Honey Trap| ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ್‌ಗೆ ಬ್ಲ್ಯಾಕ್‌ ಮೇಲ್‌; ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಬಂಧನ

ಹನಿಟ್ರ್ಯಾಪ್​ ಮಾಡಲು ಹೋಗಿ ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಮತ್ತು ಆಕೆಯ ಪತಿ ಬಳಿ 6 ಸ್ಮಾರ್ಟ್ ಪೋನ್ ಗಳು ಪತ್ತೆ‌ಯಾಗಿವೆ. ಫೋನ್​ಗಳನ್ನು ಪರಿಶೀಲಿಸಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.

Update: 2024-10-27 07:37 GMT

ಕಾಂಗ್ರೆಸ್ ಹಿರಿಯ ಮುಖಂಡ ಮಾಲೀಕಯ್ಯ ಗುತ್ತೇದಾರ್​ ಅವರಿಗೆ ವಾಟ್ಸಾಪ್​ ವಿಡಿಯೊ ಕರೆಗಳನ್ನು ಮಾಡಿ,  ಅದನ್ನು ರೆಕಾರ್ಡ್‌ ಮಾಡಿಕೊಂಡು ಹಣಕ್ಕೆ ಬ್ಲ್ಯಾಕ್​ ಮೇಲ್ ಮಾಡುತ್ತಿದ್ದ ಕಲಬುರಗಿ ಮೂಲದ ದಂಪತಿಯನ್ನು ಬೆಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಮಾಲೀಕಯ್ಯ ಗುತ್ತೆದಾರ್ ಅವರೊಂದಿಗೆ ಸಲಗೆಯಿಂದ ಮಾತನಾಡಿದ್ದ ಆಡಿಯೋ ಹಾಗೂ ವಿಡಿಯೋ ಬಿಡುಗಡೆ ಮಾಡದಿರಲು 20 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಮೊಹಮದ್ ನಲಪಾಡ್ ಬ್ರಿಗೇಡ್‌ನ ಕಲಬುರಗಿ ಘಟಕದ ಅಧ್ಯಕ್ಷೆ ಹಾಗೂ ಆಕೆಯ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಂಜುಳಾ ಪಾಟೀಲ ಹಾಗೂ ಆಕೆಯ ಪತಿ ಶಿವರಾಜ್‌ ಪಾಟೀಲ ಬಂಧಿತರು. ಕಲಬುರಗಿಯ ಆಳಂದ ರಸ್ತೆಯ ವಿಜಯನಗರ ಕಾಲೊನಿ ನಿವಾಸಿಗಳಾದ ಇವರು ಮಾಲೀಕಯ್ಯ ಗುತ್ತೇದಾರ್ ಅಲ್ಲದೇ ಇನ್ನು ಹಲವರೊಂದಿಗೆ ವಾಟ್ಸಾಪ್ ವಿಡಿಯೊ ಕರೆ ಮಾಡಿ ರೆಕಾರ್ಡ್ ಮಾಡಿಕೊಂಡಿರುವ ಮಾಹಿತಿ ಮೊಬೈಲ್​ನಲ್ಲಿ ಪತ್ತೆಯಾಗಿದೆ.

ವಿಡಿಯೋ ಮುಂದಿಟ್ಟುಕೊಂಡು ಬ್ಲ್ಯಾಕ್ ಮೇಲ್ ಮಾಡಿ ಹಣ ಪೀಕುವುದೇ ಕಾಯಕ‌ ಮಾಡಿಕೊಂಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಈ ಹಿಂದೆ ಕಾಂಗ್ರೆಸ್ ಸಕ್ರಿಯ ಕಾರ್ಯಕರ್ತೆಯಾಗಿದ್ದ ಮಂಜುಳಾ ಪಾಟೀಲ್, ಜಿಲ್ಲೆಯಲ್ಲಿ ಮಹಮ್ಮದ್ ನಲಪಾಡ್ ಬ್ರಿಗೇಡ್ ಕಟ್ಟಿ ಅದರ ಅಧ್ಯಕ್ಷೆಯಾಗಿದ್ದಳು. ಪಕ್ಷದಲ್ಲಿದ್ದ ಕಾರಣ ಮಾಲೀಕಯ್ಯ ಗುತ್ತೇದಾರ್ ಗೆ ಆಕೆಯ ಪರಿಚಯವಾಗಿತ್ತು. ಬಳಿಕ ಇಬ್ಬರೂ ನಿತ್ಯ ಮೊಬೈಲ್‌ನಲ್ಲಿ ಸಲುಗೆಯಲ್ಲಿ ಮಾತನಾಡುತ್ತಿದ್ದರು ಎನ್ನಲಾಗಿದೆ.

ಈ ಮಧ್ಯೆ ವಿಡಿಯೋ ಕಾಲ್‌ಗಳನ್ನು ರೆಕಾರ್ಡ್ ಮುಂದಿಟ್ಟು ಹಣಕ್ಕೆ ಬ್ಲ್ಯಾಕ್ ಮೇಲ್ ಮಾಡುತ್ತಿದ್ದಳು. ಇದಕ್ಕೆ ಆಕೆಯ ಪತಿಯ ಸಹಕಾರವೂ ಇತ್ತು. 2 ದಿನದ ಹಿಂದೆ ಬೆಂಗಳೂರಿನಲ್ಲಿ ಮಾಲೀಕಯ್ಯ ಗುತ್ತೇದಾರ್ ಅವರ ಪುತ್ರ ರಿತೀಶ್ ಭೇಟಿಯಾಗಿ ಡೀಲ್ ಕುದುರಿಸಲು ಮಂಜುಳಾ ದಂಪತಿ ಮುಂದಾಗಿದ್ದರು. ಈ ಬಗ್ಗೆ ರಿತೇಶ್ ಶುಕ್ರವಾರ ಪೊಲೀಸರಿಗೆ ಶುಕ್ರವಾರ ದೂರು ನೀಡಿದ್ದರು.

ದೂರು ಆಧರಿಸಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು ಶನಿವಾರ ಬೆಂಗಳೂರಿನ ಗರುಡಾ ಮಾಲ್‌ ಬಳಿ ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದರು. ನ್ಯಾಯಾಲಯವು ಆರೋಪಿಗಳನ್ನು ಎಂಟು ದಿನ ಪೊಲೀಸ್‌ ಕಸ್ಟಡಿಗೆ ನೀಡಿ ಆದೇಶಿಸಿದೆ.

ಅಕ್ಟೋಬರ್ 21ರಂದು ರಿತೇಶ್ ಅವರಿಗೆ ಕರೆ ಮಾಡಿದ್ದ ಆರೋಪಿ ಮಂಜುಳಾ, ತಾನು ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಎಂದು ಪರಿಚಯಿಸಿಕೊಂಡಿದ್ದರು. ಮಾಲೀಕಯ್ಯ ಗುತ್ತೇದಾರ್ ಅವರು ತನಗೆ ನಿಂದನೆಯ ಸಂದೇಶ ಕಳುಹಿಸುತ್ತಿದ್ದಾರೆ. ಈ ಸಂಬಂಧ ತಮ್ಮೊಂದಿಗೆ ಚರ್ಚಿಸಬೇಕೆಂದು ಕೇಳಿಕೊಂಡಿದ್ದರು. ನಂತರ, ಕೊಡಿಗೇಹಳ್ಳಿಯ ಸ್ವಾತಿ ಗಾರ್ಡೆನಿಯಾ ಹೋಟೆಲ್‌ನಲ್ಲಿ ರಿತೇಶ್ ಅವರನ್ನು ಆರೋಪಿಗಳು ಭೇಟಿಯಾಗಿ, ಹಣಕ್ಕೆ ಬೇಡಿಕೆ ಇಟ್ಟಿದ್ದರು. ಮಾಲೀಕಯ್ಯ ಅವರ ವಿರುದ್ಧ ಪೊಲೀಸರಿಗೆ ಯಾವುದೇ ದೂರು ನೀಡದಿರಲು ಹಾಗೂ ಮಾಧ್ಯಮಗಳಿಗೆ ಮಾಹಿತಿ ನೀಡದಿರಲು 20 ಲಕ್ಷ ಹಣ ನೀಡುವಂತೆ ಬೇಡಿಕೆ ಇಟ್ಟಿದ್ದರು.

ಅಕ್ಟೋಬರ್ 23 ಹಾಗೂ 24ರಂದು ಪದೇ ಪದೇ ವಾಟ್ಸಾಪ್ ಕರೆ ಮಾಡಿ ಹಣ ನೀಡಿದರೆ ನಿಂದನೆ ಸಂದೇಶಗಳನ್ನು ಡಿಲಿಟ್ ಮಾಡುತ್ತೇವೆ. ಇಲ್ಲದಿದ್ದರೆ ಬಹಿರಂಗ ಪಡಿಸುವುದಾಗಿ ಆರೋಪಿಗಳು ಹೆದರಿಸಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

​ಎಂಟು ಜನರ ವಿಡಿಯೋ ಪತ್ತೆ

ಹನಿಟ್ರ್ಯಾಪ್​ ಮಾಡಲು ಹೋಗಿ ಸಿಸಿಬಿ ಬಲೆಗೆ ಬಿದ್ದಿರುವ ಮಂಜುಳಾ ಪಾಟೀಲ್ ಬಳಿ 6 ಸ್ಮಾರ್ಟ್ ಪೋನ್ ಗಳು ಪತ್ತೆ‌ಯಾಗಿವೆ. ಫೋನ್​ಗಳನ್ನು ಪರಿಶೀಲಿಸಿದಾಗ ಬರೋಬ್ಬರಿ ಎಂಟು ಜನರ ಖಾಸಗಿ ವಿಡಿಯೋಗಳು ಪತ್ತೆಯಾಗಿವೆ.

ಮೊಬೈಲ್ ನಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ, ಪೊಲೀಸ್ ಅಧಿಕಾರಿ , ಪಿಡಬ್ಲೂಡಿ ಅಧಿಕಾರಿ ಸೇರಿ ಎಂಟು ಜನರ ವಿಡಿಯೋಗಳು ಪತ್ತೆಯಾಗಿವೆ ಎಂದು ಸಿಸಿಬಿ ಪೊಲೀಸರು ತಿಳಿಸಿದ್ದಾರೆ.

Tags:    

Similar News