ಬಿಜೆಪಿ ಕಚೇರಿ ಸ್ಫೋಟಕ್ಕೆ ಸಂಚು | ಎನ್‌ಐಎ ತನಿಖೆಯಲ್ಲಿ ಬಹಿರಂಗ: ಗೃಹ ಸಚಿವ ಡಾ. ಜಿ ಪರಮೇಶ್ವರ್

ಎನ್‌ಐಎ ಚಾರ್ಜ್‌ ಶೀಟ್‌ ವಿವರಗಳು ಬಹಿರಂಗವಾಗುತ್ತಲೇ ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಆರೋಪ- ಪ್ರತ್ಯಾರೋಪಗಳು ಭುಗಿಲೆದ್ದಿವೆ.

Update: 2024-09-10 11:09 GMT

ಅಯೋಧ್ಯೆಯಲ್ಲಿ ಬಾಲ ಶ್ರೀರಾಮ ಪ್ರಾಣ ಪ್ರತಿಷ್ಠಾಪನೆ ದಿನವೇ ಉಗ್ರರು ಬೆಂಗಳೂರಿನ ರಾಜ್ಯ ಬಿಜೆಪಿ ಕಚೇರಿಯನ್ನೇ ಸ್ಫೋಟಿಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಸಂಗತಿ ಈಗ ಭಾರೀ ಸಂಚಲನ ಮೂಡಿಸಿದೆ. ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ತನಿಖೆ ನಡೆಸಿದ ಎನ್‌ಐಎ, ಪ್ರಕರಣದ ಕುರಿತು ನ್ಯಾಯಾಲಯಕ್ಕೆ ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಈ ಅಂಶವನ್ನು ಉಲ್ಲೇಖಿಸಿದೆ.

ಎನ್‌ಐಎ ಚಾರ್ಜ್‌ ಶೀಟ್‌ ವಿವರಗಳು ಬಹಿರಂಗವಾಗುತ್ತಲೇ ರಾಜ್ಯದಲ್ಲಿ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಆರೋಪ- ಪ್ರತ್ಯಾರೋಪಗಳು ಭುಗಿಲೆದ್ದಿವೆ.

ಈ ನಡುವೆ, ಮಂಗಳವಾರ ಬೆಳಿಗ್ಗೆ ಎನ್‌ ಐಎ ಚಾರ್ಜ್‌ಶೀಟ್‌ ಉಲ್ಲೇಖದ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್‌, ಬಿಜೆಪಿ ಕಚೇರಿ ಸ್ಫೋಟಿಸುವ ಬಗ್ಗೆ ಸಂಚು ನಡೆಸಿದ್ದರು ಎಂಬ ಅಂಶವನ್ನು ಎನ್‌ಐಎ ಸಲ್ಲಿಸಿರುವ ಚಾರ್ಜ್‌ ಶೀಟ್‌ನಲ್ಲಿ ಉಲ್ಲೇಖಿಸಿದೆ ಎಂದು ಹೇಳಿದರು.

ರಾಮೇಶ್ವರಂ ಕೆಫೆ ಸ್ಫೋಟ ಪ್ರಕರಣದ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖವಾಗಿರುವಂತೆ ಬಿಜೆಪಿ ಕಚೇರಿಯನ್ನು ಸ್ಫೋಟಿಸಲು ಶಂಕಿತರು ಸಂಚು ರೂಪಿಸಿದ್ದರು. ಸ್ಫೋಟಕ ತೆಗೆದುಕೊಂಡು ಬಿಜೆಪಿ ಕಚೇರಿ ಬಳಿ ತೆರಳಿ ಅಲ್ಲಿ ಇಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ವಾಪಸ್ ಬಂದು ಬೈಕ್ನಲ್ಲಿ ಇಟ್ಟಿರುವುದಾಗಿ ಶಂಕಿತರು ಹೇಳಿರುವುದಾಗಿ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮಾಹಿತಿ ಗೃಹ ಸಚಿವರು ನೀಡಿದರು.

ಚಾರ್ಜ್‌ ಶೀಟ್‌ ಗೌಪ್ಯ ದಾಖಲೆಯಲ್ಲ

ರೇಣುಕಾಸ್ವಾಮಿ ಕೊಲೆ‌ ಪ್ರಕರಣದ ಚಾರ್ಜ್‌ಶೀಟ್‌ನ ವಿವರಗಳು ಮಾಧ್ಯಮಗಳ ಮೂಲಕ ಬಹಿರಂಗವಾಗುತ್ತಿರುವ ಕುರಿತ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಡಾ ಜಿ ಪರಮೇಶ್ವರ್‌, ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದ ಬಳಿಕ ಪ್ರಕರಣದ ವಿರುದ್ಧ ವಾದಿಸುವ ವಕೀಲರಿಗೂ ಚಾರ್ಜ್‌ಶೀಟ್ ಪ್ರತಿ ನೀಡಲಾಗುತ್ತದೆ. ಚಾರ್ಜ್‌ಶೀಟ್ ಗೌಪ್ಯ ದಾಖಲಾತಿ ಏನೂ ಅಲ್ಲ. ಹಾಗಾಗಿ ಚಾರ್ಜ್‌ಶೀಟ್‌ನಲ್ಲಿರುವ ಮಾಹಿತಿಗಳೆಲ್ಲಾ ಸಹಜವಾಗೇ ಹೊರಗೆ ಬರುತ್ತವೆ ಎಂದು ಹೇಳಿದರು.

ಸಾರ್ವಜನಿಕವಾಗಿ ಮಾತನಾಡುವುದನ್ನು ಕೋರ್ಟ್ ಪರಿಗಣಿಸುವುದಿಲ್ಲ. ಸಾಕ್ಷ್ಯ, ದಾಖಲೆಗಳ ಆಧಾರದ ಮೇಲೆ ಪ್ರಕರಣ ನಡೆಯುತ್ತದೆ. ಪೊಲೀಸರು ಚಾರ್ಜ್‌ಶೀಟ್ ಸಲ್ಲಿಸಿ, ಸಾಕ್ಷ್ಯಾಧಾರಗಳನ್ನು ಕೋರ್ಟ್‌ಗೆ ನೀಡುತ್ತಾರೆ.‌ ಆ ಆಧಾರದ ಮೇಲೆ ಪ್ರಕರಣದ ವಿಚಾರಣೆ ನಡೆಯುತ್ತದೆ ಎಂದು ಪ್ರತಿಕ್ರಿಯೆ ನೀಡಿದರು.

ಸಿಎಂ ಸ್ಥಾನ: ಚರ್ಚೆ ಅನಗತ್ಯ

ಮುಖ್ಯಮಂತ್ರಿ ಬದಲಾವಣೆ ಹೇಳಿಕೆಗೆ ಕಡಿವಾಣ ಹಾಕಲು ಹೈಕಮಾಂಡ್‌ಗೆ ಪತ್ರ ಬರೆದಿರುವ ಕುರಿತು ಮಾತನಾಡಿ, ಮುಖ್ಯಮಂತ್ರಿಗಳ ಸ್ಥಾನದ‌ ಬಗ್ಗೆ ಚರ್ಚೆ ಅನಗತ್ಯ ಎಂಬ ವಿಚಾರವನ್ನು ನಾನೂ ಸಹ ಹೇಳಿದ್ದೇನೆ. ಮಾಧ್ಯಮದವರು ಮುಖ್ಯಮಂತ್ರಿಯಾಗುತ್ತೀರಾ ಎಂದು ಕೇಳಿದಾಗ, ನಾವು ಬೇಡ ಅಂತ ಯಾಕೆ ಹೇಳಬೇಕು ಅಂತ ನನಗೆ ಆ ಸ್ನೇಹಿತರು ಹೇಳಿದ್ದಾರೆ. ಅಷ್ಟು ಬಿಟ್ಟರೆ ಬೇರೆ ಏನೂ ಇಲ್ಲ ಎಂದರು.

ಸಚಿವ ಎಂ.ಬಿ.ಪಾಟೀಲ್ ಅವರು ಇಲಾಖೆಯ ಕೆಲಸದ ನಿಮಿತ್ತ ದೆಹಲಿಗೆ ಹೋಗಿದ್ದಾರೆ‌. ನಾನೂ ಸಹ ಗೃಹ ಇಲಾಖೆಗೆ ಸಂಬಂಧಿಸಿದ ಕೆಲಸ ಇದ್ದರೆ ದೆಹಲಿಗೆ ಹೋಗುತ್ತೇನೆ. ದೆಹಲಿಗೆ ಹೋದಾಕ್ಷಣ ಮುಖ್ಯಮಂತ್ರಿ ಹುದ್ದೆಗೆ ಲಾಭಿ ಮಾಡಲು ಹೋಗಿದ್ದರು ಅಂತ ಹೇಳಿ ಬಿಟ್ಟರೆ ಹೇಗೆ? ಈ ಬಗ್ಗೆ ಚರ್ಚೆಯೇ ಅನಗತ್ಯ ಎಂದು ಹೇಳಿದರು‌.

ಬಿಜೆಪಿ ಕಚೇರಿಗೆ ಭದ್ರತೆ ಹೆಚ್ಚಳ

ಸ್ಫೋಟ ಸಂಚು ಹಿನ್ನೆಲೆಯಲ್ಲಿ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಮುಖ್ಯ ಕಚೇರಿಗೆ ಪೊಲೀಸ್​ ಭದ್ರತೆ ಹೆಚ್ಚಿಸಲಾಗಿದೆ.

ಬಿಜೆಪಿ ಕಚೇರಿಯಲ್ಲಿ ಬಾಂಬ್‌ ಸ್ಫೋಟಿಸುವ ಸಂಚನ್ನು ಐಸಿಸ್‌ ಶಂಕಿತ ಉಗ್ರರು ರೂಪಿಸಿದ್ದರು ಎಂಬ ಆಘಾತಕಾರಿ ಸಂಗತಿ ಎನ್‌ಐಎ ತನಿಖೆಯಲ್ಲಿ ಬಯಲಾಗಿದೆ. ಈ ಹಿನ್ನೆಲೆಯಲ್ಲಿ ಭದ್ರತೆ ಹೆಚ್ಚಿಸಲಾಗಿದ್ದು, ಕಚೇರಿ ಎದುರು ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದೆ. ನಿತ್ಯ ಬಿಜೆಪಿ ಕಚೇರಿಗೆ ಮಲ್ಲೇಶ್ವರ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್‌, ಸಬ್ ಇನ್ಸ್‌ಪೆಕ್ಟರ್‌ ಭೇಟಿ ಮಾಡಿ ಭದ್ರತೆ ಪರಿಶೀಲನೆ ನಡೆಸಲಿದ್ದಾರೆ ಎಂದು ಹೇಳಲಾಗಿದೆ. ಜೊತೆಗೆ ರಾಜ್ಯದ ಜಿಲ್ಲಾ ಕೇಂದ್ರಗಳ ಬಿಜೆಪಿ ಕಚೇರಿಗಳಿಗೂ ಪೊಲೀಸ್‌ ಭದ್ರತೆ ಹಾಕಲಾಗಿದೆ.

Tags:    

Similar News