BJP Infighting | ಬಿಜೆಪಿ ಬಣ ಬಡಿದಾಟಕ್ಕೆ ಸದ್ಯಕ್ಕಿಲ್ಲ ಬ್ರೇಕ್: ವಿಜಯೇಂದ್ರ ವಿರುದ್ಧ ಯತ್ನಾಳ್ ಮತ್ತೆ ವಾಗ್ದಾಳಿ
ಪಕ್ಷದ ರಾಜ್ಯಾಧ್ಯಕ್ಷರ ನೇಮಕ ಸೇರಿದಂತೆ ಕರ್ನಾಟಕ ಬಿಜೆಪಿಯ ಗೊಂದಲಗಳಿಗೆ ಇತಿಶ್ರೀ ಹಾಡಲು ಹೈಕಮಾಂಡ್ ನೀಡಿದ್ದ ಫೆಬ್ರವರಿ ಅಂತ್ಯದ ಗಡುವು ಮುಗಿದು ಎರಡು ವಾರ ಕಳೆದಿದೆ.;
ರಾಜ್ಯ ಬಿಜೆಪಿಯ ಬಣ ಬಡಿದಾಟಕ್ಕೆ ಕಡಿವಾಣ ಹಾಕುವಲ್ಲಿ ಹೈಕಮಾಂಡ್ ಆಸಕ್ತಿ ವಹಿಸುತ್ತಿಲ್ಲ ಎಂಬ ಮಾತುಗಳ ನಡುವೆಯೇ ಬಂಡಾಯದ ನಾಯಕತ್ವ ವಹಿಸಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಪಕ್ಷದ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿಕಾರಿದ್ದಾರೆ.
ಬಣ ಬಡಿದಾಟಕ್ಕೆ ಬ್ರೇಕ್ ಹಾಕಲು ಈ ಮುನ್ನ ಹೈಕಮಾಂಡ್ ನೀಡಿದ್ದ ಫೆಬ್ರವರಿ ಅಂತ್ಯದ ಡೆಡ್‌ಲೈನ್ ಮುಗಿದು ಎರಡು ವಾರ ಕಳೆದಿದೆ. ಮಾರ್ಚ್ ಅರ್ಧ ಭಾಗ ಮುಗಿದುಹೋಗಿದ್ದರೂ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಹೈಕಮಾಂಡ್ ಕಡೆಯಿಂದ ಯಾವುದೇ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ.
ಈ ನಡುವೆ, ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಮತ್ತು ಹಿರಿಯ ನಾಯಕ ಬಿ ಎಸ್ ಯಡಿಯೂರಪ್ಪ ವಿರುದ್ಧದ ತಮ್ಮ ನಿರಂತರ ವಾಗ್ದಾಳಿಯನ್ನು ಬಂಡಾಯ ನಾಯಕ ಯತ್ನಾಳ್ ಮತ್ತಷ್ಟು ತೀವ್ರಗೊಳಿಸಿದ್ದಾರೆ.
ಪ್ರಧಾನಿ ಮೋದಿ, ಅಮಿತ್ ಶಾ ಅವರ ಬಿಜೆಪಿ ಮೇಲೆ ನಂಬಿಕೆ ಇದೆ. ಆದರೆ, ಯಡಿಯೂರಪ್ಪ- ವಿಜಯೇಂದ್ರ ಮೇಲೆ ನಂಬಿಕೆ ಇಲ್ಲ ಎನ್ನುವ ಮೂಲಕ ಯತ್ನಾಳ್, ವಿಜಯೇಂದ್ರ ವಿರುದ್ಧದ ತಮ್ಮ ವಾಗ್ದಾಳಿಯನ್ನು ಮುಂದುವರಿಸಿದ್ದಾರೆ.
ಇದೇ ವೇಳೆ ರಾಜ್ಯದಲ್ಲಿ ಬಿಜೆಪಿಯ ಹೀನಾಯ ಸೋಲಿನ ಕುರಿತೂ ಹೇಳಿಕೆ ನೀಡಿರುವ ಅವರು, ಪಕ್ಷವನ್ನು ಹಿಂದೂಗಳೆಲ್ಲರ ಪಕ್ಷವಾಗಿ ಮಾಡದೆ, ಕೇವಲ ಲಿಂಗಾಯತರ ಪಕ್ಷವಾಗಿ ಮಾಡಿದ್ದೇ ಪಕ್ಷದ ಸೋಲಿಗೆ ಕಾರಣವಾಯಿತು. ಹಿಂದೂಗಳಿಗೆ ಯಾರಿಗೇ, ಎಲ್ಲೇ ಅನ್ಯಾಯವಾದರೂ ಪಕ್ಷದ ಆಗಿನ ಸರ್ಕಾರ ಕಠಿಣ ಕ್ರಮಗಳನ್ನು ಜರುಗಿಸಬೇಕಿತ್ತು, ಆ ಮೂಲಕ ಬಿಜೆಪಿ ಸಮಸ್ತ ಹಿಂದೂಗಳ ರಕ್ಷಕ ಪಕ್ಷ ಎಂಬುದನ್ನು ಜನರಿಗೆ ಮನವರಿಕೆ ಮಾಡಬೇಕಿತ್ತು. ಆದರೆ, ಬಿಜೆಪಿಯ ಅಧಿಕಾರ ಹಿಡಿದವರು ಮೃದು ಧೋರಣೆ ತಳೆದರು. ಹಾಗಾಗಿಯೇ ಜನ ಬಿಜೆಪಿ ಮೇಲೆ ವಿಶ್ವಾಸ ಕಳೆದುಕೊಂಡು ಕಾಂಗ್ರೆಸ್ಸಿಗೆ 136 ಸ್ಥಾನ ನೀಡಿ ಗೆಲ್ಲಿಸಿದರು ಎಂದು ಹೇಳುವ ಮೂಲಕ ಪರೋಕ್ಷವಾಗಿ ಯಡಿಯೂರಪ್ಪ ಮತ್ತು ಅವರ ನಂತರದ ಮುಖ್ಯಮಂತ್ರಿಗಳ ವಿರುದ್ಧ ಕಿಡಿಕಾರಿದ್ದಾರೆ.
ವಿಜಯಪುರದಲ್ಲಿ ಭಾನುವಾರ ಮಾತನಾಡಿದ ಅವರು, ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ಮಾನದಂಡವೇ ಈ ಬಾರಿ ಹಿಂದುತ್ವ ಆಗಬೇಕು. ಹಿಂದುತ್ವದ ಬದ್ಧತೆ ಮತ್ತು ದಕ್ಷತೆ ತೋರುವವರಿಗೆ ಪಕ್ಷದ ರಾಜ್ಯಾಧ್ಯಕ್ಷರ ಹುದ್ದೆ ನೀಡಬೇಕು. ಸುಮ್ಮನೆ ಖಂಡನೆ ಮಾತನಾಡಿ ಹೊಂದಾಣಿಕೆ ರಾಜಕಾರಣ ಮಾಡುವವರನ್ನು ಕಿತ್ತೊಗೆಯಬೇಕು ಎಂದೂ ಹೇಳಿದ್ದಾರೆ.
ಮೆತ್ತಗಾದ ವಿಜಯೇಂದ್ರ ಬಣ
ಇದೇ ವೇಳೆ ವಿಜಯೇಂದ್ರ ಪರವಾಗಿ ಪಕ್ಷದಲ್ಲಿ ಪ್ರಬಲ ದನಿಯಾಗಿರುವ ಹೊನ್ನಾಳಿ ಮಾಜಿ ಶಾಸಕ ಎಂ ಪಿ ರೇಣುಕಾಚಾರ್ಯ ಇದೀಗ ತಮ್ಮ ದನಿಯನ್ನು ಮೃದುಗೊಳಿಸಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ನೋಟಿಸ್ ಬಂದ ಕೂಡಲೇ ಇವತ್ತೇ ಉಚ್ಛಾಟನೆ, ನಾಳೆಯೇ ಹೊರಹಾಕ್ತೀವಿ ಎನ್ನುತ್ತಿದ್ದವರು ಈಗ ಮೆತ್ತಗಾಗಿದ್ದಾರೆ. ಹೈಕಮಾಂಡಿಗೆ ಯತ್ನಾಳ್ ಏನು, ವಿಜಯೇಂದ್ರ ಏನು ಎಂದು ಗೊತ್ತಿದೆ. ಹಾಗಾಗಿ ಈಗ ರಾಗ ಬದಲಾಗಿದೆ. ನಾಳೆ ಪಕ್ಷದ ಅಧ್ಯಕ್ಷರಾದರೆ ಕಷ್ಟ ಎಂದು ಈಗಲೇ ರಾಜಿ ಸಂಧಾನ ಚಾಲೂ ಆಗಿದೆ ಎನ್ನುವ ಮೂಲಕ ರೇಣುಕಾಚಾರ್ಯಗೆ ಟಾಂಗ್ ನೀಡಿದ್ದಾರೆ.
ಕಳೆದ ಆರು ತಿಂಗಳಿಂದ ನಡೆಯುತ್ತಿರುವ ಬಿಜೆಪಿಯ ರಾಜ್ಯಾಧ್ಯಕ್ಷ ಪಟ್ಟದ ಫೈಟ್, ಕೊನೆಗೂ ಬಗೆಹರಿಯುವಂತೆ ತೋರುತ್ತಿಲ್ಲ. ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಬಹಿರಂಗ ಬಂಡಾಯ ಸಾರಿರುವ ಯತ್ನಾಳ್ ಅವರಿಗೆ ಪಕ್ಷದ ಹೈಕಮಾಂಡ್ ನೋಟಿಸ್ ಮೇಲೆ ನೋಟಿಸ್ ನೀಡಿದರೂ ಅವರ ವಿರುದ್ಧ ಈವರೆಗೆ ಯಾವುದೇ ಶಿಸ್ತುಕ್ರಮ ಜಾರಿಯಾಗಿಲ್ಲ. ಅದೇ ಹೊತ್ತಿಗೆ ಫೆಬ್ರವರಿ ಅಂತ್ಯದೊಳಗೆ ಪಕ್ಷದ ರಾಜ್ಯ ಘಟಕದ ಗೊಂದಲಗಳಿಗೆ ಇತಿಶ್ರೀ ಹಾಡಲಾಗುವುದು ಎಂದು ಹೇಳಿದ್ದ ಹೈಕಮಾಂಡ್, ಮಾರ್ಚ್ ಮಧ್ಯಭಾಗ ಮುಗಿದರೂ ಪಕ್ಷದ ರಾಜ್ಯಾಧ್ಯಕ್ಷರ ಆಯ್ಕೆಯ ವಿಷಯದಲ್ಲಿ ಯಾವುದೇ ಕ್ರಮ ಘೋಷಿಸಿಲ್ಲ. ಸಹಜವಾಗೇ ಈ ಧೋರಣೆ, ಕರ್ನಾಟಕ ಬಿಜೆಪಿಯ ವಿಷಯದಲ್ಲಿ ಹೈಕಮಾಂಡ್ ನಾಯಕರು ಭರವಸೆ ಕಳೆದುಕೊಂಡಿದ್ದಾರೆ ಎಂಬ ಚರ್ಚೆಗಳಿಗೆ ಕಾರಣವಾಗಿದೆ.
ಈ ನಡುವೆ, ವಿಜಯೇಂದ್ರ ಬಣ ಕಳೆದ ಒಂದು ವಾರದಿಂದ ಮೆತ್ತಗಾದಂತೆ ತೋರುತ್ತಿದ್ದು, ಯತ್ನಾಳ್ ಬಣ ಮತ್ತಷ್ಟು ಚುರುಕಾಗಿದೆ. ಒಟ್ಟಾರೆ, ಬಿಜೆಪಿಯ ಬಣ ಬಡಿದಾಟಕ್ಕೆ ಸದ್ಯಕ್ಕೆ ಬ್ರೇಕ್ ಬೀಳುವ ಸೂಚನೆಗಳು ಕಾಣುತ್ತಿಲ್ಲ.