ಸರ್ಕಾರ ಬೀಳಿಸುವ ಉದ್ದೇಶ ಬಿಜೆಪಿಗೆ ಇಲ್ಲ: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ
ರಾಜ್ಯ ಕಾಂಗ್ರೆಸ್ ಸರ್ಕಾರವನ್ನು ಬೀಳಿಸುವ ಅಥವಾ ಅಸ್ಥಿರಗೊಳಿಸುವ ಉದ್ದೇಶ ಬಿಜೆಪಿಗೆ ಇಲ್ಲ. ಮತದಾರರು ಕಾಂಗ್ರೆಸ್ ಪಕ್ಷಕ್ಕೆ 5 ವರ್ಷ ಜನಾದೇಶ ಕೊಟ್ಟಿದ್ದಾರೆ. ಹಾಗಾಗಿ ನಾವು ಬೀಳಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲʼʼ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ʻʻಯಾವುದೇ ಕಾರಣಕ್ಕೂ ಕಾಂಗ್ರೆಸ್ ಸರ್ಕಾರವನ್ನು ಬೀಳಿಸಿ ಅಧಿಕಾರಕ್ಕೆ ಬರುವ ಆಲೋಚನೆ ಬಿಜೆಪಿಗೆ ಇಲ್ಲ. ಕಾಂಗ್ರೆಸ್ ಸರ್ಕಾರ 5 ವರ್ಷ ಸಂಪೂರ್ಣ ಆಡಳಿತ ನಡೆಸಲಿ ಎಂಬುದೇ ಬಿಜೆಪಿಯ ನಿಲುವು ಮತ್ತು ಆಶಯವಾಗಿದೆ. ಕಳೆದ ಬಾರಿ ಬಿಜೆಪಿ 104 ಸ್ಥಾನಗಳನ್ನು ಪಡೆದಿತ್ತು. ಕಾಂಗ್ರೆಸ್ 68ಕ್ಕೆ ಇಳಿದಿತ್ತು. ಜನ ಅವರನ್ನು ತಿರಸ್ಕಾರ ಮಾಡಿದ್ದರು. ಆದಾಗ್ಯೂ ಕಾಂಗ್ರೆಸ್ – ಜೆಡಿಎಸ್ ಸೇರಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಯತ್ನಿಸಿದ್ದರು. ಬಳಿಕ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬರಲು ಯತ್ನಿಸಿದರು. ಹಾಗಾಗಿ ಆಗಿನ ಸಂದರ್ಭದಲ್ಲಿ ಬಿಜೆಪಿ ಸಹ ಸರ್ಕಾರ ರಚಿಸಲು ಪ್ರಯತ್ನಿಸಿತ್ತು. ಆದರೆ, ಈ ಬಾರಿ ಬಿಜೆಪಿ ಅಂತಹ ಯಾವುದೇ ಪ್ರಯತ್ನ ನಡೆಸುವುದಿಲ್ಲ. ಇನ್ನು ಭ್ರಷ್ಟಾಚಾರ ಆರೋಪ ಎದುರಿಸುತ್ತಿರುವ ಮುಖ್ಯಮಂತ್ರಿ ಅವರು ಶುದ್ಧರು ಎಂದಾದರೆ. ಬೇಕಿದ್ದರೆ ಅವರೇ ಸಿಎಂ ಆಗಿ ಮುಂದುವರಿಯಲಿ. ನಮ್ಮ ಅಭ್ಯಂತರ ಏನಿಲ್ಲʼʼ ಎಂದು ಹೇಳಿದರು.
ʻʻಸಿದ್ದರಾಮಯ್ಯ ಅವರು ತಪ್ಪು ಮಾಡಿಲ್ಲ ಎಂದಾದರೆ ಭಯ ಪಡುವ ಅಗತ್ಯ ಇಲ್ಲ. ಈ ವಿಷಯದಲ್ಲಿ ಅವರು ಕಾನೂನು ಹೋರಾಟ ಮಾಡಲು ನಮ್ಮ ತಕರಾರು ಇಲ್ಲ. ಕಾನೂನು ಹೋರಾಟದ ನೆಪದಲ್ಲಿ ತನಿಖೆಗೆ ಅಡ್ಡಿಪಡಿಸುವ ಕೆಲಸ ಮಾಡಬಾರದು ಎಂದರು.
ʻʻಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆಯಾಗಬೇಕು ಎಂಬ ಉದ್ದೇಶದಿಂದ ರಾಜ್ಯಪಾಲರು ಸಾಕಷ್ಟು ಸಮಯ ತೆಗೆದುಕೊಂಡು, ಕಾನೂನು ತಜ್ಞರ ಸಲಹೆ ಪಡೆದು, ಅಳೆದು ತೂಗಿ ಸಿ.ಎಂ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾರೆʼʼ ಎಂದು ಹೇಳಿದರು.
ʻʻಯಾವುದೇ ವ್ಯಕ್ತಿಯ ಸಾರ್ವಜನಿಕ ಜೀವನದಲ್ಲಿ ಶುದ್ಧತೆ, ಪ್ರಾಮಾಣಿಕತೆ ಕಾಯ್ದುಕೊಳ್ಳಬೇಕು. ಉನ್ನತ ಸ್ಥಾನದಲ್ಲಿ ಇದ್ದಾಗ ಯಾವುದೇ ಆರೋಪಗಳು ಬಂದರೆ ಆ ಬಗ್ಗೆ ತನಿಖೆಯಾಗಬೇಕು. ಸಾರ್ವಜನಿಕ ಜೀವನದಲ್ಲಿ ಶುದ್ಧತೆ ಕಾಯ್ದುಕೊಳ್ಳದಿದ್ದರೆ ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲದಂತಾಗುತ್ತದೆʼʼ ಎಂದರು.
ʻʻಶಶಿಕಲಾ ಜೊಲ್ಲೆ ಅವರ ಮೇಲಿನ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆದು, ಆರೋಪದಲ್ಲಿ ಸತ್ಯಾಂಶ ಇಲ್ಲ ಎಂದು ತಿಳಿದು ಬಂದಿದೆ. ಈ ವಿಷಯದಲ್ಲಿ ಕಾಂಗ್ರೆಸ್ ನವರು ನ್ಯಾಯಾಲಯದ ಮೊರೆ ಹೋಗಬಹುದು. ಆದರೆ, ಅವರ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ಕೊಟ್ಟಿರಲಿಲ್ಲ, ಸಿ.ಎಂ ವಿರುದ್ಧ ಅನುಮತಿ ನೀಡಿದ್ದಾರೆ ಎಂದು ವಾದ ಮಾಡುವುದು ಸರಿಯಲ್ಲʼʼ ಎಂದು ಹೇಳಿದರು.
ʻʻಒಂದುವೇಳೆ ಈ ವಿಷಯದಲ್ಲಿ ಕಾಂಗ್ರೆಸ್ ನವರು ರಾಜಕಾರಣ ಮಾಡಿ, ಪ್ರತಿಭಟನೆ ಮಾಡಿದರೆ ಅದಕ್ಕೆ ಜನರೇ ತಕ್ಕ ಉತ್ತರ ನೀಡುತ್ತಾರೆ. ಸಿದ್ದರಾಮಯ್ಯ ಅವರ ವಿರುದ್ಧ ಆರೋಪ ಕೇಳಿ ಬಂದಿದ್ದರಿಂದ ತನಿಖೆಯಾಗಬೇಕು. ಹೀಗಾಗಿ ಕಾಂಗ್ರೆಸ್ ನವರು ಪ್ರತಿಭಟನೆ ನಡೆಸುವ ಅಗತ್ಯ ಇಲ್ಲʼʼ ಎಂದರು.
ರಾಜ್ಯಪಾಲರು ಬಿಜೆಪಿ ಏಂಜೆಟ್ ರೀತಿ ವರ್ತಿಸುತ್ತಿದ್ದಾರೆ ಎಂಬ ಕಾಂಗ್ರೆಸ್ ನವರ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ʻʻಈ ಹಿಂದೆ ಹಂಸರಾಜ್ ಭಾರದ್ವಾಜ್ ಅವರು ಯಡಿಯೂರಪ್ಪ ವಿರುದ್ಧ ಪ್ರಾಸಿಕ್ಯೂಷನ್ ಗೆ ಅನುಮತಿ ನೀಡಿದ್ದಾಗ ಯಡಿಯೂರಪ್ಪ ಅವರು ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಟ್ಟಿದ್ದರು. ಆಗ ನಾವು ರಾಜ್ಯಪಾಲರು ಕಾಂಗ್ರೆಸ್ ಏಜೆಂಟ್ ಎಂದು ಹೇಳಿರಲಿಲ್ಲʼʼ ಎಂದು ತಿರುಗೇಟು ನೀಡಿದರು.