ಬೆಂಗಳೂರಿನ ಚಿಟ್ ಫಂಡ್ ವಂಚನೆ: 40 ರೂ.ಕೋಟಿ ವಂಚಿಸಿದ ಕೇರಳದ ದಂಪತಿಗೆ ನಿರೀಕ್ಷಣಾ ಜಾಮೀನು

ಜುಲೈ 15ರಂದು ದಂಪತಿಗಳು ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈ 18ರಂದು ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು.;

Update: 2025-08-22 07:12 GMT

ಚಿಟ್‌ಫಂಡ್‌ ಮೂಲಕ ಆನೇಕ ಜನರಿಗೆ ವಂಚಿಸಿದ ದಂಪತಿ 

ಬೆಂಗಳೂರಿನಲ್ಲಿ ಚಿಟ್ ಫಂಡ್ ಮತ್ತು ಹಣಕಾಸು ಸಂಸ್ಥೆಯನ್ನು ನಡೆಸಿ ಸುಮಾರು 600 ಹೂಡಿಕೆದಾರರಿಗೆ 40 ಕೋಟಿ ರೂ.ಗೂ ಹೆಚ್ಚು ವಂಚಿಸಿದ ಆರೋಪ ಎದುರಿಸುತ್ತಿರುವ ಕೇರಳ ಮೂಲದ ದಂಪತಿಗೆ ಬೆಂಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಲಯ ಗುರುವಾರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಆರೋಪಿಗಳಾದ 57 ವರ್ಷದ ಟಾಮಿ ಎ. ವರ್ಗೀಸ್ ಮತ್ತು ಅವರ ಪತ್ನಿ 52 ವರ್ಷದ ಶಿನಿ ಟಾಮಿ ಅವರು 2005ರಿಂದ ಬೆಂಗಳೂರಿನಲ್ಲಿ 'ಎ & ಎ ಚಿಟ್ ಫಂಡ್ಸ್ ಮತ್ತು ಹಣಕಾಸು' ಸಂಸ್ಥೆಯನ್ನು ನಡೆಸುತ್ತಿದ್ದರು. ಹೂಡಿಕೆದಾರರಿಂದ ಕೋಟ್ಯಂತರ ರೂ. ಹಣ ಸಂಗ್ರಹಿಸಿ ನಂತರ ಕೀನ್ಯಾಗೆ ಪಲಾಯನ ಮಾಡಿರುವ ಆರೋಪ ಇವರ ಮೇಲಿದೆ.

ಜುಲೈ 15ರಂದು ದಂಪತಿಗಳು ತಮ್ಮ ಮೇಲಿನ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಜುಲೈ 18ರಂದು ಜಾಮೀನು ಕೋರಿ ಸೆಷನ್ಸ್ ನ್ಯಾಯಾಲಯದ ಮೊರೆ ಹೋಗಿದ್ದರು. ಎರಡೂ ಕಡೆಯ ವಾದ ಆಳಿಸಿದ ಬೆಂಗಳೂರಿನ ಪ್ರಧಾನ ಸೆಷನ್ಸ್ ನ್ಯಾಯಾಧೀಶರ ನ್ಯಾಯಾಲಯವು ದಂಪತಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ವಿವರವಾದ ಆದೇಶ ಶೀಘ್ರದಲ್ಲೇ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಈ ಪ್ರಕರಣದಲ್ಲಿ ರಾಜ್ಯ ಪೊಲೀಸರ ಅಪರಾಧ ತನಿಖಾ ಇಲಾಖೆ (ಸಿಐಡಿ) ನಡೆಸುತ್ತಿರುವ ತನಿಖೆಗೆ ತಡೆ ನೀಡಬೇಕೆಂದು ಕೋರಿ ದಂಪತಿಗಳು ಹೈಕೋರ್ಟ್‌ನಲ್ಲಿ ಸಲ್ಲಿಸಿರುವ ಅರ್ಜಿಯು ಮುಂದಿನ ವಾರ ವಿಚಾರಣೆಗೆ ನಡೆಯಲಿದೆ. 

ಏನಿದು ಪ್ರಕರಣ

ಬೆಂಗಳೂರಿನಲ್ಲಿ ಚಿಟ್ ಫಂಡ್ ಕಂಪನಿ ನಡೆಸುತ್ತಿದ್ದ ಕೇರಳ ಮೂಲದ ದಂಪತಿಗಳು 1,300ಕ್ಕೂ ಹೆಚ್ಚು ಹೂಡಿಕೆದಾರರಿಗೆ ಬರೋಬ್ಬರಿ 50 ಕೋಟಿ ರೂ.ಗೂ ಹೆಚ್ಚು ವಂಚನೆ ಮಾಡಿ ಪರಾರಿಯಾಗಿದ್ದಾರೆ. ಈ ವಂಚನೆ ಪ್ರಕರಣದ ಕುರಿತು ಹೂಡಿಕೆದಾರರಲ್ಲಿ ಒಬ್ಬರಾದ ಪಿ.ಟಿ. ಸವಿಯೊ ಅವರು ಜುಲೈ 5ರಂದು ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ತಾವು 70 ಲಕ್ಷ ರೂ. ಕಳೆದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದರು.

ದೂರಿನ ಆಧಾರದ ಮೇಲೆ, ಬೆಂಗಳೂರಿನ ರಾಮಮೂರ್ತಿ ನಗರದ ಎ & ಎ ಚಿಟ್ ಫಂಡ್ಸ್ ಮತ್ತು ಫೈನಾನ್ಸ್‌ನ ಮಾಲೀಕರಾದ ಟಾಮಿ ಎ ಮತ್ತು ಅವರ ಪತ್ನಿ ಶಿನಿ ಟಾಮಿ ವಿರುದ್ಧ ಚಿಟ್ ಫಂಡ್ಸ್ ಕಾಯ್ದೆ, ಅನಿಯಂತ್ರಿತ ಠೇವಣಿ ಯೋಜನೆಗಳ ನಿಷೇಧ ಸುಗ್ರೀವಾಜ್ಞೆ 2019 ರ ಸಂಬಂಧಿತ ಸೆಕ್ಷನ್ ಮತ್ತು ಭಾರತೀಯ ನ್ಯಾಯ ಸಂಹಿತಾದ ಸೆಕ್ಷನ್ 318(ವಂಚನೆ), 316 (ಕ್ರಿಮಿನಲ್ ನಂಬಿಕೆ ಉಲ್ಲಂಘನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆದರೆ ವಂಚನೆ ಪ್ರಕರಣ ದಾಖಲಾಗುವ ಎರಡು ದಿನಗಳ ಮೊದಲು ಜುಲೈ 3 ರಂದು ದಂಪತಿಗಳು ತಮ್ಮ ಎಲ್ಲಾ ಆಸ್ತಿ, ಅಪಾರ್ಟ್‌ಮೆಂಟ್ ಮತ್ತು ಕಾರನ್ನು ಅರ್ಧದಷ್ಟು ಬೆಲೆಗೆ ಮಾರಾಟ ಮಾಡಿ ದಂಪತಿಗಳು ಕೀನ್ಯಾಕ್ಕೆ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದರು. 

ಕಳೆದ 25 ವರ್ಷಗಳಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಕೇರಳ ಮೂಲದ ಟಾಮಿ ದಂಪತಿ, 2005ರಿಂದ ರಾಮಮೂರ್ತಿ ನಗರದಲ್ಲಿ ಈ ಚಿಟ್ ಫಂಡ್ ಕಂಪನಿ ನಡೆಸುತ್ತಿದ್ದರು. ಹೆಚ್ಚಿನ ಬಡ್ಡಿ ಆಮಿಷವೊಡ್ಡಿ ಹೂಡಿಕೆದಾರರಿಂದ ಹಣ ಸಂಗ್ರಹಿಸುತ್ತಿದ್ದರು. ವಾರ್ಷಿಕ ಶೇ. 15ರಿಂದ 20ರಷ್ಟು ಬಡ್ಡಿ ನೀಡುವುದಾಗಿ ಹೂಡಿಕೆದಾರರಿಗೆ ಭರವಸೆ ನೀಡಿದ್ದರು ಎಂದು ತಿಳಿದುಬಂದಿದೆ.

Tags:    

Similar News