ನಗರ್ತಪೇಟೆ ಪ್ರಕರಣ | ದ್ವೇಷ ಭಾಷಣ ಆರೋಪ: ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಫ್‌ಐಆರ್

ಸಂಸದ ‌ತೇಜಸ್ವಿ ಸೂರ್ಯ ಹೇಳಿಕೆಯು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.;

Update: 2024-03-21 10:31 GMT

ಬೆಂಗಳೂರು: ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿರುವಾಗ ಕೋಮು ಸಂಘರ್ಷಕ್ಕೆ ಅವಕಾಶ ನೀಡುವ ರೀತಿ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ನಗರ್ತಪೇಟೆಯಲ್ಲಿ ಅಂಗಡಿ ಮಾಲೀಕನ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ದ್ವೇಷ ಹರಡುವ ಪೋಸ್ಟ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ ತೇಜಸ್ವಿ ಸೂರ್ಯ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ದೂರು ನೀಡಲಾಗಿತ್ತು.

ಇದನ್ನೂ ಓದಿ: ದ್ವೇಷ ಹೇಳಿಕೆ: ಬಿಜೆಪಿ ನಾಯಕ ಸಿ ಟಿ ರವಿ ವಿರುದ್ಧ ಎಫ್‌ಐಆರ್‌

ಚುನಾವಣಾ ಆಯೋಗದ ಫ್ಲೈಯಿಂಗ್ ಸ್ಕ್ವಾಡ್ ತಂಡ (FST)ದ ಮುಖ್ಯಸ್ಥರು ನೀಡಿದ ದೂರಿನನ್ವಯ ಅಧ್ಯಕ್ಷ ಸೂರ್ಯ ವಿರುದ್ಧ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಠಾಣಾ ಮೂಲಗಳು ತಿಳಿಸಿವೆ.

ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 153 (a) (ವಿವಿಧ ಧಾರ್ಮಿಕ, ಜನಾಂಗೀಯ ಅಥವಾ ಇತರ ಗುಂಪುಗಳ ನಡುವೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವುದು), 295 (a) ಕಾಯ್ದೆ, ಜನಪ್ರಾತಿನಿಧ್ಯ ಕಾಯಿದೆ 123 (3a) (ಅಭ್ಯರ್ಥಿ ಅಥವಾ ಆತನ ಏಜೆಂಟರಿಂದ ಭಾರತದ ವಿವಿಧ ವರ್ಗದ ನಾಗರಿಕರ ನಡುವೆ ದ್ವೇಷ ಅಥವಾ ದ್ವೇಷದ ಭಾವನೆಗಳನ್ನು ಉತ್ತೇಜಿಸುವುದು ಅಥವಾ ಉತ್ತೇಜಿಸಲು ಪ್ರಯತ್ನಿಸುವುದು) ಕಾಯಿದೆಯಡಿಯಲ್ಲಿ ತೇಜಸ್ವೀ ಸೂರ್ಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಇದನ್ನೂ ಓದಿ: ದ್ವೇಷ ಭಾಷಣ | ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ, ಪಿ.ಸಿ ಮೋಹನ್ ವಿರುದ್ಧ ದೂರು

ಮಾದರಿ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ, ದ್ವೇಷ ಭಾಷಣ ಹಾಗೂ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸಿದ ಆರೋಪದ ಮೇಲೆ ಸಂಸದರಾದ ತೇಜಸ್ವಿ ಸೂರ್ಯ, ಶೋಭಾ ಕರಂದ್ಲಾಜೆ ಹಾಗೂ ಪಿ.ಸಿ ಮೋಹನ್ ವಿರುದ್ಧ ಕ್ರಮಕೈಗೊಳ್ಳುವಂತೆ ʼದ್ವೇಷದ ಮಾತುಗಳ ವಿರುದ್ಧ ಅಭಿಯಾನʼ (Campaign against hate speech) ಸಂಘಟನೆ ಬುಧವಾರ (ಮಾ.20) ಭಾರತೀಯ ಚುನಾವಣಾ ಆಯೋಗ, ಕರ್ನಾಟಕ ಚುನಾವಣಾ ಆಯೋಗ, ಹಲಸೂರು ಗೇಟ್ ಪೊಲೀಸ್ ಠಾಣೆ ಹಾಗೂ ಜಿಲ್ಲಾ ಚುನಾವಣಾಧಿಕಾರಿ ತುಷಾರ್ ಗಿರಿನಾಥ್ ಅವರಿಗೆ ದೂರು ಸಲ್ಲಿಸಿತ್ತು.

ದೂರು ಸಲ್ಲಿಕೆ ಬಳಿಕ ಮಾತನಾಡಿದ್ದ ಸಂಘಟನೆಯ ಸದಸ್ಯೆ ಶಿಲ್ಪಾ ಪ್ರಸಾದ್ ಅವರು, “ನಗರ್ತಪೇಟೆ ಗಲಾಟೆ ಪ್ರಕರಣವನ್ನು ಉದ್ದೇಶ ಪೂರ್ವಕವಾಗಿ ತಿರುಚಲಾಗಿದೆ. ಇದನ್ನು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷ ಬಿತ್ತುವುದಕ್ಕೆ ಬಳಸಿಕೊಳ್ಳಲಾಗುತ್ತಿದ್ದು, ಪ್ರಕರಣವನ್ನು ತಿರುಚಿ, ಸುಳ್ಳು ಮಾಹಿತಿ ನೀಡಲಾಗುತ್ತಿದೆ” ಎಂದು ಆರೋಪಿಸಿದ್ದರು.

ಸೂರ್ಯ ಅವರ ಹೇಳಿಕೆಯು ಮುಸ್ಲಿಂ ಸಮುದಾಯವನ್ನು ಗುರಿಯಾಗಿಸಿಕೊಂಡು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಹುಟ್ಟುಹಾಕಲು ಪ್ರಯತ್ನಿಸಿದೆ ಎಂದು ದೂರಿನಲ್ಲಿ ತಿಳಿಸಲಾಗಿತ್ತು.

Tags:    

Similar News