ಬೆಂಗಳೂರಿಗೆ ಜುಲೈವರೆಗೂ ನೀರಿನ ಅಭಾವವಿಲ್ಲ: ನೀರು ಸರಬರಾಜು ಮಂಡಳಿ

ಕೇವಲ ನಗರಕ್ಕೆ 1.54 ಟಿಎಂಸಿ ಅಡಿ ನೀರು ಒಂದು ತಿಂಗಳಿಗೆ ಬೇಕಾಗುತ್ತದೆ. ನಗರ ಮತ್ತು ಹೊರವಲಯಕ್ಕೆ ಜುಲೈವರೆಗೆ 17 ಟಿಎಂಸಿ ಅಡಿ ನೀರು ಬೇಕು, ಅಣೆ ಕಟ್ಟುಗಳಲ್ಲಿ 34 ಟಿಎಂಸಿ ನೀರಿದೆ;

Update: 2024-03-10 09:15 GMT
ಬೆಂಗಳೂರಿನ ನಗರ ಪ್ರದೇಶದಲ್ಲಿ ನೀರು ಸರಬರಾಜು ಮಾಡುತ್ತಿರುವ ಖಾಸಗಿ ಟ್ಯಾಂಕರ್‌ಗಳು | ಫೋಟೋ: ದಿ ಫೆಡೆರಲ್‌ ಕರ್ನಾಟಕ

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಬೇಸಿಗೆಯಲ್ಲಿ ನೀರಿಗೆ ಕೊರತೆ ಇರುತ್ತದೆ ಎಂಬ ಆತಂಕವನ್ನು ಅಧಿಕೃತ ಮೂಲಗಳು ತಳ್ಳಿ ಹಾಕಿದೆ.

ಜುಲೈ ತಿಂಗಳವರೆಗೆ ಬೆಂಗಳೂರು ಪರಿಸ್ಥಿತಿ ನಿಭಾಯಿಸುವಷ್ಟು ನೀರು ನಮ್ಮಲ್ಲಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ (BWSSB) ಅಧ್ಯಕ್ಷ ರಾಮಪ್ರಸಾತ್ ಮನೋಹರ್ ಅವರು ತಿಳಿಸಿದ್ದಾರೆ.

ಮುಂದಿನ ದಿನಗಳಲ್ಲಿ ಬೆಂಗಳೂರು ಕುಡಿಯುವ ನೀರು ಬಿಕ್ಕಟ್ಟು ಎದುರಿಸುವ ಸಾಧ್ಯತೆ ಇದೆ ಎಂಬ ವರದಿಗಳ ಹಿನ್ನೆಲೆಯಲ್ಲಿ ಸ್ಪಷ್ಟನೆ ನೀಡಿದ ಅವರು, ಬೆಂಗಳೂರು ನಗರ ಮತ್ತು ಹೊರವಲಯದಲ್ಲಿ ಜುಲೈ ತಿಂಗಳವರೆಗೆ ಸರಬರಾಜು ಮಾಡಲು ಸಾಕಷ್ಟು ನೀರು ನಮ್ಮಲ್ಲಿದೆ. ಈ ಬಗ್ಗೆ ಆತಂಕ ಬೇಡ ಎಂದು ಹೇಳಿದರು.

ಬೆಂಗಳೂರು ನೀರು ಸರಬರಾಜು ಮಂಡಳಿಯು ಪ್ರತಿದಿನ 1,470 ಎಂಎಲ್ ಡಿ ನೀರನ್ನೂ ಪೂರೈಸುತ್ತಿದೆ. ನಗರ ಮತ್ತು ಹೊರವಲಯಕ್ಕೆ 2,100 ಎಂಎಲ್‌ಡಿ ನೀರಿನ ಅಗತ್ಯವಿದ್ದು, ಮೇ 15 ರಂದು ಕಾವೇರಿ ಐದನೇ ಹಂತದ ಯೋಜನೆಗೆ ಚಾಲನೆ ನೀಡಿದ ನಂತರ ಬೆಂಗಳೂರಿಗೆ ಹೆಚ್ಚುವರಿಯಾಗಿ 775 ಎಂಎಲ್‌ಡಿ ನೀರು ಸಿಗಲಿದೆ ನಗರದ ಹೊರವಲಯದಲ್ಲಿ ಬೋರ್‌ವೆಲ್‌ಗಳನ್ನು ಜನರು ಅವಲಂಬಿಸಿದ್ದಾರೆ. ಹಲವು ಕೆರೆಗಳು ಒಣಗುವ ಹಂತದಲ್ಲಿದ್ದರೂ, ಕಾವೇರಿ ಜಲಾನಯನ ಪ್ರದೇಶದ ನಾಲ್ಕು ಅಣೆಕಟ್ಟುಗಳಲ್ಲಿ ನಗರದ ಅಗತ್ಯ ಪೂರೈಸಲು ಸಾಕಷ್ಟು ನೀರಿದೆ ಎಂದು ಅವರು ತಿಳಿಸಿದರು.

ಅಣೆಕಟ್ಟುಗಳಲ್ಲಿ ಈಗ 34 ಟಿಎಂಸಿ ಅಡಿ ನೀರಿದೆ. ಕೇವಲ ನಗರಕ್ಕೆ 1.54 ಟಿಎಂಸಿ ಅಡಿ ನೀರು ಒಂದು ತಿಂಗಳಿಗೆ ಬೇಕಾಗುತ್ತದೆ. ನಗರ ಮತ್ತು ಹೊರವಲಯಕ್ಕೆ ಜುಲೈವರೆಗೆ 17 ಟಿಎಂಸಿ ಅಡಿ ನೀರು ಬೇಕು, ಅಣೆ ಕಟ್ಟುಗಳಲ್ಲಿ 34 ಟಿಎಂಸಿ ನೀರಿದೆ ಎಂದು ಮಾಹಿತಿ ನೀಡಿದರು.

ಅದಾಗ್ಯೂ, ನಗರ ಹೊರವಲಯದ ಜನರಿಗೆ ಸಂಸ್ಕರಿಸಿದ ನೀರನ್ನು ಮರು ಉದ್ದೇಶಗಳಿಗೆ ಬಳಸುವಂತೆ ಮಂಡಳಿಯು ಮನವಿ ಮಾಡಿದೆ.

Tags:    

Similar News