂಟಿ ಯೋಜನೆಗಳ ವಿರುದ್ಧದ ಆಡಳಿತ ಪಕ್ಷದ ಶಾಸಕರ ಹೇಳಿಕೆಗಳನ್ನೇ ಉಲ್ಲೇಖಿಸಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

Tags:    

Similar News