BJP Infighting | ಭಿನ್ನಮತೀಯರನ್ನು ಮುಲಾಜಿಲ್ಲದೆ ಉಚ್ಚಾಟಿಸಿ: ವಿಜಯೇಂದ್ರ ಬಣ ಆಗ್ರಹ

ಇದೇ ವೇಳೆ ಯತ್ನಾಳ್, ಕುಮಾರ್ ಬಂಗಾರಪ್ಪ, ಬಿ ಪಿ ಹರೀಶ್, ಸಿದ್ದೇಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಯಾರು ಏಷ್ಟೇ ತಿಪ್ಪರಲಾಗ ಹಾಕಿದರೂ ವಿಜಯೇಂದ್ರ ಅವರು ಮತ್ತೆ ಅಧ್ಯಕ್ಷರಾಗುವುದನ್ನು ತಡೆಯಲಾಗದು ಎಂದು ಘೋಷಿಸಿದರು.;

Update: 2025-02-05 12:07 GMT

ರಾಜ್ಯ ಬಿಜೆಪಿಯ ಬಣ ಬಡಿದಾಟ ತೀವ್ರವಾಗಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಗೆ ಪಟ್ಟು ಹಿಡಿದಿರುವ ಬಣ ದೆಹಲಿಯಲ್ಲಿ ಪಕ್ಷದ ವರಿಷ್ಠರೊಂದಿಗೆ ಮಾತುಕತೆಗೆ ಪ್ರಯತ್ನಿಸುತ್ತಿರುವಾಗಲೇ, ಇತ್ತ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ರಾಜ್ಯಾಧ್ಯಕ್ಷರ ಬಣದ ಮುಖಂಡರು ಸಭೆ ನಡೆಸಿ ಭಿನ್ನಮತೀಯರ ವಿರುದ್ಧ ಗುಡುಗಿದ್ದಾರೆ.

ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಅವರ ಬೆಂಗಳೂರಿನ ನಿವಾಸದಲ್ಲಿ ಮಾಜಿ ಸಚಿವ ಎಂ ಪಿ ರೇಣುಕಾಚಾರ್ಯ ನೇತೃತ್ವದಲ್ಲಿ ಬುಧವಾರ ಸಭೆ ನಡೆಸಿದ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ನಿಷ್ಠರು, ಭಿನ್ನಮತೀಯ ಚಟುವಟಿಕೆಯಲ್ಲಿ ತೊಡಗಿರುವ ಎಲ್ಲಾ ನಾಯಕರನ್ನು ಕೂಡಲೇ ಪಕ್ಷದಿಂದ ಉಚ್ಛಾಟಿಸಬೇಕು ಎಂದು ದೆಹಲಿಯ ವರಿಷ್ಠರನ್ನು ಆಗ್ರಹಿಸಿದ್ದಾರೆ.

ಭಿನ್ನಮತೀಯ ನಾಯಕರು ಮಾನಸಿಕವಾಗಿ ಅಸ್ವಸ್ಥಗೊಂಡಿದ್ದಾರೆ ಎಂದು ಗಂಭೀರ ಆರೋಪ ಮಾಡಿರುವ ಅವರು, ಆ ಹಿನ್ನೆಲೆಯಲ್ಲಿ ಅಂತಹ ಎಲ್ಲಾ ನಾಯಕರನ್ನು ಪಕ್ಷದಿಂದ ಉಚ್ಛಾಟಿಸದೇ ಬೇರೆ ಮಾರ್ಗವೇ ಇಲ್ಲ ಎಂದು ಹೇಳಿದ್ದಾರೆ.

ಸಭೆಯ ನಂತರ ಮಾಧ್ಯಮಗಳಿಗೆ ಮಾತನಾಡಿರುವ ವಿಜಯೇಂದ್ರ ಬಣದ ಎಂ ಪಿ ರೇಣುಕಾಚಾರ್ಯ, ಬಸನಗೌಡ ಪಾಟೀಲ್ ಯತ್ನಾಳ್, ಕುಮಾರ್ ಬಂಗಾರಪ್ಪ, ಜಿ ಎಂ ಸಿದ್ದೇಶ್ವರ್, ಬಿ ಪಿ ಹರೀಶ್ ಅವರುಗಳನ್ನು ಮುಲಾಜಿಲ್ಲದೆ ಪಕ್ಷದಿಂದ ಹೊರಹಾಕಬೇಕು. ದೆಹಲಿಗೆ ಹೋದವರು ಅವರು ಮೂರ್ನಾಲ್ಕು ಜನ ಮಾತ್ರ, ಆದರೆ, ಅದನ್ನೇ ಇಡೀ ಪಕ್ಷವೇ ವಿಜಯೇಂದ್ರ ವಿರುದ್ಧ ದೆಹಲಿಗೆ ಹೋಗಿ ದೂರು ನೀಡುತ್ತಿದೆ ಎಂಬಂತೆ ಬಿಂಬಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ಪಕ್ಷದ ವರಿಷ್ಠರು ಈ ನಾಯಕರ ಭೇಟಿಗೆ ಅವಕಾಶವನ್ನೇ ನೀಡಿಲ್ಲ. ಆದರೂ ಭೇಟಿ ಮಾಡಿ ದೂರು ನೀಡಿದ್ದೇವೆ ಎಂದು ಸುಳ್ಳು ಹೇಳುತ್ತಿದ್ದಾರೆ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ ಅವರನ್ನು ಭೇಟಿಯಾಗಿದ್ದರೆ ಫೋಟೋ ಯಾಕೆ ಬಿಡುಗಡೆ ಮಾಡಿಲ್ಲ? ಎಂದು ಪ್ರಶ್ನಿಸಿದ ರೇಣುಕಾಚಾರ್ಯ, ಜಿಲ್ಲಾಧ್ಯಕ್ಷರ ನೇಮಕ ವಿಷಯದಲ್ಲಿ ವಿಜಯೇಂದ್ರ ಅವರ ಪಾತ್ರವೇ ಇಲ್ಲ. ವರಿಷ್ಠರ ಸೂಚನೆಯಂತೆ ನೇಮಕವಾಗಿದೆ ಎಂದು ಹೇಳಿದ್ದಾರೆ.

ಇದೇ ವೇಳೆ ಯತ್ನಾಳ್, ಕುಮಾರ್ ಬಂಗಾರಪ್ಪ, ಬಿ ಪಿ ಹರೀಶ್, ಸಿದ್ದೇಶ್ವರ್ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದ ರೇಣುಕಾಚಾರ್ಯ, ಯಾರು ಏಷ್ಟೇ ತಿಪ್ಪರಲಾಗ ಹಾಕಿದರೂ ವಿಜಯೇಂದ್ರ ಅವರು ಮತ್ತೆ ಅಧ್ಯಕ್ಷರಾಗುವುದನ್ನು ತಡೆಯಲಾಗದು ಎಂದು ಘೋಷಿಸಿದರು.

Tags:    

Similar News