ನೇಹಾ ಹತ್ಯೆ ಪ್ರಕರಣ | ಮಹಿಳೆಯರ ಮೇಲಿನ ದೌರ್ಜನ್ಯ ಖಂಡಿಸಿ ಮೈಸೂರಿನಲ್ಲಿ ಬಿಜೆಪಿ ಪ್ರತಿಭಟನೆ

ಮಹಿಳೆಯರ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ಮೈಸೂರಿನ ಗಾಂಧಿಚೌಕದಲ್ಲಿ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.;

Update: 2024-04-22 08:56 GMT
ನೇಹಾ ಹತ್ಯೆ ಖಂಡಿಸಿ ಬಿಜೆಪಿ ಪ್ರತಿಭಟನೆ ನಡೆಸಿತು.
Click the Play button to listen to article

ಮೈಸೂರು: ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ನಗರದ ಗಾಂಧಿಚೌಕದಲ್ಲಿ ಸೋಮವಾರ ( ಏಪ್ರಿಲ್‌ 22) ಪ್ರತಿಭಟನೆ ನಡೆಸಿದರು.

ಮಹಿಳೆಯರ ಮೇಲಿನ ದೌರ್ಜನ್ಯ, ಹುಬ್ಬಳ್ಳಿಯ ವಿದ್ಯಾರ್ಥಿನಿ ನೇಹಾ ಹಿರೇಮಠ ಹತ್ಯೆ ಖಂಡಿಸಿ ನಗರದ ಗಾಂಧಿಚೌಕದಲ್ಲಿ ಜಮಾಯಿಸಿದ ನೂರಾರು ಪ್ರತಿಭಟನಕಾರರು, 'ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡಿಸಿದೆ. ಲವ್ ಜಿಹಾದ್ ಗೆ ಕಡಿವಾಣ ಹಾಕದ ಸರ್ಕಾರ' ಎಂದು ಆಕ್ರೋಶ ವ್ಯಕ್ತಪಡಿಸಿದರು. ಭಿತ್ತಿ ಫಲಕ ಹಿಡಿದು ಧಿಕ್ಕಾರ ಕೂಗಿದರು.

ಈ ವೇಳೆ ಮಾತನಾಡಿದ ವಿಜಯೇಂದ್ರ, 'ಕಳೆದ ಮೂರು ದಿನದಿಂದ ರಾಜ್ಯದಲ್ಲಿ 8 ಹತ್ಯೆಗಳು ನಡೆದಿದ್ದರೂ ಕಾಂಗ್ರೆಸ್ ಸರ್ಕಾರ ಕಣ್ಮುಚ್ಚಿ ಕುಳಿತಿದೆ. ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಸರ್ಕಾರ ಬಂದಾಗಿನಿಂದಲೂ ರಾಜ್ಯಕ್ಕೆ ದರಿದ್ರ ಅಂಟಿಕೊಂಡಿದೆ. ಹೀಗಾಗಿಯೇ ಬರ ಬಂದಿದೆ, ಅಲ್ಪಸಂಖ್ಯಾತರ ತುಷ್ಟೀಕರಣ ನೀತಿ ಅನುಸರಿಸುತ್ತಿದೆ. ಹೆಣ್ಣು ಮಕ್ಕಳಿಗೆ ಅಭದ್ರತೆ ಕಾಡುತ್ತಿದೆ' ಎಂದು ದೂರಿದರು.

'ನೇಹಾ ಪೋಷಕರಿಗೆ ಮುಖ್ಯಮಂತ್ರಿ ಸಾಂತ್ವನ ಹೇಳಲಿಲ್ಲ. ವೈಯಕ್ತಿಕ ಕಾರಣಕ್ಕೆ ಪ್ರಕರಣ ನಡೆದಿದೆಯೆಂದು ಹಗುರವಾಗಿ ಮಾತನಾಡಿದರು. ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸಬೇಕು. ಆಗ ರಾಜ್ಯದಲ್ಲಿ ಇಂಥ ಹತ್ಯೆಗಳು ಮರುಕಳಿಸದಂತೆ ಕ್ರಮವಹಿಸಲು ಸಾಧ್ಯವಾಗುತ್ತದೆ. ಕಾನೂನು ಸುವ್ಯವಸ್ಥೆ ಹದಗೆಡಿಸಿರುವ ಮುಖ್ಯಮಂತ್ರಿ ಅವರೇ ಹೊಣೆ ಹೊರಬೇಕು. ನಾಡಿನ ತಾಯಂದಿರ ಮೇಲೆ ಗೌರವ ಇದ್ದರೆ, ರಾಜೀನಾಮೆ ನೀಡಬೇಕು' ಎಂದು ಆಗ್ರಹಿಸಿದರು.

ಹಾವೇರಿಯಲ್ಲೂ ಬಿಜೆಪಿ ಪ್ರತಿಭಟನೆ

ನೇಹಾ ಹತ್ಯೆ ಖಂಡಿಸಿ ಹಾವೇರಿಯಲ್ಲೂ ಸೋಮವಾರ (ಏ. 22) ಅಖಿಲ ಭಾರತಿಯ ವಿದ್ಯಾರ್ಥಿ ಪರಿಷತ್ ವತಿಯಿಂದ ಪ್ರತಿಭಟನೆ ನಡೆಯಿತು. ಈ ಪ್ರತಿಭಟನೆಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಹಾವೇರಿ ಗದಗ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಬಸವರಾಜ ಬೊಮ್ಮಾಯಿ ಪಾಲ್ಗೊಂಡಿದ್ದರು.

ಈ ವೇಳೆ ಮಾತನಾಡಿದ ಬಸವರಾಜ ಬೊಮ್ಮಾಯಿ, ಹುಬ್ಬಳ್ಳಿ ಕಾಲೇಜು ವಿದ್ಯಾರ್ಥಿನಿ ನೇಹಾ ಹಿರೇಮಠ ಕೊಲೆಯ ಹಿಂದೆ ದೊಡ್ಡ ಷಢ್ಯಂತ್ರ ಇದ್ದು, ಇದು ವಯಕ್ತಿಕ ವಿಚಾರವಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ. ನಾವು ಅತ್ಯಂತ ದುಃಖ, ಆಘಾತದ ಸಂದರ್ಭದಲ್ಲಿ ಸೇರಿದ್ದೇವೆ. ಹೆಣ್ಣು ಮಕ್ಕಳು ಮಾತನಾಡಿದ್ದು ಕರಳು ಕಿತ್ತು ಬರುವಂತಿದೆ. ಅವನು ಹಾಡಹಗಲೆ ಭಯಂಕರ ಕೊಲೆ ಮಾಡಿದ್ದಾನೆ ಎಂದರೆ ಅವನು ಒಬ್ಬನೇ ಇಲ್ಲ. ಇದು ಕೇವಲ ವೈಯಕ್ತಿಕ ವಿಚಾರ ಅಲ್ಲ. ಇದರ ಹಿಂದೆ ದೇಶದ ಸಾಮಾಜಿಕ ವಿಚಾರ ಇದೆ ಎಂದು ಹೇಳಿದರು.

ನಾವು ಅಧಿಕಾರದಲ್ಲಿ ಇದ್ದಾಗ ಚಿಕ್ಕಮಗಳೂರಿನಲ್ಲಿ ಅಮಾಯಕ ಮಹಿಳೆಯ ಮೇಲೆ ಅತ್ಯಾಚಾರ ನಡೆದಾಗ ಅವನನ್ನು ಗಲ್ಲಿಗೇರಿಸುವಂತೆ ಕ್ರಮ ಕೈಗೊಂಡಿದ್ದೆವು. ನೇಹಾ ತಂದೆ ರಾಜ್ಯದ ಪೊಲೀಸರ ಮೇಲೆ ನಂಬಿಕೆ ಇಲ್ಲ ಅಂತ ಹೇಳಿದ್ದಾರೆ. ರಾಜ್ಗ ಸರ್ಕಾರದ ನಡವಳಿಕೆ ಅವರಿಗೆ ಬೇಸರ ತರಿಸಿದೆ. ಈ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು.

Tags:    

Similar News