ಬೇಲೆಕೇರಿ ಪ್ರಕರಣ | ಶಾಸಕ ಸತೀಶ್‌ ಸೈಲ್‌ಗೆ ಏಳು ವರ್ಷ ಶಿಕ್ಷೆ; ಶಾಸಕ ಸ್ಥಾನದಿಂದ ಅನರ್ಹ ಸಾಧ್ಯತೆ

ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಕಠಿಣ ಜೈಲು ಶಿಕ್ಷೆ ಎಂದು ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಶಿಕ್ಷೆ ಪ್ರಕಟಿಸಿದ್ದಾರೆ. ಅಪರಾಧಿಗೆ ಗರಿಷ್ಠ ಶಿಕ್ಷೆಯ ಪ್ರಮಾಣ ಅನ್ವಯವಾಗಲಿದೆ.

Update: 2024-10-26 12:00 GMT

ಬೇಲೆಕೇರಿ ಅದಿರು ನಾಪತ್ತೆ ಸಂಬಂಧ ಆರೂ ಪ್ರಕರಣಗಳಲ್ಲಿ ಕಾರವಾರ –ಅಂಕೋಲಾದ ಕಾಂಗ್ರೆಸ್ ಶಾಸಕ ಸತೀಶ್‌ ಸೈಲ್‌ ಅವರಿಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 7 ವರ್ಷಗಳ ಕಠಿಣ ಜೈಲು ಶಿಕ್ಷೆ ಮತ್ತು ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.

ಒಳಸಂಚಿಗೆ 5 ವರ್ಷ, ವಂಚನೆಗೆ 7 ವರ್ಷ, ಕಳ್ಳತನಕ್ಕೆ 3 ವರ್ಷ ಜೈಲು ಶಿಕ್ಷೆ ಪ್ರಕಟಿಸಿದೆ. ಅಪರಾಧಿಗೆ ಗರಿಷ್ಠ ಶಿಕ್ಷೆಯ ಪ್ರಮಾಣ ಅನ್ವಯವಾಗಲಿದೆ. ಅ.24 ರಂದು ಅದಿರು ನಾಪತ್ತೆ ಪ್ರಕರಣದ ತೀರ್ಪು ಪ್ರಕಟಿಸಿದ್ದ ನ್ಯಾಯಾಧೀಶ ಸಂತೋಷ್‌ ಗಜಾನನ ಭಟ್‌ ಅವರು ಸತೀಶ್‌ ಸೈಲ್‌ ಅವರನ್ನು ದೋಷಿ ಎಂದು ನಿರ್ಧರಿಸಿ, ಶಿಕ್ಷೆ ಪ್ರಮಾಣ ಕಾಯ್ದಿರಿಸಿದ್ದರು.

ಶುಕ್ರವಾರ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದ ಸತೀಶ್ ಸೈಲ್‌ ಪರ ವಕೀಲರು ಆರೋಗ್ಯದ ಕಾರಣ ನೀಡಿ ಶಿಕ್ಷೆಯ ಪ್ರಮಾಣ ಕಡಿಮೆ ಮಾಡುವಂತೆ ಮನವಿ ಮಾಡಿದ್ದರು. ಶನಿವಾರ ಪ್ರತಿವಾದ ಆಲಿಸಿದ ಬಳಿಕ ನ್ಯಾಯಾಲಯ ಶಿಕ್ಷೆಯ ಪ್ರಮಾಣ ಘೋಷಿಸಿದೆ.

ಶಾಸಕ ಸ್ಥಾನಕ್ಕೆ ಕುತ್ತು

ಜನರಿಂದ ಚುನಾಯಿತನಾದ ಯಾವುದೇ ಜನಪ್ರತಿನಿಧಿ ಯಾವುದೇ ಅಪರಾಧ ಪ್ರಕರಣಗಳಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಪ್ರಮಾಣದ ಶಿಕ್ಷೆಗೆ ಗುರಿಯಾದರೆ ಕಾನೂನು ರೀತಿಯಲ್ಲಿ ಆತನ ಚುನಾಯಿತ ಸ್ಥಾನಮಾನ ವಜಾ ಆಗುತ್ತದೆ.  

ಈ ಪ್ರಕರಣದಲ್ಲಿ ಸೈಲ್‌ ಅವರಿಗೆ ಏಳು ವರ್ಷ ಜೈಲು ಶಿಕ್ಷೆ ಪ್ರಕಟವಾಗಿರುವ ಹಿನ್ನೆಲೆಯಲ್ಲಿ ಶಾಸಕ ಸ್ಥಾನದಿಂದ ಅವರು ಅನರ್ಹರಾಗಲಿದ್ದಾರೆ. ಆದರೆ, ಒಂದು ವೇಳೆ ಸತೀಶ್‌ ಸೈಲ್‌ ಹೈಕೋರ್ಟ್‌ ಮೊರೆ ಹೋಗಿ, ಕೋರ್ಟ್‌ ಶಿಕ್ಷೆಗೆ ತಡೆಯಾಜ್ಞೆ ನೀಡಿದಲ್ಲಿ ಮಾತ್ರ ಅವರ ಶಾಸಕ ಸ್ಥಾನ ಅಬಾಧಿತವಾಗಲಿದೆ.

ಇನ್ನು ಬೇಲೆಕೇರಿ ಅದಿರು ನಾಪತ್ತೆಯ ಒಟ್ಟು ಆರು ಪ್ರಕರಣಗಳಲ್ಲಿ ಈವರೆಗೆ 44 ಕೋಟಿ ರೂ. ದಂಡ ವಿಧಿಸಲಾಗಿದೆ. ಈಗಾಗಲೇ ಅಪರಾಧಿಗಳು ಕಳೆದಿರುವ ಶಿಕ್ಷೆ ಪ್ರಮಾಣ ಹೊರತುಪಡಿಸಿ ಉಳಿದ ಶಿಕ್ಷೆ ಅನುಭವಿಸಬೇಕಿದೆ.

ಶಾಸಕ ಸತೀಶ್ ಸೈಲ್ ಜತೆಗೆ ಮಹೇಶ್ ಬಿಳಿಯೆ, ಖಾರದಪುಡಿ ಮಹೇಶ್, ಮಲ್ಲಿಕಾರ್ಜುನ ಶಿಪ್ಪಿಂಗ್ಗೂ ನ್ಯಾಯಾಲಯ ಜೈಲು ಶಿಕ್ಷೆ ವಿಧಿಸಿದೆ.

ಏನಿದು ಪ್ರಕರಣ?

ಬಳ್ಳಾರಿ, ಹೊಸಪೇಟೆ, ಸಂಡೂರು, ಚಿತ್ರದುರ್ಗದ ಅರಣ್ಯ ಪ್ರದೇಶಗಳಿಂದ ಅಕ್ರಮವಾಗಿ ಕಬ್ಬಿಣದ ಅದಿರು ವಿದೇಶಕ್ಕೆ ರವಾನಿಸಲು ಬೇಲೆಕೇರಿ ಬಂದರಿನಲ್ಲಿ ಸಂಗ್ರಹಿಸಲಾಗಿತ್ತು. 2010ರ ಮಾ.20 ರಂದು ಅರಣ್ಯ ಇಲಾಖೆ 350 ಕೋಟಿ ರೂ. ಮೌಲ್ಯದ ಬರೋಬ್ಬರಿ 8.5 ಲಕ್ಷ ಮೆಟ್ರಿಕ್ ಟನ್ ಅದಿರು ಮುಟ್ಟುಗೋಲು ಹಾಕಿಕೊಂಡಿತ್ತು.

ಅದಿರನ್ನು ನೋಡಿಕೊಳ್ಳುವಂತೆ ಬಂದರು ಇಲಾಖೆಗೆ ಅರಣ್ಯ ಇಲಾಖೆ ಸೂಚನೆ ನೀಡಿತ್ತು. ಕೆಲ ತಿಂಗಳ ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಬಂದು ಪರಿಶೀಲಿಸಿದಾಗ 2 ಲಕ್ಷ ಮೆಟ್ರಿಕ್ ಟನ್ ಅದಿರು ಮಾತ್ರ ಅಲ್ಲಿ ಇತ್ತು. 250 ಕೋಟಿ ರೂ. ಅದಿರು ನಾಪತ್ತೆಯಾಗಿರುವ ಬಗ್ಗೆ ಬಂದರು ಅಧಿಕಾರಿ, ಅದಿರು ಸಾಗಣೆ ಕಂಪನಿಗಳ ವಿರುದ್ಧ ಅರಣ್ಯ ಇಲಾಖೆ ದೂರು ನೀಡಿತ್ತು.

ಈ ಬಗ್ಗೆ ತನಿಖೆ ನಡೆಸಿದ್ದ ನಿವೃತ್ತ ನ್ಯಾಯಮೂರ್ತಿ ಸಂತೋಷ್‌ ಹೆಗಡೆ ಅವರು, ಅಕ್ರಮದ ಬಗ್ಗೆ ವರದಿ ನೀಡಿದ್ದರು. ಸಿಬಿಐ ಕೂಡ ಈ ಸಂಬಂಧ ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿತ್ತು.

ಸತೀಶ್ ಸೈಲ್ ಮಾಲಿಕತ್ವದ ಕಂಪನಿ ಸುಮಾರು 7.23 ಲಕ್ಷ ಮೆಟ್ರಿಕ್ ಟನ್ ಅದಿರನ್ನು ಬೇಲೆಕೇರಿ ಮೂಲಕ ವಿದೇಶಕ್ಕೆ ರಫ್ತು ಮಾಡಿರುವುದು ತನಿಖೆಯಲ್ಲಿ ಸಾಬೀತಾಗಿತ್ತು.

Tags:    

Similar News