ಕೃಷಿ ಹೊಂಡದಲ್ಲಿ ಭಾರೀ ಸ್ಫೋಟಕ ಬಳಸಿದ ಆರೋಪ; ಡ್ರೋನ್ ಪ್ರತಾಪ್ ಬಂಧನ
ಭಯಾನಕ ಸ್ಫೋಟಕವೊಂದನ್ನು ಕೃಷಿ ಹೊಂಡದಲ್ಲಿ ಸಿಡಿಸಿದ ಹಾಗೂ ಅಕ್ರಮವಾಗಿ ಸ್ಫೋಟಕ ಬಳಸಿದ ಆರೋಪದಲ್ಲಿ ಡ್ರೋನ್ ಪ್ರತಾಪ್‌ನನ್ನು ತುಮಕೂರು ಜಿಲ್ಲೆಯ ಮಧುಗಿರಿ ಪೊಲೀಸರು ಬಂಧಿಸಿದ್ದಾರೆ.
ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಪ್ರತಾಪ್ ವಿಡಿಯೋ ಅಪ್‌ಲೋಡ್ ಮಾಡಿ ಕೃಷಿ ಹೊಂಡದಲ್ಲಿ ಸ್ಪೋಟದ ಬಗ್ಗೆ ಮಾಹಿತಿ ನೀಡಿದ್ದ. ಆ ಬಗ್ಗೆ ಸಾರ್ವಜನಿಕರು ಪೊಲೀಸರ ಗಮನಸೆಳೆದಿದ್ದರು.
ಪೊಲೀಸರು ತನಿಖೆ ನಡೆಸಿದಾಗ, ಪ್ರತಾಪ್ ಸ್ಫೋಟಕವೊಂದನ್ನು ಹೊಂಡದ ನೀರಿಗೆ ಎಸೆದು ಸ್ಫೋಟಿಸುವಂತೆ ಮಾಡಿರುವುದು ಹಾಗೂ ಆ ಸ್ಫೋಟಕ ನೀರಿನಲ್ಲಿ ಭಯಾನಕವಾಗಿ ಸಿಡಿದು ನೀರಿನ ಮೇಲೆ ರಭಸವಾಗಿ ಬೆಂಕಿ ಸಮೇತ ಚಿಮ್ಮುತ್ತಿರುವುದು ವಿಡಿಯೋದಲ್ಲಿ ಕಂಡುಬಂದಿತು.
ಘಟನೆ ಮಧುಗಿರಿ ತಾಲೂಕಿನ ಐ.ಡಿ. ಹಳ್ಳಿ ಹೋಬಳಿಯ ಜನಕಲೋಟಿ ಬಳಿಯ ಶ್ರೀರಾಯರ ಬೃಂದಾವನ ಫಾರ್ಮ್ಸ್ ನಲ್ಲಿ ನಡೆದಿದು, ಸ್ಫೋಟಕ ವಸ್ತುಗಳ ಕಾಯಿದೆ ಪ್ರಕಾರ ಪ್ರಕರಣ ದಾಖಲಿಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ಆತನನ್ನು ವಿಚಾರಣೆಗೆ ಒಳಪಡಿಸಿದಾಗ ಹಿಂದೆಯೂ ಒಂದೆರಡು ಬಾರಿ ಇದೇ ರೀತಿ ಸ್ಫೋಟಕ ಸಿಡಿಯುವಂತೆ ಮಾಡಿದ್ದ ಎಂದು ಪೊಲೀಸರಿಗೆ ವಿವರಿಸಿದ್ದಾನೆ ಎನ್ನಲಾಗಿದೆ.
ಸಾಮಾಜಿಕ ಜಾಲತಾಣದಲ್ಲಿ ಈ ರೀತಿ ಸ್ಫೋಟಕದ ವಿಡಿಯೋ ಅಪ್‌ಲೋಡ್ ಮಾಡಿದ್ದರಿಂದ ಹೆಚ್ಚು ಜನರ ವೀಕ್ಷಣೆ ಮಾಡಿದಕ್ಕಾಗಿ 100 ಡಾಲರ್ ಹಣ ತನ್ನ ಖಾತೆಗೆ ಜಮೆಯಾಗಿತ್ತು. ಹಣ ಗಳಿಸುವ ಕಾರಣಕ್ಕೆ ಮತ್ತೆ ಈ ಕೃತ್ಯವನ್ನು ನಡೆಸಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಆತ ಜಮೀನು ಮಾಲಿಕನ ಅನುಮತಿಯಿಲ್ಲದೆ ಸ್ಫೋಟ ನಡೆಸಿದ್ದಾನೆ. ಸೋಡಿಯಂ ವಸ್ತುವನ್ನು ಬಳಸಿ ಈ ಕೃತ್ಯ ಹದಿನೈದು ದಿನಗಳಲ್ಲಿ ಎರಡು ಬಾರಿ ಎಸಗಿದ್ದಾನೆ. ಇಂತಹ ಕೃತ್ಯಕ್ಕೆ ಪೂರ್ವಾನಮತಿ ಬೇಕೆಂಬ ತಿಳುವಳಿಕೆ ಇಲ್ಲ. ಕೇವಲ ಹಣ ಗಳಿಸುವ ಯತ್ನ ಆತನದಾಗಿದೆ ಎಂದು ಸ್ಥಳೀಯ ಪೊಲೀಸರು ಹೇಳಿದ್ದಾರೆ.
ಡ್ರೋನ್ ಹಾರಿಸಿ ಖ್ಯಾತನಾಗಿದ್ದ ಪ್ರತಾಪ್ ಹಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದಾನೆ. ಈತ ಖಾಸಗಿ ಚಾನೆಲ್ ನಡೆಸುವ ಬಿಗ್ ಬಾಸ್ ಸ್ಪರ್ಧಿಯೂ ಆಗಿದ್ದು, ಈಗ ಮತ್ತೆ ವಿವಾದವೊಂದನ್ನು ಸೃಷ್ಟಸಿಕೊಂಡಿದ್ದಾನೆ.