ಪೆನ್‌ಡ್ರೈವ್‌ ಪ್ರಕರಣದ ಸಂತ್ರಸ್ತೆ ಅಪಹರಣ | ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು

ಕೆ ಆರ್‌ ನಗರ ಮತ್ತು ಹೊಳೆನರಸೀಪುರಕ್ಕೆ ಕಾಲಿಡದಂತೆ ಹೈಕೋರ್ಟ್‌ ಷರತ್ತು ವಿಧಿಸಿದೆ.;

Update: 2024-06-07 08:24 GMT
ಭವಾನಿ ರೇವಣ್ಣ

ಬೆಂಗಳೂರು: ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಸಂತ್ರಸ್ತೆಯ ಅಪಹರಣ ಪ್ರಕರಣದಲ್ಲಿ ಎಸ್‌ಐಟಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿರುವ ಭವಾನಿ ರೇವಣ್ಣ ಅವರಿಗೆ ಕರ್ನಾಟಕ ಹೈಕೋರ್ಟ್ ಶುಕ್ರವಾರ (ಜೂ.7) ಷರತ್ತುಬದ್ಧ ನಿರೀಕ್ಷಣಾ ಜಾಮೀನು ನೀಡಿದೆ.

ಅಧೀನ ನ್ಯಾಯಾಲಯದಲ್ಲಿ ತಮ್ಮ ಜಾಮೀನು ಅರ್ಜಿ ತಿರಸ್ಕೃತವಾದ ಬೆನ್ನಲ್ಲೇ ಭವಾನಿ, ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿದ್ದರು. ಆ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರು, ಅರ್ಜಿದಾರರು ಶುಕ್ರವಾರ ಮಧ್ಯಾಹ್ನ 1 ಗಂಟೆಯ ಒಳಗೆ ತನಿಖಾಧಿಕಾರಿ (ಎಸ್‌ಐಟಿ) ಕಚೇರಿಗೆ ಹಾಜರಾಗಿ ತನಿಖೆಗೆ ಸಂಪೂರ್ಣವಾಗಿ ಸಹಕರಿಸಬೇಕು ಎಂದು ಹೇಳಿದರು.

ಹಾಗೇ, ಕೆ.ಆರ್‌ ನಗರ ತಾಲೂಕು ಮತ್ತು ಹಾಸನಕ್ಕೆ ಭವಾನಿ ಪ್ರವೇಶಿಸಿಬಾರದು ಎಂದು ಷರತ್ತು ವಿಧಿಸಿರುವ ನ್ಯಾಯಾಲಯ, ತನಿಖೆಗೆ ಸಂಪೂರ್ಣ ಸಹಕಾರ ನೀಡಬೇಕು ಎಂದು ಸೂಚನೆ ನೀಡಿದೆ. ಇನ್ನು ಎಸ್‌ಐಟಿ ಸಂಜೆ 5 ಗಂಟೆಯ ಒಳಗೇ ವಿಚಾರಣೆ ನಡೆಸಿ ಅವರನ್ನು ವಾಪಸ್‌ ಕಳಿಸಬೇಕು ಎಂದೂ ಎಂದ ನ್ಯಾಯಾಧೀಶರು ತಿಳಿಸಿದ್ದಾರೆ.

ಕಿಡ್ನಾಪ್ ಪ್ರಕರಣ ಸಂಬಂಧ ಎರಡು ಭಾರಿ ನೋಟಿಸ್ ಜಾರಿ ಮಾಡಲಾಗಿತ್ತು. ಆದರೂ ಅವರು ವಿಚಾರಣೆಗೆ ಹಾಜರಾಗಿರಲಿಲ್ಲ. ಇದೇ ವೇಳೆ ಭವಾನಿಯವರು ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ತಿರಸ್ಕರಿಸಿತ್ತು. ಇದರ ಬೆನ್ನಲ್ಲೆ ಅವರ ವಿರುದ್ಧ ಬಂಧನದ ವಾರೆಂಟ್ ಜಾರಿ ಮಾಡಲಾಗಿತ್ತು.

ಸಂಸದ ಪ್ರಜ್ವಲ್ ರೇವಣ್ಣ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯ ಮಗ, ತಮ್ಮ ಆ ಪೆನ್‌ಡ್ರೈವ್‌ನಲ್ಲಿ ತಮ್ಮ ತಾಯಿಯ ವಿಡಿಯೋ ಕೂಡ ಸೆರೆಯಾಗಿದೆ. ಸದ್ಯ ನಮ್ಮ ತಾಯಿ ಕಣ್ಮರೆ ಆಗಿದ್ದಾರೆ ಎಂದು ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಇದೇ ಪ್ರಕರಣ ವಿಚಾರವಾಗಿ ಎಚ್‌ಡಿ ರೇವಣ್ಣ ಪತ್ನಿ ಭವಾನಿ ರೇವಣ್ಣ ಅವರಿಗೆ ಎಸ್‌ಐಟಿ ವಿಚಾರಣೆಗೆ ಹಾಜರಾಗುವಂತೆ ನೊಟೀಸ್‌ ಜಾರಿ ಮಾಡಿತ್ತು.

ಭವಾನಿ ರೇವಣ್ಣ ಪ್ರತ್ಯಕ್ಷ

ಎಸ್‌ಐಟಿ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಭವಾನಿ ರೇವಣ್ಣ, ಕೋರ್ಟ್‌ ಷರತ್ತುಬದ್ಧ ಜಾಮೀನು ಮಂಜೂರು ಮಾಡುತ್ತಿದ್ದಂತೆ ಪ್ರತ್ಯಕ್ಷರಾಗಿದ್ದಾರೆ. ಮೈಸೂರು ಜಿಲ್ಲೆ ಕೆಆರ್‌ ನಗರ ಮಹಿಳೆಯ ಕಿಡ್ನಾಪ್‌ ಪ್ರಕರಣದ ಸಂಬಂಧ ಎಸ್‌ಐಟಿ ಎದುರು ವಕೀಲರ ಜೊತೆ ವಿಚಾರಣೆಗೆ ಭವಾನಿ ರೇವಣ್ಣ ಹಾಜರಾಗಿದ್ದು, ಬೆಂಗಳೂರಿನ ಸಿಐಡಿ ಕಚೇರಿಯಲ್ಲಿ ಎಸ್‌ಐಟಿ ಅಧಿಕಾರಿಗಳು ವಿಚಾರಣೆ ಆರಂಭಿಸಿದ್ದಾರೆ.

Tags:    

Similar News