ಬಾಂಬ್ ಭೀತಿ |​ ಲಜೇಜು ನೋಡಿ ಭಯಬಿದ್ದು ಆಟೋವನ್ನೇ ಠಾಣೆಗೆ ತಂದ ಚಾಲಕ!

ಅಪರಿಚಿತ ವ್ಯಕ್ತಿ ಆಟೋದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ ಕಂಡು ಬಾಂಬ್‌ ಎಂದು ಕಂಗಾಲಾದ ಆಟೋ ಚಾಲಕ ಆಟೋ ಸಮೇತ ಜಯನಗರ ಪೊಲೀಸ್​ ಠಾಣೆಗೆ ಬಂದಿದ್ದ!;

Update: 2024-11-16 12:06 GMT
ಜಯನಗರ ಪೊಲೀಸ್‌ ಠಾಣೆಯಲ್ಲಿ ಆಟೋ ಪರಿಶೀಲಿಸಿದ ಬಾಂಬ್ ಸ್ಕ್ವಾಡ್​ ಸಿಬ್ಬಂದಿ

ಅಪರಿಚಿತ ವ್ಯಕ್ತಿಯೊಬ್ಬ ತನ್ನ ಆಟೋದಲ್ಲಿ ಬಿಟ್ಟು ಹೋದ ಬ್ಯಾಗಿನಲ್ಲಿ ಬಾಂಬ್‌ ಇದೆ ಎಂದು ಭಯಭೀತನಾದ ಚಾಲಕ, ಆಟೋ ಸಹಿತ ಠಾಣೆಗೆ ಧಾವಿಸಿದ ಪ್ರಸಂಗ ಜಯನಗರ ಪೊಲೀಸ್​ ಠಾಣೆಯಲ್ಲಿ ನಡೆದಿದೆ.

ಬಳಿಕ ಬಾಂಬ್ ಸ್ಕ್ವಾಡ್​ನಿಂದ ಪರಿಶೀಲನೆ ಮಾಡಿದಾಗ ಯಾವುದೇ ಸ್ಫೋಟಕ‌ ವಸ್ತು ಪತ್ತೆ ಆಗಿಲ್ಲ ಎಂದು ತಿಳಿದುಬಂದಿದೆ. 

ಆಟೋದಲ್ಲಿ ಅಪರಿಚಿತ ವ್ಯಕ್ತಿಯೋರ್ವ 2 ಬ್ಯಾಗ್ ಬಿಟ್ಟು ಹೋಗಿದ್ದ. ಅದನ್ನು ನೋಡಿದ ಆಟೋ ಚಾಲಕ, ಬ್ಯಾಗಿನಲ್ಲಿ ಬಾಂಬ್‌ ಇರಬಹುದು ಎಂದು ಹೆದರಿ ಆಟೋವನ್ನು ಸೀದಾ ಜಯನಗರ ಪೊಲೀಸ್ ಠಾಣೆಗೆ ತಂದಿದ್ದ. ಪೊಲೀಸರ ಮುಂದೆ ಆಟೋದಲ್ಲಿ ಬಾಂಬ್ ಇದೆ ಎಂದು ಹೇಳಿದ್ದ. ಕೂಡಲೇ ಪೊಲೀಸರು ಆಟೋವನ್ನು ಸಮೀಪದ ಆಟದ ಮೈದಾನಕ್ಕೆ ಕೊಂಡೊಯ್ದಿದ್ದಾರೆ. ಬಳಿಕ ಬಾಂಬ್ ಸ್ಕ್ವಾಡ್​ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಆಟೋದ ಸೀಟಿನ ಹಿಂಬದಿಯಲ್ಲಿ ಬ್ಯಾಗ್ ಗಳು ಪತ್ತೆಯಾಗಿವೆ. ಆದರೆ ಬ್ಯಾಗ್ ನಲ್ಲಿ ಯಾವುದೇ ಸ್ಫೋಟಕ ವಸ್ತುಗಳು ಪತ್ತೆಯಾಗಿಲ್ಲ. ಬದಲಿಗೆ ಡ್ರಿಲ್ಲಿಂಗ್ ಮೆಷಿನ್ ಬಿಡಿಭಾಗಗಳು ಪತ್ತೆಯಾಗಿವೆ.

ಹಾಗಾಗಿ ಪೊಲೀಸರು ಆಟೋ ಚಾಲಕನಿಗೆ ಧೈರ್ಯ ಹೇಳಿ ಕಳಿಸಿಕೊಟ್ಟಿದ್ದಾರೆ.

ಬೆಂಗಳೂರಿನಲ್ಲಿ ಪದೇಪದೆ ಹುಸಿ ಬಾಂಬ್ ಬೆದರಿಕೆ ಕರೆಗಳು ಬರುತ್ತಿವೆ. ಶಾಲೆಗಳು, ಹೊಟೇಲ್‌, ಕಾಲೇಜುಗಳಿಗೆ ಅನೇಕ ಬಾರಿ ಹುಸಿ ಬಾಂಬ್‌ ಕರೆ ಬಂದಿರುವ ಉದಾಹರಣೆಗಳಿವೆ. ಆ ಹಿನ್ನೆಲೆಯಲ್ಲಿ ಆಟೋ ಚಾಲಕ ತನ್ನ ಆಟೋದಲ್ಲಿ ಅಪರಿಚಿತ ಪ್ರಯಾಣಿಕ ಬಿಟ್ಟುಹೋದ ಬ್ಯಾಗುಗಳಲ್ಲಿ ಬಾಂಬ್‌ ಇರಬಹುದು ಎಂದು ಭಯಪಟ್ಟುಕೊಂಡಿದ್ದ.

Tags:    

Similar News