ಜೂನ್ 1 ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ
ಜೂನ್ 1ರಿಂದ ಬಿಎಂಟಿಸಿ ವಿದ್ಯಾರ್ಥಿ ಬಸ್ ಪಾಸ್ ವಿತರಣೆ ನಡೆಯಲಿದೆ.
2024-25ನೇ ಸಾಲಿನ ಶೈಕ್ಷಣಿಕ ವರ್ಷಾರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಇಂದಿನಿಂದ ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳು ಆರಂಭವಾಗಿದ್ದು, ಕಾಲೇಜುಗಳು ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ 2024-25ನೇ ಸಾಲಿನ ಸ್ಟುಡೆಂಟ್ ಬಸ್ ಪಾಸ್ ನೀಡಲು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಸಿದ್ಧತೆ ನಡೆಸುತ್ತಿದ್ದು, ವಿದ್ಯಾರ್ಥಿಗಳಿಗೆ ವಾರ್ಷಿಕ ಬಸ್ ಪಾಸ್ ನೀಡಲು ಬಿಎಂಟಿಸಿ ಇಂದಿನಿಂದ (ಮೇ 29) ಬುಧವಾರ ಅರ್ಜಿಗಳನ್ನು ಸ್ವೀಕರಿಸಲು ಆರಂಭಿಸಿದೆ. ಹಾಗೂ ಜೂನ್ 1ರಿಂದ ಬಸ್ ಪಾಸ್‌ಗಳ ವಿತರಣೆ ಆರಂಭವಾಗಲಿದೆ ಎಂದು ಬಿಎಂಟಿ ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ ರಾಜ್ಯದಲ್ಲಿ ಶಾಶ್ವತ ನಿವಾಸವನ್ನು ಹೊಂದಿರುವ ವಿದ್ಯಾರ್ಥಿಗಳು ರಿಯಾಯಿತಿ ವಿದ್ಯಾರ್ಥಿ ಬಸ್ ಪಾಸ್‌ಗಾಗಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿಯೊಂದಿಗೆ ವಿದ್ಯಾರ್ಥಿಯ ಭಾವಚಿತ್ರ, ಆಧಾರ್ ಕಾರ್ಡ್, ಆದಾಯ ಪ್ರಮಾಣಪತ್ರ, ನಿವಾಸ ಪ್ರಮಾಣಪತ್ರ ಹಾಗೂ ಮೊಬೈಲ್ ನಂಬರ್‌ಅನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಗೆ ವಿದ್ಯಾರ್ಥಿಗಳು ನೀಡಬೇಕಾಗುತ್ತದೆ.
ಬೆಂಗಳೂರು ಒನ್ ಕೇಂದ್ರಗಳು, ಕೆಂಪೇಗೌಡ ಬಸ್ ನಿಲ್ದಾಣ (ಮೆಜೆಸ್ಟಿಕ್), ಕೆಂಗೇರಿ ಟಿಟಿಎಂಸಿ, ಶಾಂತಿನಗರ ಟಿಟಿಎಂಸಿ, ಹೊಸಕೋಟೆ, ಎಲೆಕ್ಟ್ರಾನಿಕ್ಸ್ ಸಿಟಿ ಡಿಪೋ-19, ಮತ್ತು ಆನೇಕಲ್ ಬಸ್ ನಿಲ್ದಾಣದಲ್ಲಿ ಎಲ್ಲಾ ದಿನಗಳಲ್ಲಿ ಬೆಳಿಗ್ಗೆ 8 ರಿಂದ ಸಂಜೆ 6.30 ರವರೆಗೆ ಪಾಸ್‌ಗಳನ್ನು ನೀಡಲಾಗುತ್ತದೆ.
ವಿದ್ಯಾರ್ಥಿಗಳು https://sevasindhu.karnataka.gov.in ನಿಂದ ಸಹ ಬಸ್ ಪಾಸ್ಗೆ ಅರ್ಜಿಗಳನ್ನು ಪಡೆದು ಮಾಡಿಕೊಳ್ಳಬಹುದಾಗಿದೆ.
ಶಕ್ತಿ ಯೋಜನೆಯಡಿ ಕರ್ನಾಟಕದಲ್ಲಿ ನೆಲೆಸಿರುವ ವಿದ್ಯಾರ್ಥಿನಿಯರು ಬಿಎಂಟಿಸಿಯ ಸಾಮಾನ್ಯ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಬಹುದು.
ಹೆಚ್ಚಿನ ವಿವರಗಳಿಗಾಗಿ ವಿದ್ಯಾರ್ಥಿಗಳು ಬಿಎಂಟಿಸಿ ಕಾಲ್ ಸೆಂಟರ್ ಸಂಖ್ಯೆ 080-22483777 ಸಂಪರ್ಕಿಸಿ ಅಥವಾ ಬಿಎಂಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು ಎಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.