Stray Dog Menace| ಗದಗದಲ್ಲಿ ಬಾಲಕನ ಮೇಲೆ ಬೀದಿ ನಾಯಿ ದಾಳಿ
ಬೀದಿ ನಾಯಿ ದಾಳಿಯಿಂದ ಬಾಲಕನಿಗೆ ಗಂಭೀರ ಗಾಯಗಳಾಗಿದ್ದು, ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಬೀದಿನಾಯಿಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ಪುರಸಭೆ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.;
ಮನೆ ಸಮೀಪ ಆಟವಾಡುತ್ತಿದ್ದ ಎರಡೂವರೆ ವರ್ಷದ ಬಾಲಕನ ಮೇಲೆ ಬೀದಿ ನಾಯಿ ದಾಳಿ ನಡೆಸಿ, ಗಂಭೀರ ಗಾಯಗೊಳಿಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿಯಲ್ಲಿ ನಡೆದಿದೆ.
ಪಟ್ಟಣದ 20ನೇ ವಾರ್ಡಿನಲ್ಲಿ ರುದ್ರೇಶ್ ಕಾಳೆ ಎಂಬ ಬಾಲಕನ ಮೇಲೆ ಬೀದಿ ನಾಯಿ ಏಕಾಏಕಿ ದಾಳಿ ಮಾಡಿದೆ. ಇದರಿಂದ ಬಾಲಕನ ಕೆಳಗಿನ ತುಟಿ, ಕೆಳ ದವಡೆಯ ಹಲ್ಲುಗಳೂ ಕಿತ್ತು ಬಂದಿವೆ. ಅಲ್ಲದೇ ಮಗುವಿನ ತಲೆ, ಕೆನ್ನೆ ಮೇಲೂ ಗಾಯಗಳಾಗಿವೆ.
ಮಗುವಿನ ಚೀರಾಟ ಕೇಳಿ ನೆರವಿಗೆ ಧಾವಿಸಿದ ಅಕ್ಕಪಕ್ಕದವರು ಬೀದಿ ನಾಯಿಯಿಂದ ಬಾಲಕನನ್ನು ರಕ್ಷಿಸಿದ್ದಾರೆ. ಸ್ಥಳೀಯರು ರಕ್ಷಣೆಗೆ ಧಾವಿಸದೇ ಹೋಗಿದ್ದರೆ ಮಗುವನ್ನು ಬೀದಿ ನಾಯಿ ಕಚ್ಚಿ ಸಾಯಿಸುತ್ತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಗಾಯಾಳು ಬಾಲಕನನ್ನು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮುಂಡರಗಿ ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ವಿಪರೀತವಾಗಿದ್ದರೂ ಪುರಸಭೆ ಅಧಿಕಾರಿಗಳು ಯಾವುದೇ ಕ್ರಮ ಜರುಗಿಸಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಕೆಲವು ದಿನಗಳಿಂದ ಬೀದಿ ನಾಯಿ ಹಾಗೂ ಹಂದಿಗಳ ಕಾಟ ವಿಪರೀತವಾಗಿದೆ. ಅಲ್ಲಲ್ಲಿ ಮಕ್ಕಳ ಮೇಲೆ ಬೀದಿ ನಾಯಿಗಳು ದಾಳಿ ನಡೆಸುತ್ತಲೇ ಇವೆ. ಇಷ್ಟಾದರೂ ಪುರಸಭೆ ಸಿಬ್ಬಂದಿ ಬೀದಿ ನಾಯಿಗಳ ನಿಯಂತ್ರಣಕ್ಕೆ ಯಾವುದೇ ಕ್ರಮ ಜರುಗಿಸಿಲ್ಲ. ಅಧಿಕಾರಿಗಳ ನಿರ್ಲಕ್ಷ್ಯ ಧೋರಣೆ ಮುಂದುವರಿದರೆ ಸಾರ್ವಜನಿಕರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಯುವ ಮುಖಂಡ ನಬಿಸಾಬ್ ಕೆಲೂರು ಎಚ್ಚರಿಸಿದ್ದಾರೆ.
ಬೀದಿನಾಯಿಗಳ ಸೆರೆ ಮುಂದಾದ ಪುರಸಭೆ
ಬಾಲಕನಿಗೆ ಬೀದಿ ನಾಯಿ ಕಚ್ಚಿಗಾಯಗೊಳಿಸಿದ ಸುದ್ದಿ ಹಬ್ಬುತ್ತಿದ್ದಂತೆ ಪುರಸಭೆ ಸಿಬ್ಬಂದಿ ಬೀದಿನಾಯಿಗಳ ಸರೆಗೆ ಮುಂದಾದರು. ಈ ವೇಳೆ ಸ್ಥಳಕ್ಕೆ ಬಂದ ಪುರಸಭೆ ಆರೋಗ್ಯಾಧಿಕಾರಿ ಬಸವರಾಜ ಮ್ಯಾಗೇರಿ ಅವರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಂಡರು. ಪೌರಕಾರ್ಮಿಕರ ನೆರವಿನಿಂದ ಬೀದಿನಾಯಿಗಳನ್ನು ಹಿಡಿದು ಬೇರೆಡೆ ಸ್ಥಳಾಂತರಿಸುವ ಕೆಲಸ ಆರಂಭಿಸಲಾಯಿತು.