Union Budget 2025 | ರಾಜ್ಯಕ್ಕೆ ಚೊಂಬು ನೀಡಿದ ಬಿಜೆಪಿ; ಸಿಎಂ ಸಿದ್ದರಾಮಯ್ಯ ವಾಗ್ದಾಳಿ

ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ದೋಸ್ತಿ ಇದ್ದರೂ ಏಕೆ ಚೊಂಬು ಕೊಟ್ಟಿದ್ದೀರಿ ಎಂದು ಪ್ರಧಾನಿ ಅವರನ್ನು ಕೇಳುವ ಧೈರ್ಯ ಬಿಜೆಪಿ-ಜೆಡಿಎಸ್ ಸಂಸದರು ಹಾಗೂ ಕೇಂದ್ರ ಸಚಿವರಿಗೆ ಇಲ್ಲ ಎಂದು ಸಿಎಂ ಕಿಡಿಕಾರಿದ್ದಾರೆ.;

Update: 2025-02-01 13:17 GMT
ಸಿಎಂ ಸಿದ್ದರಾಮಯ್ಯ

ಕೇಂದ್ರ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ರಾಜ್ಯ ಮುಂದಿಟ್ಟಿದ್ದ ಒಂದೇ ಒಂದು ಬೇಡಿಕೆ ಈಡೇರಿಸದೇ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಚೊಂಬು ಅಭಿಯಾನ ಮುಂದುವರಿಸಿದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ಬಜೆಟ್‌ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್‌ ದೋಸ್ತಿ ಇದ್ದರೂ ಏಕೆ ಚೊಂಬು ಕೊಟ್ಟಿದ್ದೀರಿ ಎಂದು ಪ್ರಧಾನಿ ಅವರನ್ನು ಕೇಳುವ ಧೈರ್ಯ ಬಿಜೆಪಿ-ಜೆಡಿಎಸ್ ಸಂಸದರು ಹಾಗೂ ಕೇಂದ್ರ ಸಚಿವರಿಗೆ ಇಲ್ಲ. ಬಜೆಟ್‌ ವಿಷಯದಲ್ಲಿ ಕೇಂದ್ರ ಸರ್ಕಾರ ರಾಜ್ಯವನ್ನು ಕಡೆಗಣಿಸಲಿದೆ ಎಂಬುದು ನಿರೀಕ್ಷಿತವಾಗಿತ್ತು. ‌ಆಂಧ್ರ-ಬಿಹಾರ ಹೊರತುಪಡಿಸಿ ಎಲ್ಲಾ ರಾಜ್ಯಗಳಿಗೂ ಕೇಂದ್ರ ಸರ್ಕಾರ ಅನ್ಯಾಯ ಮಾಡಿದೆ ಎಂದು ಆರೋಪಿಸಿದ್ದಾರೆ.

ಮನುಸ್ಮೃತಿ ವಿರೋಧಿಸಿ, ಸಂವಿಧಾನ ಪರವಾಗಿರುವ ರಾಜ್ಯಗಳ ವಿರುದ್ಧ ಬಿಜೆಪಿ ಸರ್ಕಾರ ಸೇಡು ತೀರಿಸಿಕೊಳ್ಳುತ್ತಿದೆ. ಆದಾಯ ತೆರಿಗೆಯ ಮಿತಿ 12 ಲಕ್ಷ ರೂಪಾಯಿಗಳಿಗೆ ಏರಿಸಿರುವುದನ್ನು ಶ್ಲಾಘಿಸಲಾಗುತ್ತಿದೆ. ಆದರೆ, ಕಳೆದ ಆರ್ಥಿಕ ವರ್ಷದಲ್ಲಿ ದೇಶಾದ್ಯಂತ ಆದಾಯ ತೆರಿಗೆ ಪಾವತಿ ಮಾಡಿದವರ ಸಂಖ್ಯೆ ಕೇವಲ 8.09 ಕೋಟಿ ಮಾತ್ರ. ಇದು ದೇಶದ ಜನಸಂಖ್ಯೆಯ ಶೇ 6.64ರಷ್ಟಾಗುತ್ತದೆ. ಅವರಲ್ಲಿ 4.90 ಕೋಟಿ ಮಂದಿ ಶೂನ್ಯ ತೆರಿಗೆ ಪಾವತಿದಾರರು ಇದ್ದಾರೆ. ಆದ್ದರಿಂದ ಆದಾಯ ತೆರಿಗೆ ಮಿತಿಯ ಹೆಚ್ಚಳ ಮೇಲ್ವರ್ಗದ ಕೆಲವೇ ಕುಟುಂಬಗಳಿಗೆ ನೆರವಾಗಬಹುದೇ ವಿನಃ ದಿನದ ಆದಾಯ 100-150 ರೂಪಾಯಿ ಹೊಂದಿರುವ ಶೇ.70ರಷ್ಟು ಜನಸಂಖ್ಯೆಗೆ ಯಾವುದೇ ಲಾಭವಿಲ್ಲ ಎಂದು ವಿಶ್ಲೇಷಿಸಿದ್ದಾರೆ. 

50,65,345 ಕೋಟಿ ಗಾತ್ರದ ಬಜೆಟ್ ನಲ್ಲಿ ಸಾಲದ ಪ್ರಮಾಣ 15,68,936 ಕೋಟಿಯಷ್ಟಿದೆ. ಇದರಲ್ಲಿ ಬಡ್ಡಿ ರೂಪದಲ್ಲಿ 12,70,000 ಕೋಟಿ ಹೋಗುತ್ತಿದೆ. ದೇಶದ ಸಾಲವು 202 ಲಕ್ಷ ಕೋಟಿಯಿಂದ 205 ಲಕ್ಷ ಕೋಟಿವರೆಗೂ ಆಗಿದೆ. ಹೀಗಿರುವಾಗ ಬಜೆಟ್‌ ತೀರಾ ನಿರಾಶದಾಯಕವಾಗಿದೆ ಎಂದಿದ್ದಾರೆ.  

ಪರಿಷ್ಕೃತ ಅಂದಾಜಿನ ಪ್ರಕಾರ 47.16 ಲಕ್ಷ ಕೋಟಿ ರೂ.ವೆಚ್ಚವಾಗಬಹುದು ಎಂದು ಅಂದಾಜಿಸಲಾಗಿದೆ. ಅದರಂತೆ ನೋಡಿದರೆ ಕೇಂದ್ರ ಸರ್ಕಾರಕ್ಕೆ 1.04 ಲಕ್ಷ ಕೋಟಿ ರೂಪಾಯಿಗಳಷ್ಟು ತೆರಿಗೆ ಸಂಗ್ರಹ ಕಡಿಮೆಯಾಗಲಿದೆ. ಇದನ್ನು ವಿಶ್ಲೇಷಿಸುವುದಾದರೆ ದೇಶದ ಆರ್ಥಿಕ ಸ್ಥಿತಿ ಸರಿಯಿಲ್ಲ ಎಂಬುದನ್ನು ಮನದಟ್ಟಾಗಲಿದೆ ಎಂದು ಹೇಳಿದ್ದಾರೆ. 

ರಾಜ್ಯಕ್ಕೆ ಯಾವುದೇ ಲಾಭ ಇಲ್ಲ

ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ರಾಜ್ಯಗಳಲ್ಲಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. ಆದರೆ, ರಾಜ್ಯಕ್ಕೆ ಯಾವುದೇ ಹೊಸ ಘೋಷಣೆ ಇಲ್ಲ. ದಕ್ಷಿಣ ಭಾರತದ ರಾಜ್ಯಗಳಲ್ಲಿ ಸಣ್ಣ ಪ್ರಮಾಣದಲ್ಲಿ ಆಂಧ್ರಪ್ರದೇಶ ಬಿಟ್ಟರೆ ಉಳಿದ ಯಾವ ರಾಜ್ಯಗಳಿಗೂ ಯಾವುದೇ ಯೋಜನೆ ಘೋಷಣೆ ಮಾಡಿಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಹನ್ನೊಂದು ಬಜೆಟ್ ಗಳನ್ನು ನೋಡುತ್ತಾ ಬಂದ ನಮಗೆ ಹನ್ನೆರಡನೇ ಬಜೆಟ್ ಬಗ್ಗೆ ಹೆಚ್ಚಿನ ನಿರೀಕ್ಷೆ ಇರಲಿಲ್ಲ. ಇದು ಅವರೇ ಆಗಾಗ ಹೇಳಿಕೊಳ್ಳುತ್ತಿರುವ ʼವಿಕಸಿತ ಭಾರತʼದ ಬಜೆಟ್ ಅಲ್ಲ ‘’ಅವನತಿ ಭಾರತ’’ ದ ಬಜೆಟ್ ಆಗಿದೆ ಎಂದು ಟೀಕಿಸಿದ್ದಾರೆ.

ಅಭಿವೃದ್ದಿಯ ಪಥದಲ್ಲಿ ಮುನ್ನಡೆಯುತ್ತಿದ್ದ ಭಾರತವನ್ನು ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಹಿಂದಕ್ಕೆ ಎಳೆದೊಯ್ಯುತ್ತಿದೆ. ಯಥಾಪ್ರಕಾರ ಕರ್ನಾಟಕ ಮಾತ್ರವಲ್ಲ, ಇಡೀ ದೇಶಕ್ಕೆ ನಿರಾಶದಾಯಕ, ನಷ್ಟದಾಯಕ ಮತ್ತು ಹಾನಿಕಾರಕ ಬಜೆಟ್ ಆಗಿದೆ. ಪ್ರಧಾನಿ ಮೋದಿಯವರು ನಮ್ಮದು ಒಕ್ಕೂಟ ವ್ಯವಸ್ಥೆಯ ಭಾರತ ಎನ್ನುವುದನ್ನು ಮರೆತಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್ ಎಂದಾಕ್ಷಣ ಪ್ರತಿಯೊಂದು ರಾಜ್ಯದ ಜನತೆ ತಮ್ಮ ರಾಜ್ಯಕ್ಕೆ ಏನಾದರೂ ಕೊಡುಗೆಗಳಿರಬಹುದೇ ಎಂದು ಆಸೆಕಂಗಳಿಂದ ನೋಡುತ್ತಾರೆ. ಆದರೆ, ಇಂದು ಮಂಡಿಸಿದ ಬಜೆಟ್ ನಲ್ಲಿ ಒಂದೆಡೆ ಬಿಹಾರ, ಇನ್ನೊಂದೆಡೆ ಆಂಧ್ರಪ್ರದೇಶ ಬಿಟ್ಟರೆ ಬೇರೆ ರಾಜ್ಯಗಳ ಪ್ರಸ್ತಾವವೂ ಇಲ್ಲ, ಆ ರಾಜ್ಯಗಳಿಗೆ ಸಂಬಂಧಿಸಿದ ಯೋಜನೆಗಳೂ ಇಲ್ಲ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ಸಲ್ಲಿಸಿದ್ದ ವಿವರವಾದ ಬೇಡಿಕೆಯ ಪಟ್ಟಿಯನ್ನು ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಕಣ್ಣೆತ್ತಿಯೂ ನೋಡಿದ ಹಾಗಿಲ್ಲ. ಕಳೆದ ವಿಧಾನಸಭಾ ಚುನಾವಣೆ ವೇಳೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ʼರಾಜ್ಯದ ಜನ ಬಿಜೆಪಿಯನ್ನು ಗೆಲ್ಲಿಸದಿದ್ದರೆ ನರೇಂದ್ರ ಮೋದಿ ಆಶೀರ್ವಾದ ನಿಮಗೆ ಇರುವುದಿಲ್ಲ ಎಂದು ಬೆದರಿಕೆ ಹಾಕಿದ್ದರು. ಕರ್ನಾಟಕದ ಸ್ವಾಭಿಮಾನಿ ಜನತೆ ಆ ಬೆದರಿಕಗೆ ಜಗ್ಗದೆ ಬಿಜೆಪಿಯನ್ನು ಸೋಲಿಸಿದ್ದರು. ಅದರಂತೆ ನರೇಂದ್ರ ಮೋದಿಯವರು ಕರ್ನಾಟಕದ ವಿರುದ್ದ ಸೇಡು ತೀರಿಸಿಕೊಳ್ಳುತ್ತಿದ್ದಾರೆʼ ಎಂದು ಟೀಕಿಸಿದ್ದಾರೆ.

ಹದಿನೈದನೇ ಹಣಕಾಸು ಆಯೋಗದ ಶಿಫಾರಸಿನಂತೆ ತೆರಿಗೆ ಹಂಚಿಕೆಯಲ್ಲಿ ಆಗಿರುವ ಅನ್ಯಾಯ, ಜಿಎಸ್ ಟಿ ಪರಿಹಾರದಲ್ಲಿ ಮೋಸ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಿಗದ ಪರಿಹಾರ, ಪ್ರಮುಖ ನೀರಾವರಿ ಯೋಜನೆಗಳಾದ ಕೃಷ್ಣಾ ಮೇಲ್ದಂಡೆ , ಮಹದಾಯಿ, ಭದ್ರಾ ಮೇಲ್ದಂಡೆ ಮತ್ತು ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ನೀಡಬೇಕಾದ ಅಂಗೀಕಾರ ಮತ್ತು ಆರ್ಥಿಕ ನೆರವಿನ ಕುರಿತು ಬಜೆಟ್ ನಲ್ಲಿ ಪ್ರಸ್ತಾಪ ಮಾಡಿಲ್ಲ. ಬೆಂಗಳೂರಿನ ಅಭಿವೃದ್ಧಿಗೆ ಪೂರಕವಾದ ಸಬ್‌ಅರ್ಬನ್‌ ರೈಲ್ವೆ, ಹೊರವರ್ತುಲ ರಸ್ತೆ, ಮೆಟ್ರೋ ವಿಸ್ತರಣೆ ವಿಚಾರಗಳ ಬಗ್ಗೆಯೂ ಚಕಾರವೆತ್ತಿಲ್ಲ. ರಾಷ್ಟ್ರೀಯ ಬಜೆಟ್‌ ಗೆ ಇರಬೇಕಾದ ಸಮಗ್ರ ನೋಟವಾಗಲಿ, ದೂರಗಾಮಿ ದೂರದರ್ಶಿತ್ವವಾಗಲಿ ಬಜೆಟ್‌ನಲ್ಲಿ ಕಾಣಿಸುತ್ತಿಲ್ಲ. ಆಯವ್ಯಯ ಎನ್ನುವುದನ್ನು ಅಪಹಾಸ್ಯ ಮಾಡಿದಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಉದ್ಯಮಿಗಳಿಗೆ ಅನುಕೂಲಕರವಾದ ಬಜೆಟ್‌

ಕೇಂದ್ರ ಬಜೆಟ್‌ ನೇರವಾಗಿ ಅಂಬಾನಿಗೆ ಹಾಗೂ ಕೆಲವೇ ಕಾರ್ಪೊರೇಟ್ ಬಂಡವಾಳಶಾಹಿಗಳಿಗೆ ಅನುಕೂಲ ಮಾಡಿಕೊಡುವಂತಿದೆ. ಟೆಲಿಕಾಂ ಉದ್ಯಮದ ಮೂಲಸೌಕರ್ಯಗಳನ್ನು ಒದಗಿಸುವವರಿಗೆ ನೀಡುವ ಪರಿಹಾರ 2023-24 ರಲ್ಲಿ 2,000 ಕೋಟಿ ರೂಪಾಯಿ ಇದ್ದರೆ, ಈ ಬಜೆಟ್‌ನಲ್ಲಿ 28,400 ಕೋಟಿ ರೂಪಾಯಿ ಒದಗಿಸಲಾಗಿದೆ. ಚುನಾವಣೆಯ ಕಾರಣಕ್ಕಾಗಿ ಬಜೆಟ್‌ನಲ್ಲಿ 3-4 ಬಾರಿ ಬಿಹಾರದ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಹಾಗಾಗಿ, ಈ ಬಜೆಟ್ ಅಂಬಾನಿ ಬಜೆಟ್ ಮತ್ತು ಬಿಹಾರ್ ಬಜೆಟ್ ಎಂದು ಹೇಳಬಹುದು ಎಂದು ಸಿದ್ದರಾಮಯ್ಯ ಟೀಕಿಸಿದ್ದಾರೆ.

ಕರ್ನಾಟಕದ ಚುನಾವಣೆಗಿಂತ ಮೊದಲು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿ ರಾಜ್ಯದ ಜನರ ಕೈಗೆ ಚೊಂಬು ಕೊಟ್ಟು ತಲೆಗೆ ಟೋಪಿ ಹಾಕಿದಂತೆ, ಬಿಹಾರದ ಜನರಿಗೂ ಅದೇ ಗತಿ ಬರಲಿದೆ. ನಮ್ಮಂತೆ ಬಿಹಾರದ ಜನರು ಮೋಸ ಹೋಗಬಾರದೆಂದು ಮನವಿ ಮಾಡುತ್ತೇನೆ ಎಂದು ಹೇಳಿದ್ದಾರೆ.

ಮಧ್ಯಮ ವರ್ಗದ ಜನರ ಹಿತರಕ್ಷಣೆಗಾಗಿ ತೆರಿಗೆ ಕಡಿತ ಮಾಡುವುದಾಗಿ ಹೇಳಿದ್ದಾರೆ. ಆದರೆ, ಎಲ್.ಐ.ಸಿ. ಯಂತಹ ಮಧ್ಯಮ ವರ್ಗದ ಜನರ ವಿಮಾ ಸಂಸ್ಥೆಗಳನ್ನು ಸಂಪೂರ್ಣ ಖಾಸಗೀಕರಿಸಿ ಬಂಡವಾಳಿಗರ ಕೈಗೆ ಕೊಡುವ ಮಹಾದ್ರೋಹವನ್ನು ಮಾಡುವುದಾಗಿ ಈ ಬಜೆಟ್‌ನಲ್ಲಿ ಪ್ರಸ್ತಾಪಿಸಿದ್ದಾರೆ. ನಗರಾಭಿವೃದ್ಧಿ ನಿಧಿ (Urban Challenge Fund - ₹1 ಲಕ್ಷ ಕೋಟಿ) ಘೋಷಣೆ ಮಾಡಲಾಗಿದೆ. ಆದರೆ ಬೆಂಗಳೂರು ಮೆಟ್ರೋ ಹಂತ-3 ಮತ್ತು Peripheral Ring Road ಕಾಮಗಾರಿಗೆ ಯಾವುದೇ ಅನುದಾನ ಇಲ್ಲ. ಮುಂಬೈ, ದೆಹಲಿ ಮೆಟ್ರೋ ವಿಸ್ತರಣೆಗೆ ಆಯವ್ಯಯದಲ್ಲಿ ಅನುದಾನ ಮೀಸಲಿಡಲಾಗಿದೆ. ಬೆಂಗಳೂರು ಮೆಟ್ರೋಗೆ ಯಾವುದೇ ಅನುದಾನ ನೀಡಿಲ್ಲ. ಐಟಿ-ಸಾರಿಗೆ ಮೂಲಸೌಕರ್ಯ ಅಭಿವೃದ್ಧಿಗೆ ಸ್ಪಷ್ಟ ಯೋಜನೆಗಳಿಲ್ಲ ಎಂದು ವಿಶ್ಲೇಷಿಸಿದ್ದಾರೆ.

Tags:    

Similar News