Waqf Asset Dispute| ಅನ್ವರ್ ಮಾಣಿಪ್ಪಾಡಿಗೆ ವಿಜಯೇಂದ್ರ ಲಂಚ ಆಮಿಷ ಆರೋಪ | ಬಿಜೆಪಿ-ಕಾಂಗ್ರೆಸ್ ವಾಕ್ಸಮರ
'ಮುಖ್ಯಮಂತ್ರಿಗಳ ಮಗನಾಗಿ ನಾನೇಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಿ 150 ಕೋಟಿ ನೀಡಲಿ, ಅದೂ ಕಾಂಗ್ರೆಸ್ ನಾಯಕರನ್ನು ಉಳಿಸಲು ನಾನೇಕೆ ಹಣ ನೀಡಬೇಕು. ಕಾಂಗ್ರೆಸ್ ನಾಯಕರ ಈ ಆರೋಪಗಳಲ್ಲಿ ಏನಾದರೂ ತರ್ಕ ಇದೆಯಾ ಎಂದು ಬಿ.ವೈ.ವಿಜಯೇಂದ್ರ ಕಿಡಿಕಾರಿದ್ದಾರೆ.;
ರಾಜ್ಯದಲ್ಲಿ ವಕ್ಫ್ ವಿವಾದ ಇದೀಗ ಹೊಸ ತಿರುವು ಪಡೆದುಕೊಂಡಿದೆ. ವಕ್ಫ್ ಆಸ್ತಿ ಅತಿಕ್ರಮಣ ಕುರಿತಾದ ವರದಿ ಬಹಿರಂಗಪಡಿಸದಿರಲು ಅನ್ವರ್ ಮಾಣಿಪ್ಪಾಡಿಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ 150 ಕೋಟಿ ಲಂಚದ ಆಮಿಷವೊಡ್ಡಿದ್ದರು ಎಂಬ ಆರೋಪ ಇದೀಗ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಮತ್ತೊಂದು ಸುತ್ತಿನ ವಾಕ್ಸಮರಕ್ಕೆ ಕಾರಣವಾಗಿದೆ.
ಅನ್ವರ್ ಮಾಣಿಪ್ಪಾಡಿಗೆ ಲಂಚದ ಆಮಿಷವೊಡ್ಡಿರುವ ಕುರಿತ ತನಿಖೆಯನ್ನು ಸಿಬಿಐಗೆ ವಹಿಸುವ ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಪರಸ್ಪರ ಸಮ್ಮತಿಸಿವೆ. ಈ ಮಧ್ಯೆ ಸೋಮವಾರದಿಂದ ಆರಂಭವಾಗುವ ವಿಧಾನಸಭೆ ಅಧಿವೇಶನದಲ್ಲಿ ಲಂಚದ ಆಮಿಷ ಪ್ರಕರಣ ಗದ್ದಲ ಎಬ್ಬಿಸುವ ಮುನ್ಸೂಚನೆ ನೀಡಿದೆ.
ಸರ್ಕಾರದ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಸಿಎಂ ಸಿದ್ದರಾಮಯ್ಯ ಮಾಡಿರುವ ಆರೋಪದಲ್ಲಿ ಏನಾದರೂ ತರ್ಕವಿದೆಯೇ ಎಂದು ಪ್ರಶ್ನಿಸಿದ್ದಾರೆ.
ಕಾಂಗ್ರೆಸ್ ಪಕ್ಷ ಹಾಗೂ ಸಿಎಂ ಸಿದ್ದರಾಮಯ್ಯ ತಮ್ಮ ವಿರುದ್ಧದ ಭ್ರಷ್ಟಾಚಾರ, ಮುಡಾ ಸೇರಿದಂತೆ ಇತರೆ ಹಗರಣದ ಆರೋಪಗಳಿಂದ ವಿಚಲಿತರಾಗಿದ್ದಾರೆ. ಇದೊಂದು ನಾಚಿಕೆಗೇಡಿನ ಸರ್ಕಾರ. ಕಾಂಗ್ರೆಸ್ ಸಚಿವರು, ನಾಯಕರ ಹೇಳಿಕೆಗಳನ್ನು ನೋಡುತ್ತಿದ್ದರೆ ಅವರಿಗೆ ಬುದ್ಧಿಭ್ರಮಣೆಯಾದಂತಿದೆ. ಯಡಿಯೂರಪ್ಪ ಸಿಎಂ ಆಗಿದ್ದಾಗ ಕಾಂಗ್ರೆಸ್ ನಾಯಕರಿಂದ ಅತಿಕ್ರಮಣವಾಗಿರುವ ವಕ್ಫ್ ಜಾಗಗಳ ಕುರಿತು ಅನ್ವರ್ ಮಾಣಿಪ್ಪಾಡಿ ಆಯೋಗ ವರದಿ ಸಲ್ಲಿಸಿತ್ತು.
'ಮುಖ್ಯಮಂತ್ರಿಗಳ ಮಗನಾಗಿ ನಾನೇಕೆ ಅನ್ವರ್ ಮಾಣಿಪ್ಪಾಡಿ ಮನೆಗೆ ಹೋಗಿ 150 ಕೋಟಿ ನೀಡಲಿ, ಅದೂ ಕಾಂಗ್ರೆಸ್ ನಾಯಕರನ್ನು ಉಳಿಸಲು ನಾನೇಕೆ ಹಣ ನೀಡಬೇಕು. ಕಾಂಗ್ರೆಸ್ ನಾಯಕರ ಈ ಆರೋಪಗಳಲ್ಲಿ ಏನಾದರೂ ತರ್ಕ ಇದೆಯಾ ಎಂದು ಕಿಡಿಕಾರಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಹೇಳಿಕೆಯನ್ನು ನೋಡಿಲ್ಲ, ಸಿಎಂ ಹಾಗೂ ಕಾಂಗ್ರೆಸ್ ನಾಯಕರು ಮಾಡಿರುವ ಆರೋಪದಲ್ಲಿ ಅರ್ಥವಿಲ್ಲ.ಅವರ ಆರೋಪಗಳಿಗೆ ಏನು ಹೇಳಬೇಕೋ ಗೊತ್ತಾಗುತ್ತಿಲ್ಲ. ಒಟ್ಟಿನಲ್ಲಿ ಹಗರಣಗಳಿಂದ ಸಿಎಂ ವಿಚಲಿತರಾಗಿರುವುದು ಸ್ಪಷ್ಟವಾಗಿದೆ ಎಂದು ತಿರುಗೇಟು ನೀಡಿದ್ದಾರೆ.
ಆರೋಪ ನಿರಾಕರಿಸಿದ ಮಾಣಿಪ್ಪಾಡಿ
ಸಿಎಂ ಸಿದ್ದರಾಮಯ್ಯ ಆರೋಪಕ್ಕೆ ಮಂಗಳೂರಿನ ಮಾಣಿಪ್ಪಾಡಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅನ್ವರ್ ಮಾಣಿಪ್ಪಾಡಿ, ವಿಜಯೇಂದ್ರ ಅವರು ನಮ್ಮ ಮನೆಗೆ ಬಂದಿರಲಿಲ್ಲ. ಲಂಚದ ಆಮಿಷವೊಡ್ಡುವ ಯಾವುದೇ ಪ್ರಸ್ತಾಪ ನನ್ನ ಮುಂದೆ ಇಟ್ಟಿರಲಿಲ್ಲ ಎಂದು ಹೇಳಿದ್ದಾರೆ.
ಸರ್ಕಾರಕ್ಕೆ ವರದಿ ಸಲ್ಲಿಸುವಾಗ ವಿಜಯೇಂದ್ರ ಸ್ಥಳದಲ್ಲಿ ಇರಲಿಲ್ಲ, ಆಗ ನನಗೆ ಅವರ ಪರಿಚಯವೂ ಇರಲಿಲ್ಲ. ಅವರ ಹೆಸರನ್ನಷ್ಟೇ ಕೇಳಿದ್ದೆ. ವಿಜಯೇಂದ್ರ ಪಕ್ಷದ ಉಪಾಧ್ಯಕ್ಷರಾಗಿದ್ದಾಗ ವರದಿ ಮಂಡನೆ ವಿಳಂಬದ ಬಗ್ಗೆ ಮಾತ್ರ ಮಾತನಾಡಿ, ಅಸಮಾಧಾನ ವ್ಯಕ್ತಪಡಿಸಿದ್ದೆ ಸ್ಪಷ್ಟಪಡಿಸಿದ್ದಾರೆ.
ಅನ್ವರ್ ಮಾಣಿಪ್ಪಾಡಿ ಹೇಳಿಕೆಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಜಿ.ಪರಮೇಶ್ವರ, ಮಾಣಿಪ್ಪಾಡಿ ಅವರೇ ವಿಜಯೇಂದ್ರ ವಿರುದ್ಧ ಆರೋಪ ಮಾಡಿರುವ ವಿಡಿಯೋ ದೃಶ್ಯಾವಳಿ ಇದೆ. ಮಾಧ್ಯಮಗಳು ಆಗ ಅದನ್ನು ಪ್ರಸಾರ ಮಾಡಿದ್ದವು. ಈಗ ಮಾತು ಬದಲಿಸಿದರೆ ಏನು ಮಾಡಬೇಕು. ಸೋಮವಾರ ವಿಧಾನಸಭೆ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪವಾಗಬಹುದು ಎಂದು ಹೇಳಿದ್ದಾರೆ.
ಮೂರು ದಿನ ಉ.ಕ. ಸಮಸ್ಯೆ ಚರ್ಚೆ
ಸೋಮವಾರದಿಂದ ಮೂರು ದಿನ ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಗುವುದು. ಹಲವು ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
ಗದಗ ಜಿಲ್ಲೆಯ ರೋಣ ಹೆಲಿಪ್ಯಾಡ್ ನಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ್ದಾರೆ. ವಕ್ಫ್ ವಿಚಾರದಲ್ಲಿ ಬಿ.ವೈ.ವಿಜಯೇಂದ್ರ 150 ಕೋಟಿ ಆಮಿಷ ಒಡ್ಡಿದ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ, ಅನ್ವರ್ ಮಾನಪ್ಪಾಡಿ ಅವರು, ಅವರದ್ದೇ ವಿಡಿಯೊದಲ್ಲಿ ನೀಡಿರುವ ಹೇಳಿಕೆ ಆಧಾರದ ಮೇಲೆ ಕೇಂದ್ರಕ್ಕೆ ಪತ್ರ ಬರೆದಿದ್ದೇವೆ ಎಂದು ತಿಳಿಸಿದ್ದಾರೆ.