Belagavi Suicide Case | ತಹಶೀಲ್ದಾರ್ ಕಚೇರಿಯಲ್ಲೇ ಸಿಬ್ಬಂದಿ ಆತ್ಮಹತ್ಯೆ; ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ವಿರುದ್ಧ ಆರೋಪ
ವರ್ಗಾವಣೆಗಾಗಿ ಲಂಚ ನೀಡಿ ವಂಚನೆಗೆ ಒಳಗಾಗಿರುವುದೂ ಘಟನೆ ಕಾರಣವಾಗಿದೆ ಎನ್ನಲಾಗಿದೆ. ಈ ಘಟನೆಯಿಂದ ಆಳುವ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವಾಗಿದ್ದು, ಉಪ ಚುನಾವಣೆ ವೇಳೆಯಲ್ಲಿ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.;
ಬೆಳಗಾವಿ ತಾಲೂಕು ತಹಶೀಲ್ದಾರರ ಕಚೇರಿಯಲ್ಲಿಯೇ ದ್ವಿತೀಯ ದರ್ಜೆ ಗುಮಾಸ್ತ (ಎಸ್‌ಡಿಎ)ರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ತಮ್ಮ ಸಾವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ ಹಾಗೂ ತಹಶೀಲ್ದಾರ ನೇರ ಕಾರಣ ಎಂದು ಸಾವಿಗೆ ಮುನ್ನ ವಾಟ್ಸ್ ಆಪ್ ಗ್ರೂಪ್‌ನಲ್ಲಿ ಸಂದೇಶ ಕಳಿಸುವ ಮೂಲಕ ಗಂಭೀರ ಆರೋಪ ಮಾಡಿದ್ದಾರೆ.
ಬೆಳಗಾವಿ ತಹಶೀಲ್ದಾರ್ ಕಚೇರಿಯ ಎಸ್‌ಡಿಸಿ ರುದ್ರಣ್ಣ ಯಡವಣ್ಣವರ್ (35) ಕಚೇರಿಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಘಟನೆ ಮಂಗಳವಾರ ಬೆಳಿಗ್ಗೆ ಬೆಳಕಿಗೆ ಬಂದಿದೆ. ವರ್ಗಾವಣೆಗಾಗಿ ಲಂಚ ನೀಡಿ ವಂಚನೆಗೆ ಒಳಗಾಗಿರುವುದೂ ಘಟನೆಗೆ ಕಾರಣ ಎನ್ನಲಾಗಿದೆ. ಈ ಘಟನೆಯಿಂದ ಆಳುವ ಕಾಂಗ್ರೆಸ್ ಸರ್ಕಾರಕ್ಕೆ ಮುಜುಗರವಾಗಿದ್ದು, ಉಪ ಚುನಾವಣಾ ವೇಳೆಯಲ್ಲಿ ಬಿಜೆಪಿಗೆ ಹೊಸ ಅಸ್ತ್ರ ಸಿಕ್ಕಿದಂತಾಗಿದೆ.
ಬೆಳಗಾವಿ ತಹಶೀಲ್ದಾರ್ ಕಚೇರಿ ಉದ್ಯೋಗಿಯೊಬ್ಬರು ನೇರವಾಗಿ ಬೆಳಗಾವಿಯ ಪ್ರಭಾವಿ ಸಚಿವೆಯಾಗಿರುವ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಪಿಎ ಸೋಮು ಮತ್ತು ತಹಶೀಲ್ದಾರ್ ಬಸವರಾಜ ನಾಗರಾಳ ಹಾಗೂ ಅಶೋಕ ಕಬ್ಬಲಿಗೇರ ಎನ್ನುವವರು ನೇರ ಕಾರಣ ಎಂದು ಆರೋಪಿಸಿ ವಾಟ್ಸಪ್ ಗ್ರೂಪಿನಲ್ಲಿ ಸಂದೇಶ ಹಾಕಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ರುದ್ರಣ್ಣ ಯಡಣ್ಣವರ್ ಅವರು ಮಂಗಳವಾರ ಬೆಳಿಗ್ಗೆ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದ್ದು, ಕಚೇರಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕರ್ತವ್ಯಕ್ಕೆ ಹಾಜರಾದ ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ಕಳೆದ ಮೇ ತಿಂಗಳಲ್ಲಿ ಮಹರ್ಷಿ ವಾಲ್ಮೀಕಿ ನಿಗಮದ ಅಧಿಕಾರಿ ಚಂದ್ರಶೇಖರನ್ (48) ನಿಗಮದ ಮೇಲಧಿಕಾರಿಗಳ ಮೇಲೆ ಮತ್ತು ಸಚಿವ ಬಿ. ನಾಗೇಂದ್ರ ಅವರ ಸಚಿವಾಲಯದ ಮೇಲೆ ಭ್ರಷ್ಟಾಚಾರ ಆರೋಪ ಹೊರಿಸಿ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ವಿರೋಧ ಪಕ್ಷಗಳ ಒತ್ತಡ ಮತ್ತು ಪೊಲೀಸ್ ತನಿಖೆ ಹಾಗೂ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣಗಳ ಹಿನ್ನೆಲೆಯಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಬಳಿಕ ಅವರ ಬಂಧನವೂ ಆಗಿತ್ತು.
ವಾಲ್ಮೀಕಿ ನಿಗಮ ಹಗರಣ ಬೆಳಕಿಗೆ ಬಂದ ಬಳಿಕ ಭಾರೀ ಮುಜುಗರಕ್ಕೆ ಒಳಗಾಗಿದ್ದ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ ಇದೀಗ ಈ ಬೆಳಗಾವಿ ಗುಮಾಸ್ತರ ಆತ್ಮಹತ್ಯೆ ಪ್ರಕರಣ ಮತ್ತೊಮ್ಮೆ ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳಿವೆ.
ಆತ್ಮಹತ್ಯೆಗೆ ಕಾರಣ
ʼನನ್ನ ಸಾವಿಗೆ ತಹಶೀಲ್ದಾರ ಬಸವರಾಜ ನಾಗರಾಳ ಹಾಗೂ ಸೋಮು, ಅಶೋಕ ಕಬ್ಬಲಿಗೇರ ಅವರೇ ನೇರ ಕಾರಣ. ನಮ್ಮ ಕಚೇರಿಯಲ್ಲಿ ತುಂಬ ಅನ್ಯಾಯ ನಡೆಯುತ್ತಿದೆ. ದಯವಿಟ್ಟು ಎಲ್ಲರೂ ಒಟ್ಟಾಗಿ ಹೋರಾಡಿ' ಎಂದು ಸೋಮವಾರ ಸಂಜೆ ಸಾಮಾಜಿಕ ಜಾಲತಾಣದಲ್ಲಿ ಮೆಸೇಜ್ ಪೋಸ್ಟ್ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ರುದ್ರಣ್ಣ ಅವರ ಪತ್ನಿ ಗರಿಜಾ ಗ್ರಾಮ ಲೆಕ್ಕಾಧಿಕಾರಿಯಾಗಿ ಅದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರುದ್ರಣ್ಣ ಕಳೆದ ಐದಾರು ವರ್ಷಗಳಿಂದ ಇದೇ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇತ್ತೀಚೆಗೆ ಅವರನ್ನು ಸವದತ್ತಿ ಎಲ್ಲಮ್ಮ ಅಭಿವೃದ್ಧಿ ಪ್ರಾಧಿಕಾರ ಕಚೇರಿಗೆ ವರ್ಗಾವಣೆ ಮಾಡಲಾಗಿದ್ದು, ವರ್ಗಾವಣೆ ಪ್ರತಿಯನ್ನೂ ತನ್ನ ʼಆತ್ಮಹತ್ಯೆʼ ಸಂದೇಶದ ಜತೆ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.
ಈ ನಡುವೆ, ರುದ್ರಣ್ಣ ಅವರ ತಾಯಿ ಮಲ್ಲವ್ವ ಅವರು ಮಾಧ್ಯಮಗಳಿಗೆ ಮಾತನಾಡಿ, "ಸೋಮವಾರ ರಾತ್ರಿ ಊಟ ಮಾಡುತ್ತಿದ್ದ ವೇಳೆ ಯಾರದರೋ ಫೋನ್ ಬಂತೆಂದು ಅರ್ಧಕ್ಕೇ ಊಟ ಬಿಟ್ಟು ಎದ್ದು ಹೋದ. ಹೋಗುವ ಮುನ್ನ ಕೇಳಿದರೂ ಯಾವುದೇ ವಿವರ ನೀಡಿಲ್ಲ. ರಾತ್ರಿ ಮಲಗಿದ್ದ, ಆದರೆ ಬೆಳಿಗ್ಗೆ ಯಾವ ಸಮಯದಲ್ಲಿ ಎದ್ದು ನೇರವಾಗಿ ಕಚೇರಿಗೆ ತೆರಳಿದ್ದಾನೆ ಎನ್ನುವುದು ಗೊತ್ತಿಲ್ಲ," ಎಂದು ಹೇಳಿದ್ದಾರೆ. "ವಾಚ್, ಮೊಬೈಲ್, ಬೈಕ್‌ನ ಹೆಲ್ಮೆಟ್ ಮನೆಯಲ್ಲೇ ಬಿಟ್ಟು ಹೋಗಿದ್ದಾರೆ. ವಾಕಿಂಗ್ ಹೋಗಿರಬಹುದು ಎಂದು ಮನೆಯವರು ಅಂದುಕೊಂಡಿದ್ದೆವು," ಎಂದು ಹೇಳಿದ್ದಾರೆ.
ವರ್ಗಾವಣೆಗೆಂದು ಎರಡು ತಿಂಗಳ ಹಿಂದೆ ಎರಡು ಲಕ್ಷ ರೂಪಾಯಿಯನ್ನು ಮನೆಯಿಂದ ತೆಗೆದುಕೊಂಡು ಹೋಗಿದ್ದ. ಬೆಳಗಾವಿ ತಹಶೀಲ್ದಾರ್ ಕಚೇರಿಗೆ ಮರು ವರ್ಗಾವಣೆ ಮಾಡಿಸಿಕೊಳ್ಳುವುದಾಗಿಯೂ ಹೇಳಿದ್ದರು. ಯಾರಿಗೆ ಹಣ ನೀಡಿದ್ದಾರೆ ಎಂದು ಗೊತ್ತಿಲ್ಲ ಎಂದು ಮನೆಯವರು ಹೇಳಿದ್ದಾರೆ. ಈ ಬಗ್ಗೆ ಕೂಡ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಬಿಜೆಪಿ ಆರೋಪ
ಈ ಘಟನೆಯನ್ನು ಬಿಜೆಪಿ ಖಂಡಿಸಿದ್ದು, ಕಾಂಗ್ರೆಸ್ ಸರ್ಕಾರದ ʼಸಾವು ಗ್ಯಾರಂಟಿ ಯೋಜನೆʼ ಮುಂದುವರಿದಿದೆ ಎಂದು ಟೀಕಿಸಿದೆ.
ಬಿಜೆಪಿಯ ಮಾಜಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ "ಈ ಸಾವು ನ್ಯಾಯವೇ? ಕಾಂಗ್ರೆಸ್ ಸರ್ಕಾರದ ಅಘೋಷಿತ "ಸಾವು ಗ್ಯಾರೆಂಟಿ" ಯೋಜನೆ. ರೈತರು, ಕಾರ್ಮಿಕರು, ಸರ್ಕಾರಿ ಅಧಿಕಾರಿಗಳಿಗೆ ಈ ಸರ್ಕಾರದ ಕೊಡುಗೆ "ಸಾವೇ ಗ್ಯಾರಂಟಿ" ಎಂದು ಲೇವಡಿ ಮಾಡಿದ್ದಾರೆ.