ಏನಿಲ್ಲ ಏನಿಲ್ಲ ಸಿದ್ರಾಮಣ್ಣನ ಬಜೆಟ್ ನಲ್ಲಿ ಏನಿಲ್ಲ: ಬಿಜೆಪಿ ನಾಯಕರ ಘೋಷಣೆ
ಈ ಬಜೆಟ್ ರೈತ ವಿರೋಧಿಯಾಗಿದೆ, ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶಯಿಲ್ಲ ಎಂದು ವಿಜಯೇಂದ್ರ ಟೀಕೆ;
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು 2024-25ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. ಬಜೆಟ್ ನಲ್ಲಿ ಅಭಿವೃದ್ಧಿ ಅಂಶಗಳು ಇಲ್ಲ ಎಂದು ಬಿಜೆಪಿ ನಾಯಕರು ಟೀಕೆ ಮಾಡಿದ್ದಾರೆ. ಈ ನಡುವೆ ಸೋಷಿಯಲ್ ಮಿಡಿಯಾದಲ್ಲಿ ಟ್ರೆಂಡ್ ಆಗಿರುವ ಏನಿಲ್ಲ ಏನಿಲ್ಲ ಹಾಡನ್ನು ಬಳಸಿಕೊಂಡು ಸಿಎಂ ಸಿದ್ರಾಮಣ್ಣನ ಬಜೆಟ್ ನಲ್ಲಿ ಏನಿಲ್ಲ ಎಂದು ಬಿಜೆಪಿಗರು ಘೋಷಣೆ ಕೂಗಿದ್ದಾರೆ.
ರಾಜ್ಯ ಕಾಂಗ್ರೆಸ್ ವಿರುದ್ಧ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು. ಸರ್ಕಾರ ರೈತರ ಮೇಲೆ ಕಾಳಜಿ ಇಲ್ಲದೆ ಬಜೆಟ್ ಮಂಡನೆ ಮಾಡಿದೆ, ಬಜೆಟ್ ಪುಸ್ತಕವನ್ನು ಒಂದು ಬಾರಿ ನೋಡಿದರೆ ರಾಜ್ಯದ ಅಭಿವೃದ್ಧಿ ಯಾವುದು ಇಲ್ಲ. ಕಾಂಗ್ರೆಸ್ ಸರ್ಕಾರ ಅಭಿವೃದ್ಧಿಯಲ್ಲಿ ರಾಜ್ಯವನ್ನು 20 ವರ್ಷ ಹಿಂದೆ ತೆಗೆದು ಕೊಂಡು ಹೋಗಿದ್ದಾರೆ. ರೈತರು ಮಹಿಳೆಯರು ಜನರ ಬಗ್ಗೆ ಕಾಳಜಿ ಇದಿದ್ದರೆ ಇಂತಹ ಕೆಟ್ಟ ಬಜೆಟ್ ಮಾಡುತ್ತಿರಲಿಲ್ಲ. ಉತ್ತರ ಕರ್ನಾಟಕದ ಜನರು ಎದುರು ನೋಡುತ್ತಿದ್ದರು. ಅಲ್ಲದೇ, ಏನಿಲ್ಲ ಏನಿಲ್ಲ ಸಿದ್ರಾಮಣ್ಣನ ಬಜೆಟ್ ನಲ್ಲಿ ಏನಿಲ್ಲ ಎಂದು ಬಿಜೆಪಿ ನಾಯಕರು ಘೋಷಣೆ ಕೂಗಿದರು.
ಕಾಂಗ್ರೆಸ್ ಸರ್ಕಾರದ ಬಜೆಟ್ ಕುರಿತಂತೆ ಪ್ರತಿಕ್ರಿಯೆ ನೀಡಿದ ಶಾಸಕ ಬಿ.ವೈ ವಿಜಯೇಂದ್ರ ಅವರು, ʼʼಈ ಬಜೆಟ್ ರೈತ ವಿರೋಧಿ ಬಜೆಟ್ ಆಗಿದೆ. ಅಭಿವೃದ್ಧಿ ವಿಚಾರದಲ್ಲಿ ಯಾವುದೇ ಅಂಶಯಿಲ್ಲ, ತಮ್ಮ ವೈಫಲ್ಯ ಮುಚ್ಚಿ ಹಾಕಿಕೊಳ್ಳಕ್ಕೆ ಈ ಬಜೆಟ್ ಮಾಡಿದ್ದಾರೆʼʼ ಎಂದು ಟೀಕಿಸಿದರು.
ʼʼಮೊನ್ನೆ ದೆಹಲಿ ಚಲೋ ಮಾಡಿದ್ರು, ಇವತ್ತು ಕೂಡ ಕೇಂದ್ರ ಸರ್ಕಾರದ ವಿರುದ್ದ ಧ್ವನಿ ಎತ್ತಿದ್ದಾರೆ. ಇದು ರೈತರಿಗೆ ಅನುಕೂಲ ಆಗದೇ ಇರೋ ಬಜೆಟ್, ಇವರ ಪ್ರಣಾಳಿಕೆಯಲ್ಲಿ ನೇತಾರರ ಅಭಿವೃದ್ಧಿ ಬಗ್ಗೆ ಹೇಳಿದ್ದರು. ಆದರೆ ಇವತ್ತು ಆ ಮಾತೇ ಇಲ್ಲ, ಇದು ನುಡಿದಂತೆ ನಡೆಯದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ʼʼರಾಜ್ಯ ಸರ್ಕಾರದ ಬಜೆಟ್ನಿಂದ ರೈತರಿಗೆ ಬಡವರಿಗೆ ಅನ್ಯಾಯ ಆಗಲಿದೆ. ಬರಗಾಲ ಸಂದರ್ಭದಲ್ಲಿ ಯಾವುದೇ ರೀತಿ ಸಹಾಯ ಆಗದೇ ಇರೋ ಬಜೆಟ್, ಒಬ್ಬ ಅನುಭವಿ ಸಿಎಂ ಈ ರೀತಿ ಬಜೆಟ್ ಮಾಡ್ತಾರೆ ಅಂತಾ ಯಾರೂ ನಿರೀಕ್ಷೆ ಮಾಡಿರಲಿಲ್ಲ. ರಾಜ್ಯ ಜನರ ಪಾಲಿಗೆ ಬದುಕಿದ್ದು ಸತ್ತಂತೆʼʼ ಎಂದ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ಬಜೆಟ್ ಕುರಿತು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಟುವಾಗಿ ಟೀಕಿಸಿದ್ದು, ʼʼಆರ್ಥಿಕ ತಜ್ಞ ಎಂದು ಕೊಚ್ಚಿಕೊಳ್ಳುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ‘ಅಡ್ಡ ಕಸುಬಿ ಬಜೆಟ್ʼ ಮಂಡಿಸಿದ್ದು, ಇದರಲ್ಲಿ ಅರ್ಥಶಾಸ್ತ್ರ, ಅಭಿವೃದ್ಧಿ, ದೂರದೃಷ್ಟಿ ಯಾವುದೂ ಇಲ್ಲ ಎಂದು ವಾಗ್ದಾಳಿ ನಡೆಸಿದರು.
ʼʼಬಜೆಟ್ ತಯಾರಿಕೆ ಎನ್ನುವುದು ಗಂಭೀರ ಹಾಗೂ ಪವಿತ್ರವಾದ ಸಾಂವಿಧಾನಿಕ ಕರ್ತವ್ಯ. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ನೋಡಿದರೆ ಇದೊಂದು ‘ಅಡ್ಡ ಕಸುಬಿʼ ಬಜೆಟ್ ನಂತೆ ಕಾಣುತ್ತಿದೆ. ಇದರಲ್ಲಿ ಅರ್ಥಶಾಸ್ತ್ರವೂ ಇಲ್ಲ, ಅಭಿವೃದ್ಧಿಯೂ ಇಲ್ಲ, ದೂರದೃಷ್ಟಿಯೂ ಇಲ್ಲʼʼ ಎಂದು ಹೇಳಿದ್ದಾರೆ.
ಹಿಂದೆ ಬಿಜೆಪಿ ಬಜೆಟ್ ಮಂಡನೆ ವೇಳೆ ಕಾಂಗ್ರೆಸ್‌ನವರು ಕಿವಿ ಮೇಲೆ ಹೂ ಇಟ್ಟುಕೊಂಡಿದ್ದರು. ಆದರೆ ಈಗ ನಾವು ಪ್ರತಿಭಟಿಸಿದ್ದನ್ನು ಸ್ಪೀಕರ್ ಮಾಧ್ಯಮಕ್ಕೆ ತಿಳಿಯದಂತೆ ಮಾಡಿದ್ದಾರೆ. ರಾಜ್ಯಕ್ಕೆ 14,000 ಕೋಟಿ ರೂ. ಆದಾಯ ಕಡಿಮೆಯಾದರೆ, ಕೇಂದ್ರದಿಂದ ಬರುವ ಅನುದಾನ 3,000 ಕೋಟಿ ರೂ. ಹೆಚ್ಚಿದೆ. ಸಿಎಂ ಸಿದ್ದರಾಮಯ್ಯನವರು 7 ಕೋಟಿ ಕನ್ನಡಿಗರ ಮೇಲೆ ತೆರಿಗೆಯ ಜೊತೆಗೆ ಸಾಲದ ಹೊರೆ ಹಾಕಿದ್ದಾರೆ. ಒಟ್ಟು ಸಾಲ 1 ಲಕ್ಷ ಕೋಟಿ ರೂ. ದಾಟಿದೆ. ಸಾಲವನ್ನು ಈ ಮಟ್ಟಕ್ಕೆ ದಾಟಿಸಿದ ಮೊದಲ ಮುಖ್ಯಮಂತ್ರಿ ಇವರೇ ಎಂದರು.
ಬಿ.ಎಸ್.ಯಡಿಯೂರಪ್ಪ ಹಾಗೂ ಬಸವರಾಜ ಬೊಮ್ಮಾಯಿ ಬೆಂಗಳೂರಿಗೆ ಉತ್ತಮ ಅನುದಾನ ನೀಡಿದ್ದಾರೆ. ಆದರೆ ಈಗಿನ ಬಜೆಟ್‌ನಲ್ಲಿ ಬೆಂಗಳೂರಿಗೆ ಅನುದಾನವೇ ಇಲ್ಲ. ಇದು ಚುನಾವಣೆಗಾಗಿ ಮಾಡಿದ ಬೋಗಸ್ ಬಜೆಟ್ ಎಂದು ಪ್ರತಿಕ್ರಿಯಿಸಿದ್ದಾರೆ.