Karnataka By-Election | ಅಭಿವೃದ್ಧಿ ಮರೆತು ಆಡಿಯೊ ಸಮರಕ್ಕಿಳಿದ ನಾಯಕರು

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿ ಪರವಾಗಿ ಘಟಾನುಘಟಿ ನಾಯಕರ ವೀರಾವೇಶದ ಮಾತುಗಳು, ಭಾಷಣಗಳು ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸುತ್ತಿವೆ.;

Update: 2024-11-07 13:57 GMT

ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಪ್ರಚಾರ ಕಣ ದಿನೇ ದಿನೇ ರಂಗೇರುತ್ತಿದೆ. ಸಂಡೂರು ಹಾಗೂ ಶಿಗ್ಗಾವಿ ಕ್ಷೇತ್ರಗಳಲ್ಲಿ ಅಭಿವೃದ್ಧಿ ಆಧರಿತವಾಗಿ ಆರೋಪ-ಪ್ರತ್ಯಾರೋಪಗಳ ಮೂಲಕ ಪ್ರಚಾರ ನಡೆಸುತ್ತಿದ್ದರೆ, ಚನ್ನಪಟ್ಟಣದಲ್ಲಿ ವೈಯಕ್ತಿಕ ದ್ವೇಷ, ಮೂದಲಿಕೆಯ ಹೇಳಿಕೆಗಳನ್ನೂ ದಾಟಿ ಪರಸ್ಪರ ಆಡಿಯೊ ಬಿಡುಗಡೆ ಸಮರವಾಗಿ ಚುನಾವಣಾ ಪ್ರಚಾರ ಬದಲಾಗಿದೆ.

ಚನ್ನಪಟ್ಟಣ ಕ್ಷೇತ್ರದಲ್ಲಿ ಕಾಂಗ್ರೆಸ್ ಹಾಗೂ ಎನ್‌ಡಿಎ ಅಭ್ಯರ್ಥಿ ಪರವಾಗಿ ಘಟಾನುಘಟಿ ನಾಯಕರ ವೀರಾವೇಶದ ಮಾತುಗಳು, ಭಾಷಣಗಳು ಚುನಾವಣಾ ಪ್ರಚಾರದ ದಿಕ್ಕನ್ನೇ ಬದಲಿಸುತ್ತಿವೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹಾಗೂ ಮಾಜಿ ಸಂಸದ ಡಿ.ಕೆ. ಸುರೇಶ್ ನಡುವಿನ ಆಡಿಯೊ ಬಹಿರಂಗ ಕದನವು ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ.

ಡಿ.ಕೆ.ಸುರೇಶ್ ಬಿಡುಗಡೆ ಮಾಡಿದ್ದ ಆಡಿಯೊ ಏನು?

ಚುನಾವಣೆಯ ಸಂದರ್ಭದಲ್ಲಿ, "ಕ್ಷೇತ್ರಕ್ಕೆ ಹೆಚ್ಚಾಗಿ ಹೋಗಬಾರದು. ಮತದಾನದ ದಿನ ಸಮೀಪಿಸಿದಾಗ ಮಾತ್ರ ಜನರ ಬಳಿ ಹೋಗಬೇಕು. ಅಭಿವೃದ್ದಿಗೆ ಜನರು ಮತ ಹಾಕುವುದಿಲ್ಲ. ಚುನಾವಣೆಗೆ ಕೆಲ ದಿನಗಳು ಇರುವಂತೆ ಹೋಗಿ, ಪ್ರಚಾರ ಮಾಡಬೇಕು" ಎಂದು ಕುಮಾರಸ್ವಾಮಿ ಅವರು ಮದ್ದೂರು ಶಾಸಕರನ್ನು ಉದ್ದೇಶಿಸಿ ಹೇಳಿದ್ದ ಆಡಿಯೊ ತುಣುಕನ್ನು ಡಿ.ಕೆ.ಸುರೇಶ್ ಬುಧವಾರ ಬಿಡುಗಡೆ ಮಾಡಿದ್ದರು.

ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದ ಕುಮಾರಸ್ವಾಮಿ, "ಆಡಿಯೊವನ್ನು ಎಡಿಟ್ ಮಾಡಿ ಕೇಳಿಸುತ್ತಿದಾರೆ. ನಾನು ಮಾತನಾಡಿರುವ ಆಡಿಯೋ ಹದಿನೈದು ನಿಮಿಷ ಇದೆ. ಅಷ್ಟನ್ನೂ ಕೇಳಿಸಲಿ, ಹಾಸನದಲ್ಲೂ ಇದಕ್ಕಿಂತ ಕೆಟ್ಟದಾಗಿ ವಿಡಿಯೊ ಹಂಚಿದರು. ಇವರೆಲ್ಲಾ ಸಿಡಿ ಪ್ಲೈಯರ್ಸ್ ಸಂತತಿಯಲ್ಲಿ ಬಂದವರು" ಎಂದು ಟೀಕಿಸಿದ್ದರು.

"ಇಸ್ಪೀಟ್, ಕ್ರಿಕೆಟ್ ಬೆಟ್ಟಿಂಗ್ ದಂಧೆ ನಡೆಸುವವರು. 5 ವರ್ಷ ಅವರು ಕೆಲಸ ಮಾಡಲಿ. ನಾನು ಎರಡು ದಿನದಲ್ಲಿ ಬದಲಾವಣೆ ಮಾಡುತ್ತೇನೆ ಎಂಬ ವಿಚಾರದ ಬಗ್ಗೆ ಹೇಳಿದ್ದೆ. ಅದನ್ನು ಮದ್ದೂರಿಗೆ ಸಂಬಂಧಿಸಿದಂತೆ ಹೇಳಿದ್ದೆ..." ಎಂದು ಸ್ಪಷ್ಟಪಡಿಸಿದ್ದರು.

ಎಚ್ಡಿಕೆ ಬಿಡುಗಡೆ ಮಾಡಿದ ಆಡಿಯೋ ಏನು?

ಡಿ ಕೆ ಸುರೇಶ್‌ ಅವರು ಬಿಡುಗಡೆ ಮಾಡಿದ ಆಡಿಯೋಗೆ ತಿರುಗೇಟು ನೀಡಲು ಗುರುವಾರ ಎಚ್‌ ಡಿ ಕುಮಾರಸ್ವಾಮಿ ಅವರು ಡಿ.ಕೆ. ಸಹೋದರರು ಹಾಗೂ ಸಿ.ಪಿ. ಯೋಗೇಶ್ವರ್ ಅವರ ನಡುವೆ ಚುನಾವಣೆಗೆ ಮುನ್ನ ನಡೆದಿದ್ದ ವಾಗ್ದಾಳಿಯ ಆಡಿಯೋ ಒಂದನ್ನು ಬಿಡುಗಡೆ ಮಾಡಿದ್ದಾರೆ.

"ಅವನು (ಸಿ.ಪಿ. ಯೋಗೇಶ್ವರ್) ರಿಯಲ್ಲಾಗಿ ಯಾರು ಯಾರಿಗೆ ಟೋಪಿ ಹಾಕವ್ನೇ, ಬಿಡದಿನಲ್ಲಿ ಹೋಗಿ ಕೇಳಿದ್ರೆ ಎಲ್ಲಾ ಹೇಳ್ತಾರೆ. ಹೇಳಿದ್ನಲ್ಲಪ್ಪಾ.. ಬಿಡದಿನಲ್ಲಿ ಎಲ್ಲರಿಗೂ ಮೆಗಾಸಿಟಿ ಮಾಡ್ತಿನಿ ಅಂತ ಟೋಪಿ ಹಾಕಿದ್ನಲ್ಲಾ.. ಮರೆತೋಗಿದ್ದಾನಾ..?" ಎಂದು ಯೋಗೇಶ್ವರ್‌ ವಿರುದ್ಧ ಡಿ ಕೆ ಸುರೇಶ್‌  ಏಕವಚನದಲ್ಲಿ ವಾಗ್ದಾಳಿ ನಡೆಸುವ ಆಡಿಯೊ ಅದಾಗಿದೆ.

Tags:    

Similar News