ಬಿಜೆಪಿ ವಿಜಯೋತ್ಸವ ಮೆರವಣಿಗೆ: ಇಬ್ಬರಿಗೆ ಚೂರಿ ಇರಿತ; ಮೂವರ ಬಂಧನ
ಮೋದಿ ಪ್ರಮಾಣ ವಚನದ ಹಿನ್ನಲೆ ಬಿಜೆಪಿ ಹಮ್ಮಿಕೊಂಡಿದ್ದ ವಿಜಯೋತ್ಸವ ವೇಳೆ ನಡೆದ ಸಂಘರ್ಷದಲ್ಲಿ ಇಬ್ಬರು ಕಾರ್ಯಕರ್ತರು ಚೂರಿ ಇರಿತಕ್ಕೆ ಒಳಗಾದ ಘಟನೆ ಮಂಗಳೂರಿನಲ್ಲಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಈಗಾಗಲೇ ಮೂವರನ್ನು ಪೊಲೀಸರು ಬಂಧಿಸಿದ್ದಾರೆ
ಮಂಗಳೂರು: ದೇಶದ ಪ್ರಧಾನಿಯಾಗಿ ಮೂರನೇ ಬಾರಿಗೆ ನರೇಂದ್ರ ಮೋದಿ ಅವರು ಪ್ರಮಾಣವಚನ ಸ್ವೀಕರಿಸಿದ ಹಿನ್ನಲೆ ಬಿಜೆಪಿ ಹಮ್ಮಿಕೊಂಡಿದ್ದ ವಿಜಯೋತ್ಸವದ ವೇಳೆ ನಡೆದ ಘರ್ಷಣೆಯಲ್ಲಿ ಇಬ್ಬರು ಕಾರ್ಯಕರ್ತರು ಚೂರಿ ಇರಿತಕ್ಕೆ ಒಳಗಾದ ಘಟನೆ ದಕ್ಷಿಣಕನ್ನಡ ಜಿಲ್ಲೆಯ ಮುಡಿಪು ಸಮೀಪದ ಬೊಳಿಯಾರುನಲ್ಲಿ ಭಾನುವಾರ (ಜೂ.10) ತಡರಾತ್ರಿ ನಡೆದಿದೆ. ಘಟನೆ ಸಂಬಂಧ ಪೊಲೀಸರು ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಇನೋಳಿಯ ಧರ್ಮನಗರದ ಹರೀಶ್ (41) ಮತ್ತು ನಂದಕುಮಾರ್ (24) ಗಾಯಗೊಂಡಿದ್ದು ಅವರನ್ನು ದೇರಳಕಟ್ಟೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಅದೇ ಗುಂಪಿನಲ್ಲಿದ್ದ ಕೃಷ್ಣ ಕುಮಾರ್ ಎಂಬವರನ್ನು ಕೂಡ ದುಷ್ಕರ್ಮಿಗಳು ಥಳಿಸಿದ್ದಾರೆ.
ಘಟನೆಯ ವಿವರ
ಪ್ರಧಾನಿ ನರೇಂದ್ರ ಮೋದಿಯವರ ಮೂರನೇ ಅವಧಿಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ನಡೆಸಿದ ವಿಜಯೋತ್ಸವದಲ್ಲಿ ಭಾಗವಹಿಸಿ, ವಾಪಸ್ಸಾಗುತ್ತಿರುವಾಗ ಬೋಳಿಯಾರು ಮಸೀದಿಯೊಂದರ ಎದುರು ಗಾಯಗೊಂಡವರು ಮೋದಿ ಪರ ಘೋಷಣೆಯನ್ನು ಕೂಗಿದ್ದಾರೆ. ಇದನ್ನು ಕಂಡ ಅನ್ಯಕೋಮಿನ 20-25ಯುವಕರ ತಂಡ ಬೈಕಿನಲ್ಲಿ ಹಿಂಬಾಲಿಸಿದ್ದಾರೆ. ಮಸೀದಿಯಿಂದ 2-ಕಿಮೀ ದೂರದ ಬಾರ್ ಒಂದರ ಎದುರು ಎರಡೂ ಗುಂಪುಗಳು ವಾಗ್ವಾದಕ್ಕೆ ಇಳಿದಿದೆ. ಈ ವಾಗ್ವಾದ ಅತೀರೇಕಕ್ಕೆ ತಿರುಗಿದ್ದು, ಘರ್ಷಣೆಯಲ್ಲಿ ಇಬ್ಬರು ಬಿಜೆಪಿ ಕಾರ್ಯರ್ತರು ಚೂರಿ ಇರಿತಕ್ಕೆ ಒಳಗಾಗಿದ್ದಾರೆ. ಇನ್ನೊಬ್ಬನಿಗೆ ಥಳಿಸಲಾಗಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ತಿಳಿಸಿದ್ದಾರೆ.
ಈ ಪೈಕಿ ಓರ್ವ ಪ್ರಾಣಾಪಾಯದಿಂದ ಪಾರಾಗಿದ್ದು, ಮತ್ತೋರ್ವ ಯುವಕನಿಗೆ ಕೆಎಸ್ ಹೆಗಡೆ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ. ದಕ್ಷಿಣ ಕನ್ನಡ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ ಸೇರಿದಂತೆ ಬಿಜೆಪಿ ಮುಖಂಡರು ಆಸ್ಪತ್ರೆಗೆ ದೌಡಾಯಿಸಿದ್ದಾರೆ. ಕೊಣಾಜೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಈಗಾಗಲೇ ಸಿಸಿಟಿವಿ ದೃಶ್ಯಾವಳಿ ಪರಿಶೀಲನೆ ನಡೆಸಿ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.