Karnataka By-Election | ಬಿಜೆಪಿ-ಜೆಡಿಎಸ್‌ ಬೆಂಬಲಿಗರು ಮತ ಹಾಕಿದ್ದು ಕಾಂಗ್ರೆಸ್‌ಗೆ?

ಇಬ್ಬರು ಮಾಜಿ ಮುಖ್ಯಮಂತ್ರಿಗಳ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿನ ಗೆಲುವಿನ ಅಂತರ, ಮತ ಹಂಚಿಕೆ ಪ್ರಮಾಣವು ಡಿಕೆಶಿ ಹೇಳಿಕೆ ಪುಷ್ಠೀಕರಿಸುವಂತಿದೆ.;

Update: 2024-11-25 15:36 GMT

ಬಿಜೆಪಿ ಹಾಗೂ ಜೆಡಿಎಸ್‌ನವರ ಬೆಂಬಲದಿಂದ ರಾಜ್ಯದ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದೆಯೇ?  ಹೀಗೊಂದು ಪ್ರಶ್ನೆ ರಾಜ್ಯ ರಾಜಕಾರಣದಲ್ಲಿ ಹೊಸ ಚರ್ಚೆ ಹುಟ್ಟುಹಾಕಿದೆ.

ಇಬ್ಬರು ಮಾಜಿ ಮುಖ್ಯಮಂತ್ರಿಗಳ ರಾಜೀನಾಮೆಯಿಂದ ತೆರವಾಗಿದ್ದ ಚನ್ನಪಟ್ಟಣ ಹಾಗೂ ಶಿಗ್ಗಾವಿ ಕ್ಷೇತ್ರದಲ್ಲಿನ ಗೆಲುವಿನ ಅಂತರ,  ಈ ಚರ್ಚೆ ಮುನ್ನೆಲೆಗೆ ಬಂದಿದೆ. 

ಕಳೆದ ವಿಧಾನಸಭೆ ಚುನಾವಣೆಯಲ್ಲಿ ಶಿಗ್ಗಾವಿ ಕ್ಷೇತ್ರದಿಂದ ಸ್ಪರ್ಧಿಸಿದ್ದ ಬಸವರಾಜ ಬೊಮ್ಮಾಯಿ ಅವರು ಒಟ್ಟು1,00,016 ಮತಗಳನ್ನು ಪಡೆದಿದ್ದರು. ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಅವರು 64,038 ಮತಗಳನ್ನು ಪಡೆದು ಪರಾಜಿತರಾಗಿದ್ದರು.

ಬಸವರಾಜ ಬೊಮ್ಮಾಯಿ ಅವರು ಲೋಕಸಭೆಗೆ ಸ್ಪರ್ಧಿಸಿ ಗೆದ್ದ ಬಳಿಕ ಕ್ಷೇತ್ರದ ಶಾಸಕ ಸ್ಥಾನ ತೆರವಾಗಿತ್ತು. ಉಪಚುನಾವಣೆಯಲ್ಲಿ ಪುತ್ರ ಭರತ್ ಬೊಮ್ಮಾಯಿ ಅವರನ್ನೇ ನಿಲ್ಲಿಸಲಾಗಿತ್ತು. ಆದರೆ, ಉಪಚುನಾವಣೆಯಲ್ಲಿ ಯಾಸಿರ್ ಪಠಾಣ್ 1,00,756 ಮತಗಳನ್ನು ಪಡೆದರೆ, ಭರತ್ ಬೊಮ್ಮಾಯಿ ಅವರು 87,308 ಮತಗಳನ್ನು ಪಡೆದು ಸೋಲು ಅನುಭವಿಸಿದರು. ಶಿಗ್ಗಾವಿ ಕ್ಷೇತ್ರದಲ್ಲಿ ಸತತ ನಾಲ್ಕು ಬಾರಿ ಗೆಲುವು ಸಾಧಿಸಿದ್ದ ಬಿಜೆಪಿ ಈ ಬಾರಿ 13,448 ಮತಗಳ ಅಂತರದಿಂದ ಸೋತಿತು.  ಕಾಂಗ್ರೆಸ್ ಅಭ್ಯರ್ಥಿ ಯಾಸಿರ್ ಪಠಾಣ್ ಕಳೆದ ಚುನಾವಣೆಗಿಂತ ಈ ಬಾರಿ 36,718 ಮತಗಳನ್ನು ಹೆಚ್ಚಿಸಿಕೊಂಡಿದ್ದಾರೆ.

ಚನ್ನಪಟ್ಟಣ ಕ್ಷೇತ್ರದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಚ್.ಡಿ..ಕುಮಾರಸ್ವಾಮಿ ಅವರು 96592 ಮತಗಳನ್ನು ಪಡೆದಿದ್ದರು. ಪ್ರತಿಸ್ಪರ್ಧಿ ಸಿ.ಪಿ. ಯೋಗೇಶ್ವರ್ ಅವರು 80,677 ಮತಗಳನ್ನು ಪಡೆದಿದ್ದರು. ಗೆಲುವಿನ ಅಂತರ ಕಡಿಮೆ ಇತ್ತು. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾದ ಕ್ಷೇತ್ರಕ್ಕೆ ಈಚೆಗೆ ನಡೆದ ಉಪಚುನಾವಣೆಯಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿಯಾಗಿ ಕುಮಾರಸ್ವಾಮಿ ಪುತ್ರ ನಿಖಿಲ್‌ ಕುಮಾರಸ್ವಾಮಿ ಅವರನ್ನು ಎನ್‌ಡಿಎ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಾಗಿತ್ತು. ಎನ್‌ಡಿಎ ಅಭ್ಯರ್ಥಿ 87,229 ಮತಗಳನ್ನು ಪಡೆದರೆ, ಕಾಂಗ್ರೆಸ್‌ ಅಭ್ಯರ್ಥಿ ಸಿ.ಪಿ. ಯೋಗೇಶ್ವರ್ 1,12,642 ಮತಗಳನ್ನು ಪಡೆದು, 25,413 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಹಿಂದೆ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೇವಲ 16 ಸಾವಿರ ಮತಗಳನ್ನು ಮಾತ್ರ ಪಡೆದಿದ್ದರು. ಯೋಗೀಶ್ವರ್ ಕಾಂಗ್ರೆಸ್ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧಿಸಿದ್ದರಿಂದ 1.12 ಲಕ್ಷ ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್‌-ಬಿಜೆಪಿ ಸಹಕಾರಕ್ಕೆ ಮತ ಹೆಚ್ಚಳವೇ ಸಾಕ್ಷಿ

ಕಾಂಗ್ರೆಸ್ ಮತ ಗಳಿಕೆ ಹೆಚ್ಚಳ ಕುರಿತು ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ನಮಗೆ ಮತ ಹಾಕದಿದ್ದರೆ ಇಷ್ಟು ಪ್ರಮಾಣದಲ್ಲಿ ಮತಗಳು ವ್ಯತ್ಯಾಸ ಆಗುತ್ತಿರಲಿಲ್ಲ. ಜನರು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟವನ್ನು ತಿರಸ್ಕರಿಸಿದ್ದಾರೆ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಭವಿಷ್ಯವಿದೆ ಎಂಬುದು ಈಗ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರಿಗೆ ಅರಿವಾಗಿದೆ. ಹಾಗಾಗಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್ ಅಭ್ಯರ್ಥಿಗಳಿಗೆ ಸಹಕಾರ ನೀಡಿದ್ದಾರೆ ಎಂದು ಹೇಳಿದ್ದು ಎಂದು ಸ್ಪಷ್ಟಪಡಿಸಿದ್ದಾರೆ.

 “ಬಿಜೆಪಿ ಪಕ್ಷದಲ್ಲಿ ಎಷ್ಟೇ ಗುಂಪಿದ್ದರೂ ನಮ್ಮ ಲೆಕ್ಕಕ್ಕೆ ಅವರು ಒಂದೇ ಗುಂಪು. ಜೆಡಿಎಸ್ ಚಿಹ್ನೆ ಬೇರೆಯಾದರೂ ಅವರೂ ಅದೇ ಗುಂಪು. ಜೆಡಿಎಸ್ ಅವರು ಕೂಡ ಅದೇ ಪ್ರಯತ್ನದಲ್ಲಿದ್ದಾರೆ. ಅವರು ಹೋರಾಟ ಮಾಡಿ ನಮಗೆ ಪ್ರಚಾರ ನೀಡುತ್ತಿದ್ದು, ಮಾಡಲಿ," ಎಂದು ಹೇಳಿದರು.


Tags:    

Similar News