ಜನಕಲ್ಯಾಣ ಸಮಾವೇಶ | ಬಿಜೆಪಿ-ಜೆಡಿಎಸ್ ಜನದ್ರೋಹಿಗಳು: ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಭಾಷಣದುದ್ದಕ್ಕೂ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳು ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಸಿಎಂ, ಅದೇ ಹೊತ್ತಿಗೆ ಆ ಯೋಜನೆಗಳ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದರು. ಅಲ್ಲದೆ, ವಿಶೇಷವಾಗಿ ಗೌಡರ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನದಲ್ಲೇ ಆ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದರು;
ರಾಜ್ಯ ಸರ್ಕಾರ ರಾಜ್ಯದ ಜನತೆಗಾಗಿ ನೀಡಿರುವ ಐದು ಗ್ಯಾರೆಂಟಿ ಯೋಜನೆಗಳನ್ನು ಟೀಕಿಸುವ, ಫಲಾನುಭವಿಗಳನ್ನು ಅವಮಾನಿಸುವ ಬಿಜೆಪಿ-ಜೆಡಿಎಸ್ ನಾಯಕರು ಪರಮ ಜನದ್ರೋಹಿಗಳು. ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿ ಇರುವವರೆಗೂ ಗ್ಯಾರೆಂಟಿ ಯೋಜನೆ ನಿಲ್ಲಿಸುವ ಪ್ರಶ್ನೆಯೇ ಇಲ್ಲ. 2028ಕ್ಕೆ ಮತ್ತೆ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರಲಿದೆ. ಇದೇ ಗ್ಯಾರೆಂಟಿ ಯೋಜನೆ ಮುಂದುವರಿಸುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
ಹಾಸನದಲ್ಲಿ ಗುರುವಾರ ನಡೆದ ಜನ ಕಲ್ಯಾಣೋತ್ಸವ ಸಮಾವೇಶವದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪ್ರತಿ ಬಾರಿ ಸುಭದ್ರ ಸರ್ಕಾರ ಕೊಟ್ಟಿದೆ. ಜೊತೆಗೆ ಕೊಟ್ಟ ಮಾತು ಉಳಿಸಿಕೊಂಡಿದೆ. ಆದರೆ, ಬಿಜೆಪಿಯಾಗಲಿ, ಜೆಡಿಎಸ್ ಆಗಲಿ ಕೊಟ್ಟ ಮಾತು ಉಳಿಸಿಕೊಳ್ಳಲಿಲ್ಲ. ನಾವು ದುಡ್ಡು ಕೊಡ್ತೀವಿ ಅಂದರೂ ಮೋದಿ ಸರ್ಕಾರ ಬಡವರಿಗೆ ಹಂಚಲು ಅಕ್ಕಿ ಕೊಡಲಿಲ್ಲ. ಬಿಜೆಪಿಯದ್ದು ಇಂಥಾ ಜನದ್ರೋಹಿ ಸರ್ಕಾರ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೈ ಹಿಡಿದವರಿಗೆ ಜೆಡಿಎಸ್ ಪಕ್ಷದಿಂದ ವಂಚನೆ
ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗುವಷ್ಟು ಬಹುಮತವನ್ನು ರಾಜ್ಯದ ಜನ ಯಾವತ್ತೂ ಕೊಟ್ಟಿಲ್ಲ. ಒಮ್ಮೆ ಕಾಂಗ್ರೆಸ್ ಬೆಂಬಲದಲ್ಲಿ ಮತ್ತೊಮ್ಮೆ ಬಿಜೆಪಿ ಬೆಂಬಲದಿಂದ ಮುಖ್ಯಮಂತ್ರಿ ಆದರು. ಬಳಿಕ ಎರಡೂ ಪಕ್ಷಗಳಿಗೆ ವಂಚಿಸಿದರು. ಈಗ ಕೋಮುವಾದಿ ಪಕ್ಷವನ್ನು ಅಪ್ಪಿಕೊಂಡು ಕೇಂದ್ರ ಮಂತ್ರಿಯಾಗಿದ್ದಾರೆ. ರಾಜ್ಯದ ಜನರ ನೀರಿನ ಬವಣೆ ಬಗ್ಗೆ ಕಾಳಜಿ ಇದ್ದರೆ ಮೇಕೆದಾಟು ವಿಚಾರದಲ್ಲಿ ಮೌನ ಆಗಿರುವುದು ಏಕೆ?, ಬೆಂಗಳೂರಿನ ಜನತೆಗೆ ನೀರು ಕೊಡಿಸಲಿ ಎಂದು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿಗೆ ಸಿಎಂ ಸವಾಲು ಹಾಕಿದರು.
ಮಾಜಿ ಪ್ರಧಾನಿ ದೇವೇಗೌಡರು ನನಗಿಂತ 15 ವರ್ಷ ಹಿರಿಯರು. ಘನತೆಯಿಂದ ಮಾತಾಡಬೇಕಿತ್ತು. "ಸಿದ್ದರಾಮಯ್ಯ ಅವರ ಗರ್ವಭಂಗ ಮಾಡ್ತೀನಿ" ಎಂಬ ಅವರ ಮಾತನ್ನು ನೀವು ಒಪ್ಪಿಕೊಳ್ಳುತ್ತೀರಾ, ಸಹಿಸುತ್ತೀರಾ? ಎಂದು ಪ್ರಶ್ನಿಸುವ ಮೂಲಕ ಗೌಡರ ನೆಲದಲ್ಲೇ ಗೌಡರ ವಿರುದ್ಧ ವಾಗ್ದಾಳಿ ನಡೆಸಿದರು. ಸಿಎಂ ಪ್ರಶ್ನೆಗೆ ಪ್ರತಿಕ್ರಿಯಿಸಿದ ನೆರೆದಿದ್ದ ಜನತೆ, ʼಯಾವುದೇ ಕಾರಣಕ್ಕೂ ಸಹಿಸಲ್ಲʼ ಎಂದು ಕೂಗಿದರು.
ಕೊನೆ ಉಸಿರಿರುವವರೆಗೂ ರಾಜಕೀಯ ಮಾಡುವುದಾಗಿ ದೇವೇಗೌಡ ಹೇಳುತ್ತಾರೆ. ಮಾಡಲಿ ಸಂತೋಷ. ಆದರೆ ದ್ವೇಷದ, ಹಗೆತನದ ರಾಜಕಾರಣ ಮಾಡಬೇಡಿ. ರಾಜಕೀಯವಾಗಿ ಮುಗಿಸುವ ಮಾತು ಆಡಬೇಡಿ ಎಂದು ಪರೋಕ್ಷವಾಗಿ ದೇವೇಗೌಡರಿಗೆ ಟಾಂಗ್ ನೀಡಿದರು.
ಹಾಸನದಲ್ಲಿ ದೇವೇಗೌಡ ಕುಟುಂಬದ ಕುಡಿಯಿಂದಾಗಿ ಹೆಣ್ಣು ಮಕ್ಕಳು ಕಣ್ಣೀರಲ್ಲಿ ಕೈತೊಳೆಯುತ್ತಿದ್ದಾರೆ. ಕೇಂದ್ರ ಸರ್ಕಾರದಿಂದ ರಾಜ್ಯದ ತೆರಿಗೆ ಪಾಲು ಸಿಕ್ಕಿಲ್ಲ. ಕೇಂದ್ರ ಪುರಸ್ಕೃತ ಯೋಜನೆ, ನಬಾರ್ಡ್ ಸಾಲ ವಿತರಣೆಯಲ್ಲೂ ಅನ್ಯಾಯ ಆಗುತ್ತಿದೆ. ರೈತನ ಮಗ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಏಕೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸುತ್ತಿಲ್ಲ. ನಬಾರ್ಡ್ ನಿಂದ ಆಗಿರುವ ಅನ್ಯಾಯವನ್ನು ಏಕೆ ಸರಿಪಡಿಸುತ್ತಿಲ್ಲ? ಎಂದು ಪ್ರಶ್ನಿಸಿದರು.
ರಾಜ್ಯದ ಗ್ಯಾರೆಂಟಿ ಫಲಾನುಭವಿಗಳನ್ನು ಅವಮಾನಿಸುವ ಬದಲು ರಾಜ್ಯಕ್ಕೆ, ರಾಜ್ಯದ ಜನರಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸಿ ಎಂದು ಕುಮಾರಸ್ವಾಮಿ ಹಾಗೂ ಬಿಜೆಪಿ ಸಂಸದರಿಗೆ ಸಿಎಂ ಸವಾಲು ಹಾಕಿದರು.
ರಾಜಕೀಯವಾಗಿ ಮುಗಿಸುವ ಕೆಲಸ
ದೇವೇಗೌಡರು ರಾಜಕೀಯವಾಗಿ ಒಕ್ಕಲಿಗ ನಾಯಕರನ್ನು ನಿರಂತರವಾಗಿ ಮುಗಿಸುತ್ತಿದ್ದಾರೆ. ಬಚ್ಚೇಗೌಡರು, ವೈ.ಕೆ.ರಾಮಯ್ಯ, ಬೈರೇಗೌಡರು, ಕೃಷ್ಣಪ್ಪ, ಚಲುವರಾಯಸ್ವಾಮಿ ಸೇರಿ ಎಷ್ಟು ಮಂದಿ ಒಕ್ಕಲಿಗ ನಾಯಕರನ್ನು ದೇವೇಗೌಡರು ರಾಜಕೀಯವಾಗಿ ಮುಗಿಸಿದರು. ದೇವೇಗೌಡರ ಪಾಪದ ಕೊಡ ತುಂಬಿದೆ ಎಂಬ ಒಕ್ಕಲಿಗ ನಾಯಕ ಕೃಷ್ಣಪ್ಪನವರ ಮಾತು ಇಂದು ನಿಜವಾಗಿದೆ ಎಂದರು.
ನಾನು ಮತ್ತು ಜಾಲಪ್ಪ ಒಟ್ಟಾಗಿ ರಾಮಕೃಷ್ಣ ಹೆಗಡೆಯವರ ಬದಲಿಗೆ ದೇವೇಗೌಡರನ್ನು ಮುಖ್ಯಮಂತ್ರಿ ಮಾಡಿದೆವು. ಅಹಿಂದ ಸಮಾವೇಶ ಮಾಡಿದ ಒಂದೇ ಕಾರಣಕ್ಕೆ ಜೆಡಿಎಸ್ ನಿಂದ ನನ್ನನ್ನು ಉಚ್ಛಾಟನೆ ಮಾಡಿದರು. ನಾನಾಗಿಯೇ ಪಕ್ಷ ಬಿಟ್ಟಿದ್ದಲ್ಲ. ದೇವೇಗೌಡ ಎಂದಿಗೂ ನನ್ನನ್ನು ಬೆಳೆಸಿಲ್ಲ. ಕೋಮುವಾದಿಗಳ ಜೊತೆ ಸೇರಿಕೊಂಡು ಜಾತ್ಯಾತೀತ ಹೆಸರು ಇಟ್ಟುಕೊಳ್ಳಲು ನಿಮಗೆ ನೈತಿಕ ಹಕ್ಕಿಲ್ಲ ಎಂದು ದೇವೇಗೌಡರು ಹಾಗೂ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ಹಾಸನ ಮತ್ತೆ ಕಾಂಗ್ರೆಸ್ ತೆಕ್ಕೆಗೆ
ಕಾಂಗ್ರೆಸ್ ಸರ್ಕಾರದಿಂದ ಮಾತ್ರ ಸುಭದ್ರ ಸರ್ಕಾರ ಕೊಡಲು ಸಾಧ್ಯ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಹಾಸನ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ. ಇದು ಶತಸಿದ್ದ ಎಂದು ಸಿದ್ದರಾಮಯ್ಯ ಭರವಸೆ ವ್ಯಕ್ತಪಡಿಸಿದರು.
ಇಡೀ ಭಾಷಣದುದ್ದಕ್ಕೂ ಕಾಂಗ್ರೆಸ್‌ನ ಗ್ಯಾರೆಂಟಿ ಯೋಜನೆಗಳು ಸೇರಿದಂತೆ ಜನಪರ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿದ ಸಿಎಂ, ಅದೇ ಹೊತ್ತಿಗೆ ಆ ಯೋಜನೆಗಳ ವಿರುದ್ಧ ಪ್ರತಿಪಕ್ಷಗಳು ಅಪಪ್ರಚಾರ ನಡೆಸುತ್ತಿವೆ ಎಂದು ಆರೋಪಿಸಿದರು. ಅಲ್ಲದೆ, ವಿಶೇಷವಾಗಿ ಎಚ್ ಡಿ ದೇವೇಗೌಡ ಮತ್ತು ಎಚ್ ಡಿ ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಗೌಡರ ಭದ್ರಕೋಟೆ ಎನಿಸಿಕೊಂಡಿದ್ದ ಹಾಸನದಲ್ಲೇ ಆ ಕುಟುಂಬದ ವಿರುದ್ಧ ಸಮರ ಸಾರಿದರು.