ಧರ್ಮಸ್ಥಳದ ಆಸ್ತಿ ಒಡೆಯುವುದು ಬಿಜೆಪಿಯ ಹುನ್ನಾರ: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ
ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಿ ನಾಟಕವಾಡುತ್ತಿದ್ದಾರೆ' ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆಗೆ, "ಹೌದು, ನಾನು ದಿನಾ ನಾಟಕ ಮಾಡುತ್ತಿದ್ದೇನೆ" ಎಂದು ವ್ಯಂಗ್ಯಭರಿತ ಉತ್ತರ ನೀಡಿದರು.;
ಧರ್ಮಸ್ಥಳದ ವಿಚಾರದಲ್ಲಿ ನಡೆಯುತ್ತಿರುವ ವಿವಾದವು ಇದೀಗ ಮತ್ತಷ್ಟು ತಾರಕಕ್ಕೇರಿದ್ದು, "ಧರ್ಮಸ್ಥಳದ ಆಸ್ತಿಯನ್ನು ಒಡೆಯುವುದೇ ಬಿಜೆಪಿಯ ಆಂತರಿಕ ಯೋಜನೆ. ಅದಕ್ಕಾಗಿಯೇ ಅವರು ಈ ವಿಷಯದಲ್ಲಿ ರಾಜಕೀಯ ಮಾಡುತ್ತಿದ್ದಾರೆ" ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯ ಸರ್ಕಾರವೇ ಧರ್ಮಸ್ಥಳದ ಆಸ್ತಿ ಕಬಳಿಸಲು ಯತ್ನಿಸುತ್ತಿದೆ ಎಂಬ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಅವರು, "ಅಶೋಕ್ ಅವರಿಗೆ ಬುದ್ಧಿಭ್ರಮಣೆಯಾಗಿದೆ," ಎಂದು ತಿರುಗೇಟು ನೀಡಿದರು.
ಮಾಗಡಿ ಪಟ್ಟಣದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಶಿವಕುಮಾರ್, "ಅಶೋಕ್ ಅವರು ತಾವೇನು ಮಾತನಾಡುತ್ತಿದ್ದೇವೆ ಎಂಬುದರ ಅರಿವಿಲ್ಲದೆ ಮಾತನಾಡುತ್ತಾರೆ. ಬಿಜೆಪಿಯವರು ಮೊದಲಿನಿಂದಲೂ ಜಾತಿ ಮತ್ತು ಭಾವನೆಗಳ ಆಧಾರದ ಮೇಲೆಯೇ ರಾಜಕೀಯ ಮಾಡಿಕೊಂಡು ಬಂದವರು" ಎಂದು ಕಿಡಿಕಾರಿದರು.
'ಆರ್‌ಎಸ್‌ಎಸ್ ಗೀತೆ ಹಾಡಿದ್ದಕ್ಕೆ ಡಿಕೆಶಿ ಕ್ಷಮೆ ಕೇಳಿ ನಾಟಕವಾಡುತ್ತಿದ್ದಾರೆ' ಎಂಬ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಹೇಳಿಕೆಗೆ, "ಹೌದು, ನಾನು ದಿನಾ ನಾಟಕ ಮಾಡುತ್ತಿದ್ದೇನೆ" ಎಂದು ವ್ಯಂಗ್ಯಭರಿತ ಉತ್ತರ ನೀಡಿದರು.
ಎಚ್‌ಡಿಕೆ ವಿರುದ್ಧ ವಾಗ್ದಾಳಿ: 'ನನಗೂ ಎಲ್ಲಾ ವಿದ್ಯೆ ಗೊತ್ತು'
ಇದೇ ಸಂದರ್ಭದಲ್ಲಿ, ರಾಮನಗರ ಜಿಲ್ಲೆಯ ಮರುನಾಮಕರಣ ವಿಚಾರವಾಗಿ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧವೂ ಡಿ.ಕೆ. ಶಿವಕುಮಾರ್ ವಾಗ್ದಾಳಿ ನಡೆಸಿದರು. "ನಾವು ಬೆಂಗಳೂರು ದಕ್ಷಿಣ ಜಿಲ್ಲೆಯ ಮೂಲದವರು, ರಾಮನಗರ ನಮ್ಮ ಜಿಲ್ಲಾ ಕೇಂದ್ರ. ನಮ್ಮ ಹೆಸರಿನೊಂದಿಗೆ ನಮ್ಮೂರಿನ ಇನಿಷಿಯಲ್ ಇದೆ. ಕುಮಾರಸ್ವಾಮಿ ಅವರ ಹೆಸರಿನ ಮುಂದಿರುವ ಇನಿಷಿಯಲ್ ತೆಗೆಯಲು ಹೇಗೆ ಸಾಧ್ಯವಿಲ್ಲವೋ, ಹಾಗೆಯೇ ನಮ್ಮ ಹೆಸರಿನ ಜೊತೆಗಿನ ಬೆಂಗಳೂರಿನ ಹೆಸರು ತೆಗೆಯಲು ಸಾಧ್ಯವಿಲ್ಲ. ಅದಕ್ಕಾಗಿಯೇ, ಜಿಲ್ಲೆಯನ್ನು 'ಬೆಂಗಳೂರು ದಕ್ಷಿಣ' ಎಂದು ಮರುನಾಮಕರಣ ಮಾಡಿದ್ದೇವೆ" ಎಂದು ಅವರು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.
"ಈ ಮರುನಾಮಕರಣವನ್ನು ತಡೆಯಲು ಕುಮಾರಸ್ವಾಮಿ ದೆಹಲಿ ಮಟ್ಟದಲ್ಲಿ ಪ್ರಯತ್ನಿಸಿದರು, ಇಲ್ಲಿ ಪ್ರತಿಭಟನೆ ನಡೆಸಲು ಕುಮ್ಮಕ್ಕು ಕೊಟ್ಟರು. ಆದರೆ, ನನಗೂ ಎಲ್ಲಾ ವಿದ್ಯೆ ಗೊತ್ತಿದ್ದರಿಂದ, ಕಡೆಗೂ ನಾನು ಜಿಲ್ಲೆಯ ಹೆಸರನ್ನು ಬದಲಾಯಿಸಿಯೇ ತೀರಿದೆ. ದೇವೇಗೌಡರು ಮತ್ತು ಕುಮಾರಸ್ವಾಮಿ ಅವರು ರಾಮನಗರಕ್ಕೆ ಬಂದು ರಾಜಕಾರಣ ಮಾಡಿದಾಗ ನಾವು ವಿರೋಧಿಸಿದ್ದೇವೆಯೇ? ಅದೇ ರೀತಿ, ಯಾರೇ ವಿರೋಧಿಸಿದರೂ ನಮ್ಮತನವನ್ನು ನಾವು ಬಿಟ್ಟುಕೊಡುವುದಿಲ್ಲ" ಎಂದು ಅವರು ಸವಾಲು ಹಾಕಿದರು.