ಭಾರತ್ ಅಕ್ಕಿ ಪೂರೈಕೆ ಬಂದ್: ಚುನಾವಣೆಗಷ್ಟೇ ಬಿಜೆಪಿ ಯೋಜನೆ ಸೀಮಿತ: ಸಿದ್ದರಾಮಯ್ಯ

ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಮಾತ್ರ ಭಾರತ್ ಅಕ್ಕಿ ಯೋಜನೆಯನ್ನು ಪರಿಚಯಿಸಿತ್ತು. ಈಗ ಲೋಕಸಭೆ ಚುನಾವಣೆ ಮುಕ್ತಾಯವಾಗಿದೆ. ಹೀಗಾಗಿ, ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ದೂರಿದ್ದಾರೆ.

Update: 2024-07-06 08:30 GMT
ಭಾರತ್‌ ಅಕ್ಕಿ

ʻಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಯ ದೃಷ್ಟಿಯಿಂದ ಮಾತ್ರ ಭಾರತ್ ಅಕ್ಕಿ ಎನ್ನುವ ಯೋಜನೆಯನ್ನು ಪರಿಚಯಿಸಿತ್ತು ಆದರೆ, ಈಗ ಲೋಕಸಭೆ ಚುನಾವಣೆ ಮುಕ್ತಾಯವಾಗಿದೆ. ಹೀಗಾಗಿ, ಅಕ್ಕಿ ನೀಡುವುದನ್ನು ನಿಲ್ಲಿಸಲಾಗಿದೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ದೂರಿದ್ದಾರೆ.

ಅಕ್ಕಿ ವಿಚಾರವಾಗಿ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರದ ನಡುವೆ ಮುಸುಕಿನ ಗುದ್ದಾಟ ಮುಂದುವರಿದಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ “ಅನ್ನಭಾಗ್ಯ ಯೋಜನೆ”ಯನ್ನು ಪ್ರಾರಂಭಿಸಿತ್ತು. ಈ ಯೋಜನೆಗೆ ಅಕ್ಕಿ ಪೂರೈಕೆ ಮಾಡುವುದಕ್ಕೆ ಕೇಂದ್ರ ಸರ್ಕಾರವು ತಾಂತ್ರಿಕ ಕಾರಣಗಳನ್ನು ನೀಡಿ, ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡಲು ಹಿಂದೇಟು ಹಾಕಿತ್ತು. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರವು ಕಡಿಮೆ ಬೆಲೆಗೆ ಭಾರತ್ ಅಕ್ಕಿ ನೀಡಲು ಪ್ರಾರಂಭಿಸಿತ್ತು. ಆದರೆ, ಜೂನ್ 1ರಿಂದ ಅಕ್ಕಿ ಪೂರೈಕೆ ಸ್ಥಗಿತಗೊಂಡಿದೆ.

ಈ ಸಂಬಂಧ ಮಾತನಾಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ʻರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಪ್ರಾರಂಭಿಸಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ದುರುದ್ದೇಶದಿಂದ ಕರ್ನಾಟಕಕ್ಕೆ ಅಕ್ಕಿ ಪೂರೈಕೆ ಮಾಡಿಲ್ಲ. ರಾಜ್ಯ ಸರ್ಕಾರವು ಫುಡ್ ಕಾರ್ಪೊರೇಷನ್ ನಿಗದಿ ಮಾಡಿರುವ ದರವನ್ನೇ ನೀಡುತ್ತೇವೆ ಎಂದು ಮನವಿ ಮಾಡಿದರೂ, ಅಕ್ಕಿ ಪೂರೈಕೆ ಮಾಡಿಲ್ಲ. ಭಾರತ್ ಬ್ರಾಂಡ್ ಅಕ್ಕಿ ನೀಡುವುದನ್ನೂ ಈಗ ನಿಲ್ಲಿಸಿದ್ದಾರೆ ಬಿಜೆಪಿಗೆ ಬಡವರ ಬಗ್ಗೆ ಕಾಳಜಿಯಿಲ್ಲ ಅವರಿಗೆ ಚುನಾವಣೆಯಷ್ಟೇ ಮುಖ್ಯ ಎಂದು ವಾಗ್ದಾಳಿ ನಡೆಸಿದ್ದಾರೆ.

ಏನಿದು ಭಾರತ್ ಬ್ರ್ಯಾಂಡ್ ಅಕ್ಕಿ

ಕೇಂದ್ರ ಸರ್ಕಾರವು ಲೋಕಸಭೆ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಉಳಿದಿರುವ ಸಂದರ್ಭದಲ್ಲಿ ಭಾರತ್ ಬ್ರ್ಯಾಂಡ್ ಅಕ್ಕಿ ಎನ್ನುವ ಯೋಜನೆಯನ್ನು ಪರಿಚಯಿಸಿತ್ತು. ಇದಕ್ಕೆ ಕರ್ನಾಟಕ ಸೇರಿದಂತೆ ದೇಶದ ವಿವಿಧ ರಾಜ್ಯಗಳಿಂದಲೂ ಉತ್ತಮ ಬೇಡಿಕೆ ಇತ್ತು. ಈ ಯೋಜನೆಯಡಿಯಲ್ಲಿ 29 ರೂಪಾಯಿ ಗೆ ಅಕ್ಕಿ ಹಾಗೂೂ 27.50 ರೂಪಾಯಿಗೆ ಗೋಧಿಹಿಟ್ಟು ಹಾಗೂ 60 ರೂಪಾಯಿಗೆ ಕಡ್ಲೆಬೇಳೆ ವಿತರಿಸಲಾಗುತ್ತಿತ್ತು. ಜನಸಾಮಾನ್ಯರಿಗೆ ಕಡಿಮೆ ಬೆಲೆಯಲ್ಲಿ ಗುಣಮಟ್ಟದ ದಿನಸಿ ಪೂರೈಕೆ ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು. ಇದೀಗ ಜೂನ್ 1ರಿಂದ ಈ ಯೋಜನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಜಗಜೀವನ್ ರಾಮ್ ಸ್ಮರಣೆ

ಡಾ.ಬಾಬು ಜಗಜೀವನ ರಾಮ್ ಅವರ ಪುಣ್ಯತಿಥಿ ಅಂಗವಾಗಿ ಶನಿವಾರ ಡಾ.ಬಾಬು ಜಗಜೀವನ ರಾಮ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಹಸಿರು ಕ್ರಾಂತಿಯ ಹರಿಕಾರ ಎಂದೇ ಹೆಸರಾಗಿರುವ ಮಾಜಿ ಉಪಪ್ರಧಾನಿ ಡಾ.ಬಾಬು ಜಗಜೀವನರಾಮ್ ಅವರು ದೇಶದ ಜನರಿಗೆ ಆಹಾರ ಭದ್ರತೆಯನ್ನು ಒದಗಿಸಿದ ಮಹಾನ್ ವ್ಯಕ್ತಿ ಎಂದರು.

ಸ್ವಾತಂತ್ರ್ಯ ದೊರೆತ ಸಂದರ್ಭದಲ್ಲಿ ದೇಶದಲ್ಲಿ ತೀವ್ರ ಆಹಾರದ ಕೊರತೆಯುಂಟಾಗಿ, ಬೇರೆ ದೇಶಗಳ ಮುಂದೆ ಕೈಚಾಚಬೇಕಾದ ಪರಿಸ್ಥಿತಿ ಇತ್ತು. ಹೊಸ ತಳಿಗಳ ಅಭಿವೃದ್ದಿ ಸೇರಿದಂತೆ ಹಲವು ಕ್ರಮಗಳ ಮೂಲಕ ಜಗಜೀವನರಾಮ್ ಅವರು ಆಹಾರ ಭದ್ರತೆಯನ್ನು ಒದಗಿಸಿದರು. ಜಗಜೀವನರಾಮ್ ಅವರು ರಕ್ಷಣಾ ಇಲಾಖೆ ಸೇರಿದಂತೆ ವಿವಿಧ ಇಲಾಖೆಯಲ್ಲಿ ಕಾರ್ಯನಿರ್ವಹಿಸಿದ್ದು, ದಕ್ಷ ಆಡಳಿತ ನೀಡಿದ್ದಾರೆ. ಕಾರ್ಮಿಕರ ಪರವಾಗಿ ಅನೇಕ ಕಾಯ್ದೆಗಳನ್ನು ರಚಿಸಿದ್ದಾರೆ. ಇನ್ನು  3ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಡಾ.ಬಾಬು ಜಗಜೀವನರಾಮ್ ಭವನವನ್ನು ಜುಲೈ 13ರಂದು ಲೋಕಾರ್ಪಣೆ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳಿಗೆ ವಿಜ್ಞಾನ, ಕೌಶಲ್ಯ ಅಭಿವೃದ್ಧಿ ತರಬೇತಿಯನ್ನು ಸಹ ಈ ಭವನದಲ್ಲಿ ಒದಗಿಸಲಾಗುವುದು ಎಂದು ಹೇಳಿದರು.

Tags:    

Similar News