ಅತ್ಯಾಚಾರ ಪ್ರಕರಣ; ಬಿಜೆಪಿ ಶಾಸಕ ಮುನಿರತ್ನಗೆ ಮಧ್ಯಂತರ ರಕ್ಷಣೆ

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದರು.;

Update: 2025-06-03 05:17 GMT

ಮಧ್ಯವಯಸ್ಕ ಮಹಿಳೆಯೊಬ್ಬರ ಮೇಲೆ ತಮ್ಮ ಸಹಚರರಿಂದಲೇ ಅತ್ಯಾಚಾರ ಮಾಡಿಸಿದ ಆರೋಪ ಪ್ರಕರಣದಲ್ಲಿ ಮೊದಲ ಆರೋಪಿಯಾಗಿರುವ ರಾಜರಾಜೇಶ್ವರಿ ನಗರ ಕ್ಷೇತ್ರದ ಬಿಜೆಪಿ ಶಾಸಕ ಮುನಿರತ್ನ ಅವರಿಗೆ ಜೂನ್ 3ರವರೆಗೆ ಬಂಧಿಸದಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಮಧ್ಯಂತರ ರಕ್ಷಣೆ ನೀಡಿದೆ.

ಶಾಸಕರು ಮತ್ತು ಸಂಸದರ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣೆ ನಡೆಸುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ ಗಜಾನನ ಭಟ್ ಅವರು ಸೋಮವಾರ ಈ ಪ್ರಕರಣದ ವಿಚಾರಣೆ ನಡೆಸಿದರು.

ವಿಚಾರಣೆ ವೇಳೆ, ಪ್ರಾಸಿಕ್ಯೂಷನ್ ಪರ ಹಾಜರಿದ್ದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಸಿ.ಎಸ್.ಪ್ರದೀಪ್, "ಆರೋಪಿ ಮುನಿರತ್ನ ಅವರು ಸಂತ್ರಸ್ತೆಗೆ ಬೆದರಿಕೆ ಒಡ್ಡಿದ ಆರೋಪಕ್ಕೆ ಸಂಬಂಧಿಸಿದಂತೆ ಆರ್‌ಎಂಸಿ ಯಾರ್ಡ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಕುರಿತ ಕೇಸ್ ಡೈರಿ ಮತ್ತು ಇತರೆ ದಾಖಲೆಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲು ಸಮಯಾವಕಾಶ ನೀಡಬೇಕು" ಎಂದು ಕೋರಿದರು.

ಆರೋಪಿಗಳ ಪರ ವಕೀಲರ ಪ್ರತಿರೋಧ

ಇದಕ್ಕೆ ಪ್ರತಿರೋಧ ವ್ಯಕ್ತಪಡಿಸಿದ ಮುನಿರತ್ನ ಪರ ಹೈಕೋರ್ಟ್ ವಕೀಲ ಎಸ್.ಎಸ್.ಶ್ರೀನಿವಾಸ ರಾವ್ ಹಾಗೂ ಉಳಿದ ಆರೋಪಿಗಳ ಪರ ಪದಾಂಕಿತ ವಕೀಲ ಎಸ್.ಶ್ಯಾಮಸುಂದರ್, "ಮಧ್ಯಂತರ ಜಾಮೀನು ಅರ್ಜಿಯನ್ನು ಈಗಲೇ ಪರಿಗಣಿಸಬೇಕು" ಎಂದು ನ್ಯಾಯಾಧೀಶರಿಗೆ ಮನವಿ ಮಾಡಿದರು.

ಸಂತ್ರಸ್ತೆಯ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, "ಅಪರಾಧ ದಂಡ ಪ್ರಕ್ರಿಯಾ ಸಂಹಿತೆ–1973ರ (ಸಿಆರ್‌ಪಿಸಿ) ಕಲಂ 438 (1)(4)ರ ಅಡಿಯಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದಾಗ ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡುವ ಪೂರ್ವದಲ್ಲಿ ನ್ಯಾಯಾಲಯ ಮಧ್ಯಂತರ ಆದೇಶ ನೀಡಬಹುದಾಗಿದೆ. ಆದರೆ, ಪ್ರಾಸಿಕ್ಯೂಟರ್‌ಗೆ ನೋಟಿಸ್ ನೀಡಿದ ನಂತರ ಯಾವುದೇ ಮಧ್ಯಂತರ ಆದೇಶ ನೀಡಲು ಕಾನೂನು ಅನುಮತಿಸುವುದಿಲ್ಲ" ಎಂದು ತಕರಾರು ಸಲ್ಲಿಸಿದರು.

Tags:    

Similar News