Weather Updates | ಸೋನೆ ಮಳೆ, ಕೊರೆವ ಚಳಿಗೆ ಬೆಂಗಳೂರು ಗಡಗಡ!
ಸಾಮಾನ್ಯಕ್ಕಿಂತ ಈ ಬಾರಿ ಹೆಚ್ಚಿನ ಚಳಿಯಾಗಲಿದ್ದು, ತಾಪಮಾನ ಇನ್ನಷ್ಟು ಕುಸಿಯಬಹುದು. ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ಇನ್ನಷ್ಟು ತೀವ್ರವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ;
ಬೆಂಗಳೂರಿನ ವಾತಾವರಣ ದಿಢೀರ್ ಬದಲಾಗಿದ್ದು, ಮೈ ಕೊರೆಯುವ ಚಳಿ ಹೆಚ್ಚಾಗಿದೆ. ಬೆಂಗಳೂರಿನಲ್ಲಿ ಉಷ್ಣಾಂಶ ಕುಸಿದಿದ್ದು ಮಾಗಿಯ ಮೈಕೊರೆಯುವ ಚಳಿಗೆ ಜನ ಮನೆಯಿಂದ ಹೊರ ಬರಲು ಹಿಂಜರಿಯುವಂತಾಗಿದೆ.
ಸಾಮಾನ್ಯಕ್ಕಿಂತ ಈ ಬಾರಿ ಹೆಚ್ಚಿನ ಚಳಿ ಇದ್ದು, ಮುಂದಿನ ದಿನಗಳಲ್ಲಿ ತಾಪಮಾನ ಇನ್ನಷ್ಟು ಕುಸಿಯಬಹುದು. ಕನಿಷ್ಟ ತಾಪಮಾನ 12 ಡಿಗ್ರಿ ಸೆಲ್ಸಿಯಸ್‌ಗೆ ಇಳಿಯುವ ಸಾಧ್ಯತೆ ಇದೆ. ಡಿಸೆಂಬರ್ ಮತ್ತು ಜನವರಿಯಲ್ಲಿ ಚಳಿ ತೀವ್ರವಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಸಾಮಾನ್ಯವಾಗಿ ಡಿಸೆಂಬರ್ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ಚಳಿಗಾಲ ಆರಂಭವಾಗುತ್ತದೆ. ಆದರೆ ಬೆಂಗಳೂರಿನಲ್ಲಿ ಅವಧಿಗಿಂತಲೂ ಮುಂಚೆಯೇ ಈ ಬಾರಿ ಚಳಿ ಆರಂಭವಾಗಿದ್ದು, ನಗರದಾದ್ಯಂತ ತಣ್ಣನೆಯ ಗಾಳಿ ಬೀಸುತ್ತಿದೆ. ಚಂಡ ಮಾರುತದ ಪರಿಣಾಮವಾಗಿ ಸೋಮವಾರದಿಂದಲೇ ಸಿಲಿಕಾನ್ ಸಿಟಿಯ ಕೆಲವು ಭಾಗಗಳಲ್ಲಿ ಇಬ್ಬನಿ ಸುರಿದಂತೆ ಹಗಲು ವೇಳೆ ತುಂತುರು ಮಳೆಯಾಗುತ್ತಿದ್ದು, ಪರಿಣಾಮವಾಗಿ ಚಳಿ ಗಾಳಿ ಅಧಿಕವಾಗಿದೆ.
ನೈಋತ್ಯ ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ತೀವ್ರಗೊಳ್ಳುವ ಸಾಧ್ಯತೆ ಇದ್ದು, ಇದರ ಪರಿಣಾಮ ಬೆಂಗಳೂರಿನಲ್ಲಿ ಮುಂದಿನ ಮೂರು ದಿನ ಮಳೆಯಾಗುವ ಸಾಧ್ಯತೆ ಇದೆ. ಹಾಗಾಗಿ ಹವಾಮಾನ ವೈಪರೀತ್ಯ ಕಾರಣ ಬೆಂಗಳೂರಿನಲ್ಲಿ ಇನ್ನೂ ಮೂರು ದಿನ ಮೈಕೊರೆಯುವ ಚಳಿ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು ಮತ್ತು ಇತರ ಕೆಲವು ಜಿಲ್ಲೆಗಳಲ್ಲಿ ನವೆಂಬರ್ 27 ಮತ್ತು ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಚಂಡಮಾರುತದಿಂದಾಗಿ ಕೋಲಾರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ರಾಮನಗರ, ಮಂಡ್ಯ, ಮೈಸೂರು, ತುಮಕೂರು ಜಿಲ್ಲೆಗಳ ಪ್ರತ್ಯೇಕ ಸ್ಥಳಗಳಲ್ಲಿ ಸಾಧಾರಣ ಮಳೆ ಅಥವಾ ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಬುಧವಾರ (ನ.27) ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 24 ಡಿಗ್ರಿ ಸೆಲ್ಸಿಯಸ್ ಇರಲಿದ್ದು, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ. ಮಂಗಳೂರಿನಲ್ಲಿ ಗರಿಷ್ಠ 31 ಮತ್ತು ಕನಿಷ್ಠ 24, ಶಿವಮೊಗ್ಗದಲ್ಲಿ ಗರಿಷ್ಠ 29 ಮತ್ತು ಕನಿಷ್ಠ 18, ಬೆಳಗಾವಿಯಲ್ಲಿ ಗರಿಷ್ಠ 28 ಮತ್ತು ಕನಿಷ್ಠ 17, ಮೈಸೂರಿನಲ್ಲಿ ಗರಿಷ್ಠ 26 ಮತ್ತು ಕನಿಷ್ಠ 20, ಮಂಡ್ಯದಲ್ಲಿ ಗರಿಷ್ಠ 27 ಮತ್ತು ಕನಿಷ್ಠ 20 ಮತ್ತು ಹುಬ್ಬಳ್ಳಿಯಲ್ಲಿ ಗರಿಷ್ಠ 29 ಕನಿಷ್ಠ 17 ಇರಲಿದೆ.
ಕರ್ನಾಟಕದಾದ್ಯಂತ ಅಕಾಲಿಕ ಚಳಿ
ಅಸಹಜ ಚಳಿ ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಬೀದರ್ ಮತ್ತು ವಿಜಯಪುರದಂತಹ ಉತ್ತರ ಜಿಲ್ಲೆಗಳಲ್ಲಿಯೂ ಗಮನಾರ್ಹ ತಾಪಮಾನ ಕುಸಿತ ಕಂಡುಬಂದಿದೆ. ಕನಿಷ್ಠ ತಾಪಮಾನವು 12 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಮುಂಬರುವ ತಿಂಗಳುಗಳಲ್ಲಿ 3 ರಿಂದ 4 ಡಿಗ್ರಿ ಸೆಲ್ಸಿಯಸ್ ಮತ್ತಷ್ಟು ಕುಸಿತವಾಗುವ ಮುನ್ಸೂಚನೆಯನ್ನು ತಜ್ಞರು ನೀಡಿದ್ದಾರೆ.