ಬಿಬಿಎಂಪಿ ರಸ್ತೆಗಳಿಗೆ ಕಾಯಕಲ್ಪ | 3000 ಗುಂಡಿ ಮುಚ್ಚುವ ಕಾರ್ಯಾಚರಣೆ ಆರಂಭ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 15 ದಿನಗಳಲ್ಲಿ ನಗರದಲ್ಲಿ 3,000 ಗುಂಡಿಗಳನ್ನು ಮುಚ್ಚುವ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ.;
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) 15 ದಿನಗಳಲ್ಲಿ ನಗರದಲ್ಲಿ 3,000 ಗುಂಡಿಗಳನ್ನು ಮುಚ್ಚುವ ಮಹತ್ವಾಕಾಂಕ್ಷೆಯ ಕಾರ್ಯಾಚರಣೆ ಪ್ರಾರಂಭಿಸಿದೆ.
ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ನಾನು ಒಂದು ವಾರಗಳ ಕಾಲ ಖಾಸಗಿ ಕೆಲಸದ ಮೇಲೆ ವಿದೇಶ ಪ್ರವಾಸ ಬೆಳೆಸುತ್ತಿದ್ದು, ನಾನು ಕೊಟ್ಟಿರುವ ಗಡುವಿನಲ್ಲಿ ಬೆಂಗಳೂರು ರಸ್ತೆಗಳ ಗುಂಡಿ ಮುಚ್ಚಬೇಕು. ಈ ವಿಚಾರದಲ್ಲಿ ಬೇಜವಾಬ್ದಾರಿ ತೋರುವ ಅಧಿಕಾರಿಗಳನ್ನು ಅಮಾನತುಗೊಳಿಸಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳಿಗೆ 15 ದಿನದ ಗಡುವನ್ನು ನೀಡಿದ್ದರು. ಇದರಿಂದ ಎಚ್ಚೆತ್ತ ಬಿಬಿಎಂಪಿ ಇದೀಗ ಗುಂಡಿ ಮುಚ್ಚುವ ಅಭಿಯಾನ ಆರಂಭಿಸಿದೆ.
ಪ್ರತಿ ಮಳೆಗಾಲದ ನಂತರ ಮರುಕಳಿಸುವ ಬೆಂಗಳೂರಿನ ಹೊಂಡಗುಂಡಿ ಸಮಸ್ಯೆ ದೀರ್ಘಾವಧಿಯ ಸಮಸ್ಯೆಯಾಗಿದ್ದು, ವಾಹನ ಸಂಚಾರ ಮತ್ತು ಪಾದಚಾರಿಗಳಿಗೆ ಸಮಸ್ಯೆ ತಂದೊಡ್ಡಿದೆ. ಹೀಗಾಗಿ 15 ದಿನಗಳಲ್ಲಿ ಗುಂಡಿ ಮುಚ್ಚುವಂತೆ ಡಿಸಿಎಂ ಡಿಕೆ ಶಿವಕುಮಾರ್ ಗಡವು ನೀಡಿದ್ದರು. ಈ ಗಡುವು ಪೂರೈಸಲು ಬಿಬಿಎಂಪಿ, ದಿನಕ್ಕೆ ಕನಿಷ್ಠ 200 ಗುಂಡಿ ಮುಚ್ಚುವ ಗುರಿಯೊಂದಿಗೆ ಕಾರ್ಯಾಚರಣೆಗೆ ಇಳಿದಿದೆ. ಅಂದಾಜು 660 ಕೋಟಿ ರೂ. ವೆಚ್ಚದಲ್ಲಿ ಈ ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ.
ಪ್ರಸ್ತುತ ಅಮೆರಿಕದಲ್ಲಿರುವ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾಮಗಾರಿಯನ್ನು ಖುದ್ದಾಗಿ ಪರಿಶೀಲಿಸಲು ಗಡುವಿನ ಮೊದಲು ಹಿಂತಿರುಗುವುದಾಗಿ ಭರವಸೆ ನೀಡಿದ್ದಾರೆ. ಸಾರ್ವಜನಿಕರು ಗುಂಡಿಗಳ ಕುರಿತು ವರದಿ ಮಾಡಲು, ಸಾರ್ವಜನಿಕರ ಸಹಭಾಗಿತ್ವ ಖಚಿತಪಡಿಸಿಕೊಳ್ಳಲು ಬಿಬಿಎಂಪಿ, ಹೊಸ ಆ್ಯಪ್ ಸಹ ಬಿಡುಗಡೆ ಮಾಡಿದೆ. ಇಲ್ಲಿಯವರೆಗೆ, ಆ್ಯಪ್ ಮೂಲಕ ಗಮನಾರ್ಹ ಸಂಖ್ಯೆಯ ದೂರುಗಳನ್ನು ಪರಿಹರಿಸಲಾಗಿದೆ.