ಬೆಂಗಳೂರು, ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರಿಂದ 'ಜಿಎಸ್‌ಟಿ ಉತ್ಸವ' ಆಚರಣೆ

ಬಿಜೆಪಿ ಕಾರ್ಯಕರ್ತರು ಮಲ್ಲೇಶ್ವರದ ಮಳಿಗೆಗಳಿಗೆ ಭೇಟಿ ನೀಡಿ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಹೊಸ ತೆರಿಗೆ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸಿದರು.

Update: 2025-09-22 09:08 GMT

ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಸಿಹಿ ತಿನ್ನಿಸಿ ಸಂಭ್ರಮಾಚರಣೆ ಮಾಡಿದರು. 

Click the Play button to listen to article

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಸರಳೀಕೃತ ಜಿ.ಎಸ್.ಟಿ. 2.0ಯನ್ನು ಸ್ವಾಗತಿಸಿರುವ ಬಿಜೆಪಿ ಕರ್ನಾಟಕ ಘಟಕವು, ಸೋಮವಾರ ಬೆಂಗಳೂರಿನ ಜಗನ್ನಾಥ ಭವನದಲ್ಲಿರುವ ರಾಜ್ಯ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಕಾರ್ಯಕರ್ತರು ಪಟಾಕಿ ಸಿಡಿಸಿ ಮತ್ತು ಸಿಹಿ ಹಂಚುವ ಮೂಲಕ ಈ ಹೊಸ ತೆರಿಗೆ ವ್ಯವಸ್ಥೆಯನ್ನು ಆಚರಿಸಿದರು.

ಈ ಸಂದರ್ಭದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ 'ಜೈ' ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ 'ಜೈ' ಎಂದು ಘೋಷಣೆಗಳನ್ನು ಕೂಗಲಾಯಿತು. ನಂತರ, ಕಾರ್ಯಕರ್ತರು ಮಲ್ಲೇಶ್ವರದ ಮಳಿಗೆಗಳಿಗೆ ಭೇಟಿ ನೀಡಿ ವ್ಯಾಪಾರಿಗಳಿಗೆ ಮತ್ತು ಸಾರ್ವಜನಿಕರಿಗೆ ಸಿಹಿ ಹಂಚಿ ಹೊಸ ತೆರಿಗೆ ವ್ಯವಸ್ಥೆಯ ಕುರಿತು ಜಾಗೃತಿ ಮೂಡಿಸಿದರು.

ಈ ಸಂಭ್ರಮಾಚರಣೆಯಲ್ಲಿ ವಿಧಾನಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಧಾನಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್, ಕೇಂದ್ರದ ಮಾಜಿ ಸಚಿವ ಎ. ನಾರಾಯಣಸ್ವಾಮಿ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಎನ್. ಮಹೇಶ್, ಬೆಂಗಳೂರು ಉತ್ತರ ಜಿಲ್ಲಾಧ್ಯಕ್ಷ ಎಸ್. ಹರೀಶ್, ಎಸ್.ಸಿ. ಮೋರ್ಚಾ ರಾಷ್ಟ್ರೀಯ ಮಾಜಿ ಪ್ರಧಾನ ಕಾರ್ಯದರ್ಶಿ ಚಿ.ನಾ. ರಾಮು, ರಾಜ್ಯ ವಕ್ತಾರರಾದ ಎಂ.ಜಿ. ಮಹೇಶ್, ಹೆಚ್. ವೆಂಕಟೇಶ್ ದೊಡ್ಡೇರಿ, ಮೋಹನ್ ವಿಶ್ವ, ರಾಜ್ಯ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ, ಸಹ ಸಂಚಾಲಕ ಪ್ರಶಾಂತ್ ಕೆಡೆಂಜಿ ಹಾಗೂ ಪಕ್ಷದ ಇತರ ಕಾರ್ಯಕರ್ತರು ಭಾಗವಹಿಸಿದ್ದರು.

ಶಿವಮೊಗ್ಗದಲ್ಲೂ ಸಂಭ್ರಮಾಚರಣೆ 

ಶಿವಮೊಗ್ಗದ ಅಂಗಡಿ- ಮಳಿಗೆಗಳಿಗೆ ತೆರಳಿ ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಸಿಹಿ ಹಂಚಿ ಸಂಭ್ರಮಾಚರಣೆ ಮಾಡಿದರು.

ಬಳಿಕ ಮಾತನಾಡಿದ ಅವರು, ಎರಡು ಸ್ಲ್ಯಾಬ್ ಜಿಎಸ್‍ಟಿ ಜಾರಿಗೊಳಿಸಿದ್ದಾರೆ. ಈ ಮೂಲಕ ಜನರಿಗೆ ದೀಪಾವಳಿ ಉಡುಗೊರೆ ನೀಡಿದ್ದಾರೆ. ಅದಕ್ಕಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಜೆಪಿ ಅಭಿನಂದಿಸುತ್ತದೆ. ಜನತೆಯ ಪರವಾಗಿ ಕೇಂದ್ರ ಸರಕಾರಕ್ಕೆ ಧನ್ಯವಾದ ಸಮರ್ಪಿಸಲು ಈ ಸಂಭ್ರಮಾಚರಣೆ ಮಾಡುತ್ತಿದ್ದೇವೆ ಎಂದು ತಿಳಿಸಿದರು.

 ಜಗತ್ತಿನ ದೊಡ್ಡಣ್ಣ ಅಮೇರಿಕದ ಅಧ್ಯಕ್ಷ ಟ್ರಂಪ್ ಅವರು ಬೇರೆ ಬೇರೆ ದೇಶಗಳಿಗೆ ತೆರಿಗೆಯನ್ನು ಹೆಚ್ಚಿಸಿರುವುದನ್ನು ನಾವು ನೋಡಿದ್ದೇವೆ. ಇಂದು ಭಾರತಕ್ಕೆ ದೊಡ್ಡ ಸವಾಲನ್ನು ಹಾಕಿದ ಸಂದರ್ಭದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಭಾರತ ಯಾವುದಕ್ಕೂ ಜಗ್ಗುವುದಿಲ್ಲ ಮತ್ತು ಬಗ್ಗುವುದಿಲ್ಲ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ ಎಂದು ಹೇಳಿದರು.

ಈ ವೇಳೆ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್, ಡಾ. ಧನಂಜಯ ಸರ್ಜಿ, ಶಿವಮೊಗ್ಗ ಜಿಲ್ಲಾಧ್ಯಕ್ಷ ಎನ್.ಕೆ.ಜಗದೀಶ್, ನಗರ ಮಂಡಲ ಅಧ್ಯಕ್ಷ ಮೋಹನ್ ರೆಡ್ಡಿ ಹಾಗೂ ಕಾರ್ಯಕರ್ತರು ಇದ್ದರು.

Tags:    

Similar News