Karnataka | ಡ್ಯಾಮೇಜ್‌ ಕಂಟ್ರೋಲ್‌ಗೆ ಬಿಜೆಪಿಯಿಂದ ʼಭೀಮ ಸಂಗಮʼ ಅಭಿಯಾನ

ರಾಜ್ಯದಲ್ಲಿ ಜ.25 ರವರೆಗೆ ರಾಜ್ಯ ಮಟ್ಟದಿಂದ ಬೂತ್ ಮಟ್ಟದವರೆಗೆ ಭೀಮ ಸಂಗಮ ಅಭಿಯಾನ ನಡೆಸಲು ಬಿಜೆಪಿ ನಿರ್ಧರಿಸಿದೆ.;

Update: 2025-01-10 07:35 GMT
ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಸಂವಿಧಾನ ಗೌರವ ದಿನ ಆಚರಿಸಲಾಯಿತು

ಸಂವಿಧಾನ ಬದಲಾವಣೆ ವಿಚಾರದಲ್ಲಿ ಪಕ್ಷಕ್ಕಾಗಿರುವ ಮುಜುಗರದಿಂದ ಪಾರಾಗಲು ರಾಜ್ಯ ಬಿಜೆಪಿ ನಾಯಕತ್ವ ʼಭೀಮ ಸಂಗಮʼ ಅಭಿಯಾನ ಹಮ್ಮಿಕೊಂಡಿದೆ.

ಜ.25 ರವರೆಗೆ ರಾಜ್ಯ ಮಟ್ಟದಿಂದ ಬೂತ್ ಮಟ್ಟದವರೆಗೆ ಅಭಿಯಾನ ನಡೆಸಲು ಗುರುವಾರ ಬೆಂಗಳೂರಿನ ಬಿಜೆಪಿ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಶಾಸಕರು ಹಾಗೂ ಸಂಸದರ ಸಮಾಲೋಚನಾ ಸಭೆಯಲ್ಲಿ ತೀರ್ಮಾನಿಸಿದೆ.

ಅಭಿಯಾನದ ಉದ್ದೇಶವೇನು?

ಬಿಜೆಪಿಗೆ ಸಂವಿಧಾನ ವಿರೋಧಿ ಹಣೆಪಟ್ಟಿ ಕಟ್ಟಿರುವುದರಿಂದ ಚುನಾವಣೆಯಲ್ಲಿ ಭಾರೀ ಹಿನ್ನಡೆಯಾಗಿದೆ. ಬಿಜೆಪಿ ನಾಯಕರ ಹೇಳಿಕೆಗಳಿಂದಲೂ ಪಕ್ಷಕ್ಕೆ ಹಾನಿಯಾಗಿದೆ. ಹೀಗಾಗಿ, ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ಯಾವಾಗ ಮತ್ತು ಯಾವ ಕಾರಣಕ್ಕೆ ಸಂವಿಧಾನಕ್ಕೆ ತಿದ್ದುಪಡಿ ತಂದಿವು ಎಂಬುದನ್ನು ದಾಖಲೆಗಳ ಸಮೇತ ಜನರ ಮುಂದಿಡಬೇಕು. ಜ. 25 ರಂದು ರಾಜ್ಯದ ಪ್ರತಿ ಮತಗಟ್ಟೆಯಲ್ಲಿ 30 ರಿಂದ 40 ಜನರನ್ನು ಸೇರಿಸಿ ಸಂವಿಧಾನದ ಪ್ರತಿಗೆ ಪುಷ್ಪ ಅರ್ಪಿಸಿ ಪೀಠಿಕೆ ಓದಬೇಕು ಎಂದು ನಿರ್ಧರಿಸಲಾಯಿತು.

ಮನೆಗೆ ಕರೆಸಿ ದಲಿತರಿಗೆ ಸನ್ಮಾನ

ಇನ್ನು ಪಕ್ಷದ ಶಾಸಕರು, ಮಾಜಿ ಶಾಸಕರು, ಸಂಸದರು ಹಾಗೂ ಮಾಜಿ ಸಂಸದರು ತಮ್ಮ ಮನೆಗೆ ಕನಿಷ್ಠ 50 ದಲಿತ ಕುಟುಂಬಗಳನ್ನು ಕರೆಸಿ ಗೌರವಿಸಬೇಕು. ಸಂವಿಧಾನ ಮತ್ತು ಅಂಬೇಡ್ಕರ್ ಅವರಿಗೆ ಬಿಜೆಪಿ ಸರ್ಕಾರ ಮಾಡಿರುವ ಉತ್ತಮ ಕೆಲಸಗಳನ್ನು ತಿಳಿಸಿ ಮನವರಿಕೆ ಮಾಡಿಕೊಡುವ ಜೊತೆಗೆ ಕಾಂಗ್ರೆಸ್ ನಯವಂಚಕತನದ ಬಗ್ಗೆಯೂ ವಿವರಿಸಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ತಿಳಿಸಿದ್ದಾರೆ.

ಕಾಂಗ್ರೆಸ್ ತಪ್ಪುಗಳ ಮನವರಿಕೆ

ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಸಂವಿಧಾನದ ವಿಚಾರದಲ್ಲಿ ಕಾಂಗ್ರೆಸ್ ಮಾಡಿರುವ ತಪ್ಪುಗಳನ್ನು ಜನರ ಮುಂದಿಡಲಾಗುವುದು. ದೇಶದ ಎಲ್ಲಾ ರಾಜ್ಯಗಳಲ್ಲೂ ಪಕ್ಷದ ಮುಖವಾಣಿಯಲ್ಲಿ ಕಾಂಗ್ರೆಸ್ ತಪ್ಪುಗಳನ್ನು ಮುದ್ರಿಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಸೂಚನೆ ನೀಡಿದ್ದು, ರಾಜ್ಯದಲ್ಲೂ ಇದನ್ನು ಪಾಲಿಸಲು ನಿರ್ಧರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಅಮಿತ್ ಶಾ ಹೇಳಿಕೆ ಖಂಡಿಸಿ ಬಂದ್

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವಹೇಳನಕಾರಿ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ. ಕರ್ನಾಟಕದಲ್ಲೂ ಅಮಿತ್ ಶಾ ಹೇಳಿಕೆ ಖಂಡಿಸಿ ದಲಿತ ಸಂಘಟನೆಗಳು ವಿವಿಧ ಜಿಲ್ಲೆಗಳಲ್ಲಿ ಬಂದ್ ಆಚರಿಸಿವೆ. ಮಂಡ್ಯ, ಬೀದರ್, ಹುಬ್ಬಳ್ಳಿ, ಬಳ್ಳಾರಿ, ಕಲಬುರಗಿಯಲ್ಲಿ ಬಂದ್ ಆಚರಿಸಿ ಬಿಜೆಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿವೆ. ಈಗಾಗಲೇ ಅಮಿತ್ ಶಾ ಅವರು ತಮ್ಮ ಹೇಳಿಕೆ ತಿರುಚಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ಆದರೂ ಕಾಂಗ್ರೆಸ್ ನೇತೃತ್ವದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇದರಿಂದ ದಲಿತ ಸಮುದಾಯ ಪಕ್ಷದ ವಿರುದ್ಧವಾಗಿ ಆಕ್ರೋಶ ವ್ಯಕ್ತಪಡಿಸುತ್ತಿದೆ. ಇದೆಲ್ಲವನ್ನು ಸರಿಪಡಿಸಲು ಅಭಿಯಾನ ಅಗತ್ಯವಾಗಿದೆ ಎಂದು ಹೇಳಲಾಗಿದೆ.

Tags:    

Similar News