Channapatna By-Election | ಕಾಂಗ್ರೆಸ್ ಪ್ರಚಾರ ಸಭೆಯಲ್ಲಿ ಬಿಜೆಪಿ ಶಾಸಕ ಭಾಗಿ
ಅಚ್ಛರಿಯ ಬೆಳವಣಿಗೆ ಎನ್ನುವಂತೆ ಕಾಂಗ್ರೆಸ್ ನಾಯಕರ ಜೊತೆ ಬಿಜೆಪಿ ಶಾಸಕ ಬಹಿರಂಗವಾಗಿ ಪ್ರಚಾರಕ್ಕಿಳಿದಿದ್ದಾರೆ.
ರಾಜ್ಯದಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಈ ಮಧ್ಯೆ ಚನ್ನಪಟ್ಟಣ ಕ್ಷೇತ್ರವನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರು ಗೆಲ್ಲಬೇಕೆಂಬ ಜಿದ್ದಾಜಿದ್ದಿಯಲ್ಲಿ ಇದ್ದಾರೆ. ಈ ಮಧ್ಯೆ ಅಚ್ಛರಿಯ ಬೆಳವಣಿಗೆ ಎನ್ನುವಂತೆ ಕಾಂಗ್ರೆಸ್ ನಾಯಕರ ಜೊತೆ ಬಿಜೆಪಿ ಶಾಸಕ ಬಹಿರಂಗವಾಗಿ ಪ್ರಚಾರಕ್ಕಿಳಿದಿದ್ದಾರೆ.
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ಪರ ಕಾಂಗ್ರೆಸ್ ದಿಗ್ಗಜರು ಚಕ್ಕರೆ ಗ್ರಾಮದಲ್ಲಿ ಬೃಹತ್ ಬಹಿರಂಗ ಸಭೆ ನಡೆಸಿದರು. ಈ ವೇಳೆ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ದಿಢೀರ್ ಪ್ರತ್ಯಕ್ಷವಾಗಿದ್ದಾರೆ. ಚನ್ನಪಟ್ಟಣದಲ್ಲಿ ಬುಧವಾರ ಕಾಂಗ್ರೆಸ್ ಸಭೆಗೆ ಬಂದು ಹೋಗಿದ್ದ ಸೋಮಶೇಖರ್, ಗುರುವಾರ ಡಿಸಿಎಂ ಡಿಕೆಶಿ ಜೊತೆಗಿನ ಸಭೆಯಲ್ಲಿ ಬಹಿರಂಗವಾಗಿಯೇ ಹಾಜರಾಗಿದ್ದಾರೆ.
ಚನ್ನಪಟ್ಟಣದ ಚಕ್ಕರೆ ಗ್ರಾಮದ ಸಭೆಯಲ್ಲಿ ಕಾಂಗ್ರೆಸ್ ಶಾಸಕ ಬಾಲಕೃಷ್ಣ ವಾಗ್ದಾಳಿ ನಡೆಸಿದ್ದು, ಯೋಗೇಶ್ವರ್ ಅವರ ಮೇಲೆ ದೇವೇಗೌಡ್ರು, ಕುಮಾರಸ್ವಾಮಿ ಎಲ್ಲರೂ ದಾಳಿ ಮಾಡ್ತಿದ್ದಾರೆ. ಯೋಗೇಶ್ವರ್ ಅವರನ್ನು ಕರೆದುಕೊಂಡು ಹೋಗಿ ಅಳಿಯನ ಎಂಪಿ ಮಾಡಿಕೊಂಡರು. ಇವಾಗ ಅದೇ ಯೋಗೇಶ್ವರ್ ಅವರನ್ನು, ಅವರು ಎಂಎಲ್ ಎ ಮಾಡಬೇಕು ಅಲ್ವಾ? ಯೋಗೇಶ್ವರ್ ಗೆ ಕುಮಾರಸ್ವಾಮಿ ದ್ರೋಹ ಮಾಡಿದ್ದಾರೆ ಅಲ್ವಾ..? ಯೋಗೇಶ್ವರ್ ರನ್ನು ತೆಗೆದೇ ತೆಗಿತೀನಿ ಅಂತೀದ್ದರಲ್ಲ ದೇವೇಗೌಡ್ರೇ ಇದು ನ್ಯಾಯನಾ..? ಎಂದು ಪ್ರಶ್ನೆ ಮಾಡಿದ್ದಾರೆ.
ಚಕ್ಕರೆ ಅಭಿವೃದ್ಧಿಯಾಗಿಲ್ಲ ಅಂತಿದ್ದೀರಲ್ಲ ಕುಮಾರಸ್ವಾಮಿಯವರೇ ನಿಮಗೆ ನಾಚಿಕೆ ಆಗಲ್ವಾ..? ನೀವು ತಾನೇ ಇಲ್ಲಿ ಶಾಸಕರಾಗಿದ್ದವರು.. ಯೋಗೇಶ್ವರ್ ಅಲ್ಲ ಪಾಪ ಮಾಡಿದ್ದು, ಕುಮಾರಸ್ವಾಮಿಯವರೇ ನೀವು ಆರು ವರ್ಷಗಳಲ್ಲಿ ಎಷ್ಟು ಬಾರಿ ಚಕ್ಕರೆಗೆ ಬಂದಿದ್ದೀರಾ..? ಎಂದು ಕುಮಾರಸ್ವಾಮಿ ಅವರಿಗೆ ಬಾಲಕೃಷ್ಣ ಪ್ರಶ್ನೆ ಮಾಡಿದ್ದಾರೆ.
ಸಭೆಯಲ್ಲಿ ಡಿಸಿಎಂ ಡಿಕೆ ಶಿವಕುಮಾರ್, ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್, ರಾಮನಗರ ಜಿಲ್ಲಾ ಉಸ್ತುವಾರಿ ಸಚಿವ ರಾಮಲಿಂಗರೆಡ್ಡಿ, ಕಾಂಗ್ರೆಸ್ ಅಭ್ಯರ್ಥಿ ಸಿಪಿ ಯೋಗೇಶ್ವರ್, ಶಾಸಕ ಎ ಸಿ ಶ್ರೀನಿವಾಸ್, ಹಾಸನ ಸಂಸದ ಶ್ರೇಯಸ್ ಪಟೇಲ್, ಕಾಂಗ್ರೆಸ್ ಶಾಸಕ ಬಾಲಕೃಷ್ಣ, ಮಾಜಿ ಪರಿಷತ್ ಸದಸ್ಯ ಗೋಪಾಲಸ್ವಾಮಿ ಸೇರಿ ಹಲವರು ಉಪಸ್ಥಿತರಿದ್ದರು.