Bangalore Stampede | ಸಿಎಂ ಉಡಾಫೆ ಹೇಳಿಕೆ ; ನೀವು ವಿಧಾನಸೌಧದ ಮೆಟ್ಟಿಲುಗಳಿಗಷ್ಟೇ ಮುಖ್ಯಮಂತ್ರಿಯೇ?; ಎಚ್ಡಿಕೆ ಆಕ್ರೋಶ
ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧದ ಮೆಟ್ಟಿಲುಗಷ್ಟೇ ಮುಖ್ಯಮಂತ್ರಿಯೋ, ದಯವಿಟ್ಟು ಹೇಳುವಿರಾ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.;
ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ಆರ್ಸಿಬಿ ವಿಜಯೋತ್ಸವದಲ್ಲಿ ಯಾರೂ ಸಾಯಲಿಲ್ಲ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆಗೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯ ಅವರು ಕರ್ನಾಟಕದ ಮುಖ್ಯಮಂತ್ರಿಯೋ ಅಥವಾ ವಿಧಾನಸೌಧದ ಮೆಟ್ಟಿಲುಗಷ್ಟೇ ಮುಖ್ಯಮಂತ್ರಿಯೋ, ದಯವಿಟ್ಟು ಹೇಳುವಿರಾ ಎಂದು ಕುಮಾರಸ್ವಾಮಿ ಅವರು ಖಾರವಾಗಿ ಪ್ರಶ್ನಿಸಿದ್ದಾರೆ.
ದುರಂತದ ಹೊಣೆಯನ್ನು ಪೊಲೀಸರ ಮೇಲೆ ಎತ್ತಿಹಾಕಿ 'ಕೈ' ತೊಳೆದುಕೊಳ್ಳುವುದು ಎಷ್ಟು ಸರಿ, ಪ್ರತಿಪಕ್ಷಗಳನ್ನು ದೂರಿ ಪಾರಾಗುವ ಹುನ್ನಾರವೇಕೆ, ಉತ್ತರಿಸಿ ಮೆಟ್ಟಿಲು ಮುಖ್ಯಮಂತ್ರಿಗಳೇ ಎಂದು ಛೇಡಿಸಿದ್ದಾರೆ.
ಕಾಲ್ತುಳಿತ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಘಟನೆಯಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಲು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ನೀಡುತ್ತಿರುವ ಹೇಳಿಕೆಗಳಿಗೆ ಪ್ರತಿಪಕ್ಷಗಳು ತೀವ್ರ ವಾಗ್ದಾಳಿ ನಡೆಸುತ್ತಿವೆ.
ಕಾಲ್ತುಳಿತ ದುರಂತದ ಘಟನೆಗೆ ಸರ್ಕಾರವೇ ನೇರ ಹೊಣೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಆಯೋಜಿಸಿದ್ದ ವಿಜಯೋತ್ಸವದಲ್ಲಿ ಯಾವುದೇ ಅವಗಢ ಸಂಭವಿಸಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ಸಂಭವಿಸಿ ಜನ ಸತ್ತಿದ್ದಾರೆ. ಅಲ್ಲಿ ಸರ್ಕಾರ ಕಾರ್ಯಕ್ರಮ ಆಯೋಜಿಸಿರಲಿಲ್ಲ ಎಂಬ ಸಿಎಂ ಅವರ ಉಡಾಫೆ ಹೇಳಿಕೆ ಸಾರ್ವಜನಿಕ ವಲಯದಲ್ಲೂ ತೀವ್ರ ಟೀಕೆಗೆ ಗುರಿಯಾಗಿದೆ.