ಮುಸ್ಲಿಮರ ಮತ ಕೇಳುವ ನೈತಿಕತೆ ಬಿಜೆಪಿ-ಜೆಡಿಎಸ್‌ಗೆ ಇಲ್ಲ- ಡಿ.ಕೆ. ಶಿವಕುಮಾರ್
ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬ ಜೆಡಿಎಸ್ ಟೀಕೆಗೆ ತಿರುಗೇಟು ನೀಡಿರುವ ಡಿ.ಕೆ.ಶಿವಕುಮಾರ್ ಅವರು, “ಮೊದಲು ತಮ್ಮ ಪರಿಸ್ಥಿತಿ ಹೇಗಿದೆ ಅಂತ ನೋಡಿಕೊಳ್ಳಲಿ. ನಾನು ಇಲ್ಲವಾದರೂ ಕಾಂಗ್ರೆಸ್ ಗೆ ಏನೂ ಆಗುವುದಿಲ್ಲ. ಯಾರೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ ಎಂದಿದ್ದಾರೆ.;
ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಸ್ಲಿಮರ ಮತ ಕೇಳುವ ನೈತಿಕತೆ ಇಲ್ಲ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಧಾನಸೌಧದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, “ಕುಮಾರಸ್ವಾಮಿ ಅವರು ಬಿಜೆಪಿಯವರ ಜತೆ ಸೇರಿದರೆ ಮುಸ್ಲಿಮರು ಹೇಗೆ ಮತ ಹಾಕುತ್ತಾರೆ. ಮುಸ್ಲಿಮರನ್ನು ಎನ್ ಡಿಎ ಮೈತ್ರಿಕೂಟ ವಿಶ್ವಾಸಕ್ಕೆ ಪಡೆದಿಲ್ಲ. ಹೀಗಿರುವಾಗ ಅವರು ಯಾಕೆ ಮತ ಹಾಕಬೇಕು ಎಂದು ಪ್ರಶ್ನಿಸಿದರು.
ಎನ್ ಡಿಎ ವತಿಯಿಂದ ಮುಸಲ್ಮಾನರಿಗೆ ಟಿಕೆಟ್ ನೀಡಿದ್ದಾರಾ? ಮಂತ್ರಿ ಮಾಡಿದ್ದಾರಾ? ಅವರಿಗಾಗಿ ಕಾರ್ಯಕ್ರಮ ಕೊಟ್ಟಿದ್ದಾರಾ? ಅವರಿಗಿದ್ದ ಶೇ 4 ಮೀಸಲಾತಿಯನ್ನೂ ಕಿತ್ತುಕೊಂಡಿದ್ದೀರಿ. ನಿಮಗೆ ಅವರ ಮತ ಕೇಳುವ ನೈತಿಕತೆಯೇ ಇಲ್ಲ. ನಿಖಿಲ್ ಪಾಪ ಚಿಕ್ಕ ಹುಡುಗ. ಅವನ ಅನುಭವದ ಬಗ್ಗೆ ನಾನು ಮಾತನಾಡುವುದಿಲ್ಲ. ಈ ವಿಚಾರವಾಗಿ ದೊಡ್ಡ ಗೌಡರು ಮಾತನಾಡಬೇಕು ಎಂದರು.
ಚಕ್ರವರ್ತಿಗಳೇ ಬಿದ್ದಿದ್ದಾರೆ
ದೇಶದಲ್ಲಿ ಕಾಂಗ್ರೆಸ್ ಅವನತಿಯತ್ತ ಸಾಗುತ್ತಿದೆ ಎಂಬ ಜೆಡಿಎಸ್ ಟ್ವೀಟ್ ಬಗ್ಗೆ ಕೇಳಿದಾಗ, “ಅವರು ತಮ್ಮ ಪರಿಸ್ಥಿತಿ ಬಗ್ಗೆ ನೋಡಿಕೊಳ್ಳಲಿ. ನಾನು ಇಲ್ಲವಾದರೂ ಕಾಂಗ್ರೆಸ್ ಗೆ ಏನೂ ಆಗುವುದಿಲ್ಲ. ಯಾರೇ ಹೋದರೂ ಕಾಂಗ್ರೆಸ್ ಪಕ್ಷಕ್ಕೆ ಏನೂ ಆಗುವುದಿಲ್ಲ. ಕಾಂಗ್ರೆಸ್ ಇತಿಹಾಸ, ದೇಶದ ಇತಿಹಾಸ, ಕಾಂಗ್ರೆಸ್ ಪಕ್ಷ ತ್ಯಾಗ ಮಾಡಿ ಈ ದೇಶವನ್ನು ಒಗ್ಗಟ್ಟಾಗಿಟ್ಟಿದೆ. ಪ್ರಪಂಚದಲ್ಲಿ ದೊಡ್ಡ ದೊಡ್ಡ ಚಕ್ರವರ್ತಿಗಳೇ ಬಿದ್ದಿದ್ದಾರೆ. ಸದ್ದಾಂ ಹುಸೇನ್, ಪಾಕಿಸ್ತಾನದ ಕತೆ ಏನಾಯ್ತು ಎಂದು ಎಲ್ಲರಿಗೂ ಗೊತ್ತು”ಎಂದು ತಿರುಗೇಟು ನೀಡಿದರು.
ಅಶೋಕಣ್ಣ ಎಷ್ಟು ಡೆಪಾಸಿಟ್ ತಗೊಂಡೆ?
ತಮ್ಮನನ್ನು ಗೆಲ್ಲಿಸಿಕೊಳ್ಳಲು ಆಗಲಿಲ್ಲ, ಚನ್ನಪಟ್ಟಣ ಗೆದ್ದ ಮಾತ್ರಕ್ಕೆ ಡಿ.ಕೆ. ಶಿವಕುಮಾರ್ ಒಕ್ಕಲಿಗ ನಾಯಕರಾಗುತ್ತಾರಾ ಎಂಬ ಆರ್.ಅಶೋಕ್ ಹೇಳಿಕೆಗೆ ತಿರುಗೇಟು ನೀಡಿದ ಡಿ.ಕೆ. ಶಿವಕುಮಾರ್ ಅವರು, “ನಾನು ನಾಯಕ ಎಂದು ಯಾವತ್ತು ಹೇಳಿದ್ದೇನೆ ಅಶೋಕಣ್ಣ?, ನೀನು ಕನಕಪುರಕ್ಕೆ ಬಂದು ಎಷ್ಟು ಡೆಪಾಸಿಟ್ ತೆಗೆದುಕೊಂಡೆ? ಕಂದಾಯ ಸಚಿವರಾಗಿದ್ದುಕೊಂಡು ನನ್ನ ಮೇಲೆ ಕುಸ್ತಿ ಮಾಡಲು, ಡಿಚ್ಚಿ ಹೊಡೆಯಲು ಬಂದಿದ್ದಲ್ಲ. ನಿನಗೆ ಎಷ್ಟು ಮತ ಬಂತು?, ನನ್ನ ತಮ್ಮ ಸೋತಿರುವುದು ನಿಜ. ಅದಕ್ಕೆ ಕಾರಣವಾದ ಒಂದೊಂದೇ ಕೊಂಡಿಗಳು ಕಳಚಿಕೊಳ್ಳುತ್ತಿವೆಯಲ್ಲವೇ?, ಆರ್ ಆರ್ ನಗರ, ಚನ್ನಪಟ್ಟಣ ಏನಾಗಿದೆ ಎಂದು ನಾನು ಈಗ ಮಾತನಾಡುವುದಿಲ್ಲʼʼಎಂದು ತಿಳಿಸಿದರು.
ಮನನೊಂದು ಜಿಟಿಡಿ ಹೇಳಿಕೆ
ಜಿ.ಟಿ ದೇವೇಗೌಡರ ನೇತೃತ್ವದಲ್ಲಿ ಆಪರೇಷನ್ ಮಾಡಲಾಗುವುದೇ ಎಂದು ಕೇಳಿದಾಗ, “ಜಿ.ಟಿ ದೇವೇಗೌಡ ಹಿರಿಯ ನಾಯಕರು. ಅವರ ಪಕ್ಷದ ಕೋರ್ ಕಮಿಟಿ ಅಧ್ಯಕ್ಷರಾಗಿದ್ದಾರೆ. ಅವರು ಜೆಡಿಎಸ್ ಪಕ್ಷಕ್ಕೆ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ನಾವು ಈ ಹಿಂದೆ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎಂದು ಆಹ್ವಾನ ನೀಡಿದ್ದೆವು. ಆದರೆ ಅವರು ಕುಮಾರಣ್ಣ ಅವರನ್ನು ಸಿಎಂ ಮಾಡುತ್ತೇವೆ ಎಂದು ನಮ್ಮ ಆಹ್ವಾನ ತಿರಸ್ಕರಿಸಿದರು. ಈಗ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿಗೆ ಅವರು ನೊಂದಿದ್ದಾರೆ” ಎಂದರು.
ಜೆಡಿಎಸ್ ನೊಂದ ಶಾಸಕರು ಕಾಂಗ್ರೆಸ್ ಸೇರುವ ಕುರಿತ ವದಂತಿಗೆ ಪ್ರತಿಕ್ರಿಯಿಸಿ “ಈ ವಿಚಾರವಾಗಿ ನನ್ನ ಬಳಿ ಯಾರೂ ಚರ್ಚೆ ಮಾಡಿಲ್ಲ”ಎಂದು ತಿಳಿಸಿದರು.
ಮುಡಾ ಪ್ರಕರಣದ 144 ಫೈಲ್ ಗಳು ಪತ್ತೆಯಾಗಿಲ್ಲ ಎಂಬ ಲೋಕಾಯುಕ್ತ ವರದಿ ಬಗ್ಗೆ ಕೇಳಿದಾಗ, “ನನಗೆ ಲೋಕಾಯುಕ್ತದ ಹೇಳಿಕೆ ವಿಚಾರ ಗೊತ್ತಿಲ್ಲ. ಆ ರೀತಿ ಫೈಲ್ ಗಳನ್ನು ಯಾರು ಎತ್ತಿಕೊಂಡು ಹೋಗಲು ಸಾಧ್ಯ? ಕಚೇರಿಯಲ್ಲೇ ಇರುತ್ತದೆ, ಅಥವಾ ಯಾರಾದರೂ ಸರ್ಕಾರಕ್ಕೆ ಅದನ್ನು ತೋರಿಸಲು ತೆಗೆದುಕೊಂಡು ಹೋಗಿರುತ್ತಾರೆ. ನನ್ನ ಪ್ರಕಾರ ಪ್ರತಿ ಫೈಲ್ ಗಳನ್ನು ಚಲನಗಳ ಮೇಲೂ ನಿಗಾ ಇಡಲಾಗುವುದು. ಹೀಗಾಗಿ ಈ ರೀತಿ ನಡೆದಿರುವ ಸಾಧ್ಯತೆ ಇಲ್ಲ”ಎಂದರು.
ಇನ್ನು ವಕ್ಫ್ ವಿಚಾರದಲ್ಲಿ ಬಿಜೆಪಿ ಹೋರಾಟ ಕುರಿತು ಪ್ರತಿಕ್ರಿಯಿಸಿ, “ಅವರಿಗೆ ಬೇಕಾಗಿರುವುದು ಕೇವಲ ಪ್ರಚಾರ. ಅವರು ಪ್ರತಿಭಟನೆ ಮಾಡಿದಷ್ಟು ನಮಗೆ ಒಳ್ಳೆಯದು. ಅವರು ತಮ್ಮ ಮುಖಗಳನ್ನು ಕನ್ನಡಿಯಲ್ಲಿ ನೋಡಿಕೊಳ್ಳಲಿ ಎಂದು ಹೇಳಿದ್ದೇನೆ. ಗೋಮುಖ ವ್ಯಾಘ್ರರ ಸತ್ಯಾಂಶವನ್ನು ನಾವು ಬಿಚ್ಚಿಡುತ್ತೇವೆ. ಚನ್ನಪಟ್ಟಣ ಉಪಚುನಾವಣೆ ಸಂದರ್ಭದಲ್ಲಿ ಅಲ್ಲಿನ ಜನ ಪಹಣಿಯಲ್ಲಿ ವಕ್ಫ್ ನಮೂದಾಗಿರುವ ವಿಚಾರವಾಗಿ ಅರ್ಜಿ ತೆಗೆದುಕೊಂಡು ಹೋಗುತ್ತಿದ್ದರು. ನಾನು ಅದನ್ನು ಪರಿಶೀಲಿಸಿದಾಗ 2020ರಲ್ಲಿ ಅವರ ಪಹಣಿ ತಿದ್ದುಪಡಿಯಾಗಿದೆ. ಈಗ ಅದನ್ನು ಮನೆ ಮನೆಗೆ ತೋರಿಸುತ್ತಿದ್ದಾರೆ. ಬಿಜೆಪಿಯವರು ತಮ್ಮ ಆಂತರಿಕ ಹುಳುಕು ಮುಚ್ಚಿಕೊಳ್ಳಲು ಈ ವಿಚಾರವಾಗಿ ಹೋರಾಟ ಮಾಡುತ್ತಿದ್ದಾರೆ. ಜನ ಅವರಿಗೆ ತಕ್ಕ ಪಾಠ ಕಲಿಸಿದ್ದಾರೆ”ಎಂದು ತಿಳಿಸಿದರು.