BJP Infighting | ಬೆಂಗಳೂರಿನಲ್ಲಿ ತರುಣ್‌ ಚುಗ್‌ ʼಚುಪ್‌ ಮಂತ್ರʼ; ದೆಹಲಿಯಲ್ಲಿ ಯತ್ನಾಳ್‌ ಬಣದ ಪ್ರತಿತಂತ್ರ!

ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೊಂದು ಕಡೆ ಭಿನ್ನಮತೀಯ ಬಣದ ಮುಖಂಡರು ತಮ್ಮ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ಸೇರಿದ್ದಾರೆ;

Update: 2024-12-03 08:27 GMT

ರಾಜ್ಯ ಬಿಜೆಪಿಯ ಬಣ ಸಂಘರ್ಷ ಭುಗಿಲೆದ್ದಿರುವ ನಡುವೆ ಪಕ್ಷದ ವರಿಷ್ಠರ ಸೂಚನೆಯಂತೆ ರಾಷ್ಟ್ರೀಯ ಕಾರ್ಯದರ್ಶಿ ತರುಣ್ ಚುಗ್ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಮತ್ತೊಂದು ಕಡೆ ಭಿನ್ನಮತೀಯ ಬಣದ ಮುಖಂಡರು ತಮ್ಮ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ನೇತೃತ್ವದಲ್ಲಿ ದೆಹಲಿಗೆ ತೆರಳಿದ್ದು, ಹಾಲಿ ಶಾಸಕರು ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಮಂಗಳವಾರ ಬೆಳಿಗ್ಗೆ ಸಭೆ ನಡೆಸಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಹಾಗೂ ಪಕ್ಷದ ಹಿರಿಯ ನಾಯಕ ಯತ್ನಾಳ್ ನಡುವೆ ಸಂಘರ್ಷ ಬೀದಿ ಜಗಳದ ಸ್ವರೂಪ ಪಡೆದುಕೊಂಡಿದ್ದು, ಬೆಳಗಾವಿ ಚಳಿಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಪಕ್ಷಕ್ಕೆ ಭಾರೀ ಮುಜಗರವನ್ನು ತಂದೊಡ್ಡಿದೆ.

ಆ ಹಿನ್ನೆಲೆಯಲ್ಲಿ ಈಗಾಗಲೇ ಯತ್ನಾಳ್ ಅವರಿಗೆ ಶೋಕಾಸ್ ನೋಟಿಸ್ ನೀಡಿರುವ ಪಕ್ಷದ ರಾಷ್ಟ್ರೀಯ ಶಿಸ್ತು ಸಮಿತಿ, ಅವರ ಉತ್ತರಕ್ಕಾಗಿ ಕಾದಿದೆ. ಯತ್ನಾಳ್ ಕೂಡ ನೋಟಿಸ್‌ಗೆ ತಮ್ಮ ಎಂದಿನ ಉದಾಸೀನ, ವ್ಯಂಗ್ಯದ ದಾಟಿಯಲ್ಲೇ ಪ್ರತಿಕ್ರಿಯಿಸಿದ್ದು, ಇಂತಹ ನೋಟಿಸ್ ನನಗೇನೂ ಹೊಸದಲ್ಲ, ಬಹಳಷ್ಟು ನೋಡಿದ್ದೇನೆ. ಉತ್ತರ ಕೊಡುವೆ. ಆದರೆ, ಆ ನೋಟಿಸ್ ನ ಸಾಚಾತನದ ಬಗ್ಗೆಯೇ ಅನುಮಾನವಿದೆ ಎಂದಿದ್ದಾರೆ.

ಈ ನಡುವೆ ತರುಣ್ ಚುಗ್ ಅವರು ಬೆಂಗಳೂರಿಗೆ ಬಂದಿರುವುದು ಪಕ್ಷದ ಆಂತರಿಕ ಸಂಘರ್ಷದ ವಿಷಯದಲ್ಲಿ ಶಾಸಕರ ಅಭಿಪ್ರಾಯ ಸಂಗ್ರಹಿಸುವ ಉದ್ದೇಶದಿಂದ ಅಲ್ಲ ಎಂದು ಬಿ ವೈ ವಿಜಯೇಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದಾರೆ.


ತರುಣ್ ಚುಗ್ ಅವರು ಬಂದಿರುವುದು ಪಕ್ಷದ ಸಂಘಟನೆಯ ಕುರಿತು ಚರ್ಚಿಸಲು. ದೇಶಾದ್ಯಂತ ಸಂಘಟನಾ ಪರ್ವ ನಡೆಯುತ್ತಿದ್ದು, ಆ ಹಿನ್ನೆಲೆಯಲ್ಲಿ ಸದಸ್ಯತ್ವ ಅಭಿಯಾನ, ಜಿಲ್ಲಾ ಮಂಡಲ ಸದಸ್ಯರ ನೇಮಕ ಪ್ರಕ್ರಿಯೆ ಸೇರಿದಂತೆ ವಿವಿಧ ಸಂಘಟನಾ ವಿಷಯಗಳ ಕುರಿತು ಮಾಹಿತಿ ಪಡೆಯಲು ಅವರು ಸರಣಿ ಸಂಘಟನಾ ಸಭೆಗಳನ್ನು ನಡೆಸಲಿದ್ದಾರೆ. ಅದು ಬಿಟ್ಟು ರಾಜಕೀಯ ವಿಚಾರವಾಗಲೀ, ಮತ್ಯಾವುದೇ ವಿಚಾರವಾಗಲೀ ಅವರ ವೇಳಾಪಟ್ಟಿಯಲ್ಲಿ ಅವಕಾಶವಿಲ್ಲ. ಅಂತಹ ವಿಚಾರಗಳ ಕುರಿತು ಚರ್ಚೆ ನಡೆಯುವುದಾಗಿದ್ದರೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅವರೇ ಬರುತ್ತಿದ್ದರು ಎಂದು ಹೇಳಿರುವ ವಿಜಯೇಂದ್ರ, ಪಕ್ಷದಲ್ಲಿ ತಮ್ಮ ಮತ್ತು ಯತ್ನಾಳ್ ಬಣದ ನಡುವಿನ ಸಂಘರ್ಷಕ್ಕೂ ತರುಣ್ ಚುಗ್ ಬೆಂಗಳೂರು ಭೇಟಿಗೂ ಸಂಬಂಧವೇ ಇಲ್ಲ ಎಂದು ತಳ್ಳಿಹಾಕಿದ್ದಾರೆ.

ಆದರೆ, ತರುಣ್ ಚುಗ್ ಭೇಟಿಗೆ ಮುನ್ನಾ ದಿನ; ಸೋಮವಾರ ರಾಜ್ಯ ಬಿಜೆಪಿಯ ವಿಜಯೇಂದ್ರ ಬಣದ 20ಕ್ಕೂ ಹೆಚ್ಚು ಜಿಲ್ಲಾ ಅಧ್ಯಕ್ಷರು ಸಭೆ ನಡೆಸಿ ಚರ್ಚಿಸಿದ್ದಾರೆ. ಯತ್ನಾಳ್ ಮತ್ತು ಅವರ ಬಣದ ವಿರುದ್ಧ ದೂರು ಸಲ್ಲಿಸುವ ಕುರಿತು ಸಭೆಯಲ್ಲಿ ಚರ್ಚಿಸಲಾಗಿದೆ ಎನ್ನಲಾಗಿತ್ತು.

ಈ ನಡುವೆ, ಮಂಗಳವಾರ ಬೆಳಿಗ್ಗೆ ಯತ್ನಾಳ್ ಅವರೊಂದಿಗೆ ಅವರ ಬಣದ ಪ್ರಮುಖರಾದ ರಮೇಶ್ ಜಾರಕಿಹೊಳಿ, ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿ ಪಿ ಹರೀಶ್, ಎನ್‌ ಆರ್‌ ಸಂತೋಷ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಮಂದಿ ಸಭೆ ನಡೆಸಿ, ವಕ್ಫ್ ಸಂಬಂಧಿತ ವರದಿಯನ್ನು ಜೆಪಿಸಿ ಅಧ್ಯಕ್ಷರಿಗೆ ಸಲ್ಲಿಸುವ ಜೊತೆಗೆ ಪಕ್ಷದ ವರಿಷ್ಠರಿಗೆ ರಾಜ್ಯ ಬಿಜೆಪಿಯ ಬೆಳವಣಿಗೆಗಳ ಕುರಿತು ವರದಿ ನೀಡಲು ಅಂತಿಮ ಸುತ್ತಿನ ಚರ್ಚೆ ನಡೆಸಿದ್ದಾರೆ.

ಸಭೆಯಲ್ಲಿ ಮುಖ್ಯವಾಗಿ ಯತ್ನಾಳ್ ಅವರಿಗೆ ಶಿಸ್ತು ಸಮಿತಿ ನೀಡಿರುವ ನೋಟಿಸ್‌ಗೆ ಉತ್ತರ ನೀಡುವ ಜೊತೆಗೆ ವಿಜಯೇಂದ್ರ ಮತ್ತು ಬಿ ಎಸ್ ಯಡಿಯೂರಪ್ಪ ಅವರ ಹೊಂದಾಣಿಕೆ ರಾಜಕಾರಣ ಮತ್ತು ಅದರಿಂದಾಗಿ ಪಕ್ಷದ ಮೇಲೆ ಆಗಿರುವ ಪರಿಣಾಮಗಳ ಕುರಿತು ವಿವರ ವರದಿಯನ್ನೂ ಸಲ್ಲಿಸಲು ಸಜ್ಜಾಗಿ ಹೋಗಿರುವ ಯತ್ನಾಳ್ ಬಣ, ಆ ವರದಿಯನ್ನು ಕುರಿತು ಅಂತಿಮ ಚರ್ಚೆಗೆ ಮಂಗಳವಾರ ಬೆಳಿಗ್ಗೆ ಸೇರಿತ್ತು ಎನ್ನಲಾಗಿದೆ.

ಒಟ್ಟಾರೆ, ಮಂಗಳವಾರ ಬೆಳಿಗ್ಗೆಯಿಂದಲೇ ರಾಜ್ಯ ಬಿಜೆಪಿಯ ನಾಯಕರ ನಡುವಿನ ಸಂಘರ್ಷ ಏಕ ಕಾಲಕ್ಕೆ ದೆಹಲಿಯಲ್ಲಿಯೂ, ಬೆಂಗಳೂರಿನಲ್ಲಿಯೂ ಮುಂದುವರಿದಿದೆ. ಬೆಂಗಳೂರಿನಲ್ಲಿ ತರುಣ್‌ ಚುಗ್‌ ಅವರು ಸಂಘರ್ಷ ಕುರಿತು ಮಾಹಿತಿ ಕಲೆಹಾಕಿ ನಾಯಕರಿಗೆ ʼಚುಪ್‌ ರಹಾʼ ಎಂಬ ಸೂಚನೆ ನೀಡುವ ಪ್ರಯತ್ನದಲ್ಲಿದ್ದರೆ, ದೆಹಲಿಯಲ್ಲಿರುವ ಯತ್ನಾಳ್‌, ತಮ್ಮದೇ ತಂಡದೊಂದಿಗೆ ʼಚುಪ್‌ ರಹಾʼ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಿದ್ದಾರೆ.

Tags:    

Similar News