Coastal Politics| ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕ; ಥಂಡಾ ಅಗದ ಆಗದ ಬಿಜೆಪಿ ಬಂಡಾಯ

ವಿಶ್ವ ಹಿಂದೂ ಪರಿಷತ್‌ ಕಾರ್ಯಕ್ರಮಕ್ಕೆ ಕಾಂಗ್ರೆಸ್‌ ಮುಖಂಡರಾದ ಅಶೋಕ್‌ ರೈ (ಶಾಸಕ), ಶಕುಂತಲಾ ಶೆಟ್ಟಿ ಆಗಮಿಸಿರುವುದು ಹಿಂದುತ್ವ ಮುಖಂಡ ಅರುಣ್‌ ಕುಮಾರ್‌ ಪುತ್ತಿಲ ಬಣಕ್ಕೆ ಮುಜುಗರ ತಂದಿದೆ.;

Update: 2024-10-23 12:39 GMT
ವಿಹೆಚ್‌ಪಿ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಶಾಸಕ ಅಶೋಕ್‌ ರೈ ಮತ್ತು ಹಿಂದುತ್ವ ಮುಖಂಡ ಅರುಣ್‌ಕುಮಾರ್‌ ಪುತ್ತಿಲ

ಕರಾವಳಿಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಯ ಮಟ್ಟಿಗೆ ಕಲ್ಲಡ್ಕ ಶಕ್ತಿಕೇಂದ್ರವಾದರೆ, ಪುತ್ತೂರು ಯಶಸ್ವಿ ಪ್ರಯೋಗಶಾಲೆ. ಡಿ.ವಿ.ಸದಾನಂದ ಗೌಡ, ಶೋಭಾ ಕರಂದ್ಲಾಜೆ ಸಹಿತ ಪ್ರಮುಖರು ರಾಜಕೀಯವಾಗಿ ಬಾಲಪಾಠಗಳನ್ನು ಕಲಿತ ಪುತ್ತೂರಿನಲ್ಲಿ ಬಿಜೆಪಿ ಹಾಗೂ ಅದರ ಮಾತೃಸಂಸ್ಥೆಗಳಾದ ಸಂಘಪರಿವಾರ ಹಾಗೂ ಹಿಂದುಪರ ಸಂಘಟನೆಗಳಲ್ಲಿನ ಬಣಜಗಳ ಆಗಾಗ್ಗೆ ಸ್ಫೋಟವಾಗುತ್ತದೆ. ಬುಧವಾರ ವಿಶ್ವ ಹಿಂದು ಪರಿಷತ್ (ವಿಹೆಚ್‌ಪಿ)ಜಿಲ್ಲಾ ಕಾರ್ಯಾಲಯ ಭೂಮಿಪೂಜೆ ಪುತ್ತೂರಿನಲ್ಲಿ ನಡೆಯುವ ಸಂದರ್ಭವೂ ಹಾಗೆಯೇ ಆಯಿತು!

ವಿಧಾನಸಭೆ ಚುನಾವಣೆಗೆ ರೆಬೆಲ್ ಆಗಿ ಸ್ಪರ್ಧಿಸಿದ್ದ ಹಿಂದುತ್ವ ಮುಖಂಡ ಅರುಣ್ ಕುಮಾರ್ ಪುತ್ತಿಲ (ಕಾಂಗ್ರೆಸ್‌ ಅಭ್ಯರ್ಥಿ ಅಶೋಕ್‌ ಕುಮಾರ್‌ ರೈ ವಿರುದ್ಧ ಪ್ರಬಲ ಸ್ಪರ್ಧೆ ನೀಡಿದ್ದರು) ಬಳಿಕ ಬಿಜೆಪಿ ಸೇರಿದ್ದು ಹಳೇ ಘಟನೆ. ಎಲ್ಲವೂ ಸರಿಹೋಯಿತು ಅಂದುಕೊಳ್ಳುವಾಗಲೇ, ಬುಧವಾರ ವಿಹಿಂಪ ಕಾರ್ಯಕ್ರಮಕ್ಕೆ ಆಗಮಿಸಿದ ಅರುಣ್ ಕುಮಾರ್ ಪುತ್ತಿಲ ಅವರನ್ನು ಕೆಲ ಹಿಂದುಪರ ಕಾರ್ಯಕರ್ತರು ತಡೆದ ಘಟನೆ ಬಳಿಕ ಮಾತಿನ ಚಕಮಕಿ ಹೊಯ್ ಕೈ ಹಂತದವರೆಗೆ ಹೋಯಿತು. ಇನ್ನು, ಅದೇ ಕಾರ್ಯಕ್ರಮಕ್ಕೆ ಬಿಜೆಪಿಯಿಂದ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಗೆ ವಲಸೆ ಹೋದ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಹಾಗೂ ಪುತ್ತೂರಿನ ಹಾಲಿ ಶಾಸಕ ಅಶೋಕ್ ರೈ ಕೋಡಿಂಬಾಡಿ ಆಗಮಿಸಿದಾಗ ಪುತ್ತಿಲ ಬಣದಿಂದ ಪ್ರಶ್ನೆಗಳು ಕೇಳಿ ಬಂದವು. " ಅಶೋಕ್‌ ರೈ ಬಂದಾಗ  ಇಲ್ಲದ ಆಕ್ಷೇಪ ಅರುಣ್ ಪುತ್ತಿಲ ಬಂದಾಗ ಯಾಕೆ ಬಂತು?" ಎಂಬ ಪ್ರಶ್ನೆಗಳನ್ನೂ ಪುತ್ತಿಲ ಬೆಂಬಲಿಗರು ಕೇಳಲು ಆರಂಭಿಸಿದ್ದು, ಮತ್ತೊಮ್ಮೆ ಪುತ್ತೂರಿನಲ್ಲಿ ಬಣರಾಜಕೀಯ ಗರಿಗೆದರಲು ವೇದಿಕೆ ಕಲ್ಪಿಸಿದಂತಾಗಿದೆ.

ವಿಶ್ವ ಹಿಂದೂ ಪರಿಷತ್‌ ಕಾರ್ಯಕ್ರಮದಲ್ಲಿ ಅಸೀನರಾಗಿರುವ ಕಾಂಗ್ರೆಸ್‌ ಶಾಸಕ ಅಶೋಕ್‌ ರೈ, ಮಾಜಿ ಕಾಂಗ್ರೆಸ್‌ ಶಾಸಕಿ ಶಕುಂತಲಾ ಶೆಟ್ಟಿ ಮುಂಭಾಗದಲ್ಲಿ ಅಸೀನರಾಗಿದ್ದಾರೆ. ಹಿಂದೆ ಹಿಂದುತ್ವ ನಾಯಕ ಅರುಣ್‌ಕುಮಾರ್‌ ಪುತ್ತಿಲ ಬೇಸರದಿಂದ ಎದ್ದು ನಿಂತಿದ್ದಾರೆ.

ಪುತ್ತೂರಿನಲ್ಲಿ ಬುಧವಾರ ಏನಾಯಿತು?

ವಿಶ್ವ ಹಿಂದು ಪರಿಷತ್ ನ ನೂತನ ಜಿಲ್ಲಾ ಕಾರ್ಯಾಲಯ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ಬುಧವಾರ ನಿಗದಿಯಾಗಿತ್ತು. ಪುತ್ತೂರಿನ ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ಮುಂಭಾಗದ ಈ ಹಿಂದಿನ ವಿಹಿಂಪ ಕಾರ್ಯಾಲಯವಿದ್ದ ಸ್ಥಳದಲ್ಲಿ ಶಿಲಾನ್ಯಾಸ ಕಾರ್ಯಕ್ರಮವಿತ್ತು. ಈ ಕಾರ್ಯಕ್ರಮಕ್ಕೆ ವಿಶ್ವ ಹಿಂದು ಪರಿಷತ್ ಪಕ್ಷಬೇಧ ಮರೆತು ಎಲ್ಲ ಹಿಂದು ಜನಪ್ರತಿನಿಧಿಗಳಿಗೆ ಆಹ್ವಾನಿಸಿದ್ದರು ಎಂದು ಹೇಳಲಾಗಿದೆ. ಆದರೆ ಅರುಣ್ ಪುತ್ತಿಲ ಆಗಮಿಸುವ ವೇಳೆ, ಅವರನ್ನು ಕೆಲ ಕಾರ್ಯಕರ್ತರು ತಡೆದಿದ್ದಾರೆ. ಈ ವೇಳೆ ಪುತ್ತಿಲ ಜತೆಗಿದ್ದವರು ಪುತ್ತಿಲ ನೆರವಿಗೆ ಧಾವಿಸಿದ್ದಾರೆ. ಆಗ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಬಳಿಕ ಪುತ್ತಿಲ ಕಾರ್ಯಕ್ರಮಕ್ಕೆ ತೆರಳಿದ್ದಾರೆ. ಸಭಿಕರಾಗಿ ಪೂರ್ತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಎದುರಿನ ಸಾಲಿನಲ್ಲಿ ಅದೇ ಕಾರ್ಯಕ್ರಮದಲ್ಲಿ ಸಭಿಕರಾಗಿ ಪುತ್ತೂರು ಶಾಸಕ, ಕಾಂಗ್ರೆಸ್ ಪಕ್ಷದ ಅಶೋಕ್ ಕುಮಾರ್ ರೈ, ಹಾಗೂ ಮಾಜಿ ಶಾಸಕಿ ಟಿ. ಶಕುಂತಳಾ ಶೆಟ್ಟಿ ಉಪಸ್ಥಿತರಿದ್ದರು. ಅವರು ಕೆಲ ಹೊತ್ತು ವೇದಿಕೆ ಮುಂಭಾಗ ಸಭಿಕರ ಮೊದಲ ಸಾಲಿನಲ್ಲಿ ಕುಳಿತಿದ್ದು, ಬಳಿಕ ತೆರಳಿದ್ದಾರೆ. ಶಾಸಕರ ಸಹಿತ ಆಗಮಿಸಿದ ಗಣ್ಯರನ್ನು ಸುಬ್ರಹ್ಮಣ್ಯ ಮಠಾಧೀಶ ವಿದ್ಯಾಪ್ರಸನ್ನತೀರ್ಥರ ಸಮ್ಮುಖ ವೇದಿಕೆಗೆ ಕರೆದು ವಿಹಿಂಪ ಮುಖಂಡರಿಂದ ಶಾಲು ಹೊದೆಸಿ ಗೌರವಿಸಲಾಯಿತು. ಈ ಸಂದರ್ಭ ಶಾಸಕ ಅಶೋಕ್ ರೈ ಅವರು ಹಿರಿಯ ಮುಖಂಡ ಗೋಪಾಲ್ ಜೀ ಅವರ ಕಾಲು ಮುಟ್ಟಿ ನಮಸ್ಕರಿಸಿದ್ದು ಗಮನ ಸೆಳೆಯಿತು.


ಬರುವಾಗಲೇ ಇಳೀಬಾರ್ದು ಎಂದು ಹೇಳಿದರೆ ಹೇಗೆ?

ನಾನು ಆಮಂತ್ರಣದ ಮೇಲೆ ಬಂದಿದ್ದೇನೆ. ನಾನೂ ವಿಶ್ವ ಹಿಂದು ಪರಿಷತ್ ನಲ್ಲಿ ಕೆಲಸ ಮಾಡಿದವನು. ಶಿಲಾನ್ಯಾಸ ಕಾರ್ಯಕ್ರಮ ಹಿಂದು ಸಮಾಜಕ್ಕೆ ಶಕ್ತಿಯನ್ನು ಕೊಡುವ ಕಾರ್ಯಕ್ರಮ. ನಾನು ಬರುವಾಗಲೇ ಕಾರಿನಿಂದ ಇಳೀಬಾರದು ಎಂದರೆ ಹೇಗೆ ಎಂದು ಪುತ್ತಿಲ ಬೇಸರ ವ್ಯಕ್ತಪಡಿಸಿದರು.

ಹಿಂದು ಪರ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡ ಕಾಂಗ್ರೆಸ್ ಮುಖಂಡರು

ಅಶೋಕ್ ಕುಮಾರ್ ರೈ ಹಿಂದೆಯೂ ವಿಹಿಂಪ ಸಹಿತ ಹಲವು ಹಿಂದುಪರ ಸಂಘಟನೆಗಳ ಒಡನಾಡಿ. ಒಂದು ಹಂತದಲ್ಲಿ ಬಿಜೆಪಿ ಟಿಕೆಟ್ ಅಶೋಕ್ ರೈಗಳಿಗೆ ಸಿಗುತ್ತದೆ ಎಂಬ ವಾತಾವರಣ ಇತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಕಾಂಗ್ರೆಸ್ ಪಕ್ಷ ಸೇರಿ ಅಲ್ಲಿ ಟಿಕೆಟ್ ಪಡೆದರು. ಕಾಂಗ್ರೆಸ್ ಪಕ್ಷದ ದಕ್ಷಿಣ ಕನ್ನಡ ಜಿಲ್ಲೆಯ ಪ್ರಶ್ನಾತೀತ ನಾಯಕರೆನಿಸಿದ ರಮಾನಾಥ ರೈ ಸಹಿತ ಪ್ರಮುಖ ನಾಯಕರು ಹಿಂದುಪರ ಕಾರ್ಯಕ್ರಮಗಳಿಗೆ ತೆರಳುತ್ತಾರಾದರೂ ವಿಶ್ವ ಹಿಂದು ಪರಿಷತ್, ಬಜರಂಗದಳದ ಕಾರ್ಯಕ್ರಮಗಳಿಗೆ ಭೇಟಿ ನೀಡುವುದಿಲ್ಲ. ಆದರೆ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದು, ಹಾಗೂ ಮಾಜಿ ಶಾಸಕಿ ಶಕುಂತಳಾ ಶೆಟ್ಟಿ ಆಗಮಿಸಿದ್ದು, ಇಲ್ಲಿ ಗಮನಾರ್ಹ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ, ಆಹ್ವಾನವಿದ್ದ ಕಾರಣ ಬಂದಿದ್ದೇವೆ ಎಂದು ಬೆಂಬಲಿಗರು ಹೇಳುತ್ತಿದ್ದರಾದರೂ ಪುತ್ತೂರಿನ ರಾಜಕಾರಣವನ್ನು ಗಮನಿಸಿದಾಗ, ಪುತ್ತೂರಿನಲ್ಲಿ ಬಿಜೆಪಿ ನಾಯಕತ್ವದ ಕೊರತೆಯನ್ನು ಎದುರಿಸುತ್ತಿರುವ ಹೊತ್ತಿನಲ್ಲಿ, ಅರುಣ್ ಪುತ್ತಿಲರಿಗೆ ಪುತ್ತೂರಲ್ಲಿ ಇನ್ನೂ ತೆರೆದ ಬಾಗಿಲಿನ, ಮುಕ್ತ ಮನಸ್ಸಿನ ಸ್ವಾಗತ ದೊರೆಯದ ಸನ್ನಿವೇಶದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದು ಗಮನಾರ್ಹ. ಈ ಕುರಿತು ಶಾಸಕ ಅಶೋಕ್ ರೈ ಹಾಗೂ ಬಿಜೆಪಿ ಮುಖಂಡ ಅರುಣ್ ಪುತ್ತಿಲ ಪ್ರತಿಕ್ರಿಯೆಗೆ ಸಿಕ್ಕಿಲ್ಲ.

Tags:    

Similar News