ದಾವಣಗೆರೆ ಎಸ್‌ಪಿ ಉಮಾ ಪ್ರಶಾಂತ್ ವಿರುದ್ಧ ಆಕ್ಷೇಪಾರ್ಹ ಹೇಳಿಕೆ: ಬಿಜೆಪಿ ಶಾಸಕ ಬಿ.ಪಿ. ಹರೀಶ್ ವಿರುದ್ಧ ಎಫ್‌ಐಆರ್

ಎಸ್‌ಪಿ ಉಮಾ ಪ್ರಶಾಂತ್ ಅವರ ದೂರು ಆಧರಿಸಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ.;

Update: 2025-09-04 05:02 GMT

ಬಿಜೆಪಿ ಶಾಸಕ ಬಿಪಿ ಹರೀಶ್​​ ವಿರುದ್ಧ ಎಫ್​ಐಆರ್ ದಾಖಲಾಗಿದೆ. 

Click the Play button to listen to article

ದಾವಣಗೆರೆ ಎಸ್​​ಪಿ ಉಮಾ ಪ್ರಶಾಂತ್ ಅವರ ವಿರುದ್ಧ ಅಸಭ್ಯ ಹಾಗೂ ಆಕ್ಷೇಪಾರ್ಹ ಟೀಕೆ ಮಾಡಿದ ಪ್ರಕರಣದಲ್ಲಿ ಬಿಜೆಪಿ ಶಾಸಕ ಬಿ.ಪಿ. ಹರೀಶ್ ಅವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಎಸ್‌ಪಿ ಉಮಾ ಪ್ರಶಾಂತ್ ಅವರ ದೂರು ಆಧರಿಸಿ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ ಶಾಸಕನ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇಂದು ಅವರು ವಿಚಾರಣೆಗೆ ಹಾಜರಾಗುವ ಸಾಧ್ಯತೆ ಇದೆ. 

ಈ ಬೆಳವಣಿಗೆ ರಾಜಕೀಯ ವಲಯದಷ್ಟೇ ಸಾಮಾಜಿಕ ಜಾಲತಾಣದಲ್ಲಿಯೂ ತೀವ್ರ ಚರ್ಚೆಗೆ ಕಾರಣವಾಗಿದೆ. ವಿವಿಧ ಸಂಘಟನೆಗಳು ಹಾಗೂ ಸಾರ್ವಜನಿಕರು ಹರೀಶ್ ಅವರ ಹೇಳಿಕೆಯನ್ನು ಖಂಡಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. 

ಘಟನೆ ಏನು? 

ಸೆಪ್ಟೆಂಬರ್ 2ರಂದು ದಾವಣಗೆರೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಶಾಸಕ ಹರೀಶ್ ಎಸ್​​ಪಿ ಉಮಾ ಪ್ರಶಾಂತ್​​ರನ್ನು ಉದ್ದೇಶಿಸಿ ಮಾತನಾಡುವಾಗ ‘ಶಾಮನೂರು ಮನೆ ಶ್ವಾನದ ತರ ಆಡುತ್ತಾರೆ’ ಎಂದು ನಿಂದನಾತ್ಮಕ ಪದ ಬಳಕೆ ಮಾಡಿದ್ದರು. ಈ ಬಗ್ಗೆ ಎಸ್​​ಪಿ ಉಮಾ ಪ್ರಶಾಂತ್ ನೀಡಿದ ದೂರಿನ ಮೇರೆಗೆ ಕೆಟಿಜೆ ನಗರ ಪೊಲೀಸ್ ಠಾಣೆಯಲ್ಲಿ BNS 2023 (U/s-132,351(2),79) ರೀತ್ಯಾ ಪ್ರಕರಣ ದಾಖಲಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಹರೀಶ್ ವಿರುದ್ಧ ತೀವ್ರ ಟೀಕೆ ವ್ಯಕ್ತವಾಗಿದೆ. ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಶಾಸಕರ ಹೇಳಿಕೆಯನ್ನು ಖಂಡಿಸಿ, ತಕ್ಷಣಕ್ಕೆ ಎಸ್‌ಪಿಗೆ ಸಾರ್ವಜನಿಕವಾಗಿ ಕ್ಷಮೆ ಕೋರಿ ಎಂದು ಒತ್ತಾಯಿಸಿದೆ. ಉಮಾ ಪ್ರಶಾಂತ್ ಅವರು ನ್ಯಾಮತಿ ಪಟ್ಟಣದ ಬ್ಯಾಂಕ್ ದರೋಡೆ ಪ್ರಕರಣವನ್ನು ಭೇದಿಸಿದ್ದು, ಗಣೇಶ ಮೆರವಣಿಗೆಯ ಸಮಯದ ಕಲ್ಲು ತೂರಾಟ ಪ್ರಕರಣವನ್ನು ಕೆಲವೇ ಗಂಟೆಗಳಲ್ಲಿ ಬಗೆಹರಿಸಿದ್ದು ರಾಜ್ಯದಾದ್ಯಂತ ಮೆಚ್ಚುಗೆ ಪಡೆದಿದ್ದಾರೆ. ಅಂತಹ ಅಧಿಕಾರಿಯನ್ನು ನಿಂದಿಸುವುದು ಅಸಂಗತ ಎಂದು ಅವರು ತಿಳಿಸಿದ್ದರು. 

ಇದೇ ಸಂದರ್ಭದಲ್ಲಿ ದಾವಣಗೆರೆ ಸಂಸದೆ ಹಾಗೂ ಶಾಮನೂರು ಮನೆತನದ ಸೊಸೆ ಡಾ. ಪ್ರಭಾ ಮಲ್ಲಿಕಾರ್ಜುನ ಕೂಡ ಹರೀಶ್ ವಿರುದ್ಧ ಕಿಡಿಕಾರಿದ್ದಾರೆ. "ಇಂತಹ ಮಾತುಗಳು ಅವರ ಮನೋಭಾವನೆ ಎಂತಹದ್ದು ಎಂಬುದನ್ನು ತೋರಿಸುತ್ತದೆ. ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಎಸ್. ಮಲ್ಲಿಕಾರ್ಜುನ ಅವರು ಅಧಿಕಾರಿಗಳೊಂದಿಗೆ ಹಲವು ವಿಚಾರಗಳಲ್ಲಿ ಚರ್ಚೆ ನಡೆಸುತ್ತಾರೆ. ಅದಕ್ಕಾಗಿ ಮನೆಗೂ ಭೇಟಿ ನೀಡುವುದು ಸಹಜ. ಇದನ್ನು ತಪ್ಪಾಗಿ ಅರ್ಥೈಸಿ ಶಾಸಕ ಈ ರೀತಿ ಹೇಳುವುದು ಸರಿಯಲ್ಲ" ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.


Tags:    

Similar News