BSY POCSO CASE | ಯಡಿಯೂರಪ್ಪಗೆ ಖುದ್ದು ಹಾಜರಿಯಿಂದ ವಿನಾಯಿತಿ ನೀಡಿದ ಹೈಕೋರ್ಟ್
ಪೋಕ್ಸೊ ಪ್ರಕರಣದ ವಿಚಾರಣೆ ಎದುರಿಸುತ್ತಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪಗೆ ಕರ್ನಾಟಕ ಹೈಕೋರ್ಟ್ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ತಮ್ಮ ವಿರುದ್ಧದ ಪೋಕ್ಸೋ ಪ್ರಕರಣ ರದ್ದು ಕೋರಿ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಜು.26ಕ್ಕೆ ಮುಂದೂಡಿದ್ದು, ಯಡಿಯೂರಪ್ಪ ಅವರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ನೀಡಿದೆ.
ಪೋಕ್ಸೊ ಕಾಯ್ದೆಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯ ಜು.15 ರಂದು ತನ್ನ ಮುಂದೆ ಹಾಜರಾಗುವಂತೆ ಯಡಿಯೂರಪ್ಪ ಅವರಿಗೆ ಸಮನ್ಸ್ ನೀಡಿತ್ತು.
ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ, ಜೂ.27 ರಂದು ಅವರ ವಿರುದ್ಧ ಬೆಂಗಳೂರಿನ 1ನೇ ತ್ವರಿತಗತಿ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಇದೇ ವೇಳೆ ಪೋಕ್ಸೊ ಪ್ರಕರಣ ರದ್ದು ಕೋರಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಜು.26ಕ್ಕೆ ನಡೆಸಲು ಹೈಕೋರ್ಟ್ ದಿನಾಂಕ ನಿಗದಿಪಡಿಸಿದೆ. ಅಲ್ಲಿಯವರೆಗೆ ಪ್ರಕರಣದಲ್ಲಿ ಖುದ್ದು ಹಾಜರಿಗೆ ಮಾಜಿ ಸಿಎಂಗೆ ಕೋರ್ಟ್ ವಿನಾಯಿತಿ ನೀಡಿದೆ.
ಫೆ.2 ರಂದು ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿರುವ ತಮ್ಮ ನಿವಾಸದಲ್ಲಿ ಅವರನ್ನು ಭೇಟಿ ಮಾಡಿದ್ದಾಗ ಯಡಿಯೂರಪ್ಪ ತನ್ನ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ 17 ವರ್ಷದ ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕಳೆದ ಮಾರ್ಚ್ 14 ರಂದು ಪ್ರಕರಣ ದಾಖಲಿಸಲಾಗಿತ್ತು.
2024ರ ಫೆಬ್ರವರಿ 2ರಂದು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಯಡಿಯೂರಪ್ಪ ವಿರುದ್ಧ ತನಿಖೆ ನಡೆಸುತ್ತಿರುವ ಸಿಐಡಿ, ಯಡಿಯೂರಪ್ಪ ಮತ್ತು ಇತರ ಮೂವರು ಆರೋಪಿಗಳು ಸಂತ್ರಸ್ತೆ ಮತ್ತು ಆಕೆಯ ತಾಯಿಗೆ ಈ ಬಗ್ಗೆ ಬಾಯಿಬಿಡದಂತೆ ಹಣ ನೀಡಿದ್ದಾರೆ ಎಂದು ಆರೋಪಪಟ್ಟಿಯಲ್ಲಿ ಹೇಳಿದೆ.
ಯಡಿಯೂರಪ್ಪ ವಿರುದ್ಧ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆಯ ಸೆಕ್ಷನ್ 8 (ಲೈಂಗಿಕ ದೌರ್ಜನ್ಯಕ್ಕೆ ಶಿಕ್ಷೆ) ಮತ್ತು ಸೆಕ್ಷನ್ 354 ಎ (ಲೈಂಗಿಕ ಕಿರುಕುಳ), ಭಾರತೀಯ ದಂಡ ಸಂಹಿತೆಯ (IPC) 204 (ಸಾಕ್ಷ್ಯ ದಾಖಲೆ ಅಥವಾ ಎಲೆಕ್ಟ್ರಾನಿಕ್ ದಾಖಲೆಯ ನಾಶ) ಅಡಿಯಲ್ಲಿ ಆರೋಪ ಹೊರಿಸಲಾಗಿದೆ.
ಇನ್ನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಯಡಿಯೂರಪ್ಪ ಅವರನ್ನು ಜೂನ್ 17 ರಂದು ಸಿಐಡಿ ಮೂರು ಗಂಟೆಗಳ ಕಾಲ ವಿಚಾರಣೆ ನಡೆಸಿತ್ತು. ಆರೋಪವನ್ನು ತಳ್ಳಿಹಾಕಿರುವ ಅವರು, ಪ್ರಕರಣದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಹೇಳಿದ್ದರು.