ಬಂಡೀಪುರ ರಾತ್ರಿ ಸಂಚಾರ ನಿಷೇಧ: ಕಾರ್ಯಕರ್ತರಿಂದ ಪ್ರತಿಭಟನಾ ರ‍್ಯಾಲಿ

ಬಂಡೀಪುರದ ಮೂಲಕ ದಿನದ 24 ಗಂಟೆಯೂ ಸಂಚಾರಕ್ಕೆ ಅವಕಾಶ ನೀಡುವಂತೆ ಕೇರಳದಿಂದ ಹೆಚ್ಚುತ್ತಿರುವ ಒತ್ತಡದ ಬಗ್ಗೆ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.;

Update: 2025-04-07 05:29 GMT
ಬಂಡಿಪುರದಲ್ಲಿ ರಾತ್ರಿ ಸಂಚಾರ ನಿಷೇಧ ತೆರವು ಮಾಡದಂತೆ ಪ್ರತಿಭಟನೆ ನಡೆಸಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿ 766 (NH 766) ಮೇಲಿನ ರಾತ್ರಿ ಸಂಚಾರ ನಿಷೇಧವನ್ನು ರದ್ದುಗೊಳಿಸುವ ಯೋಜನೆಯನ್ನು ರೈತರು ಹಾಗೂ ಪರಿಸರವಾದಿಗಳು ವಿರೋಧಿಸಿದ್ದಾರೆ. ಯುನೈಟೆಡ್ ಕನ್ಸರ್ವೇಶನ್ ಮೂವ್‌ಮೆಂಟ್ (UCM) ಬ್ಯಾನರ್ ಅಡಿಯಲ್ಲಿ ನಾಗರಿಕರು, ರೈತರು ಮತ್ತು ವನ್ಯಜೀವಿ ಕಾರ್ಯಕರ್ತರು ಏಪ್ರಿಲ್ ಭಾನುವಾರ "ವಾಕ್ ಫಾರ್ ಬಂಡೀಪುರ" ಎಂಬ ಶಾಂತಿ ರ‍್ಯಾಲಿ ಆಯೋಜಿಸಿದ್ದಾರೆ..

ಈ ಪ್ರತಿಭಟನಾ ರ‍್ಯಾಲಿಯು ಬೆಳಿಗ್ಗೆ 10.40ಕ್ಕೆ ಆರಂಭಗೊಂಡಿತ್ತು. NH 766 ರ ಮದ್ದೂರು ಚೆಕ್‌ಪೋಸ್ಟ್‌ನಿಂದ ಸುಮಾರು 2.5 ಕಿ.ಮೀ ದೂರದಲ್ಲಿರುವ ಕಗ್ಗಲದ ಹುಂಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರತಿಭಟನಾಕಾರರು ಒಟ್ಟುಗೂಡಿದರು. ರಾತ್ರಿ ಸಂಚಾರ ನಿಷೇಧವನ್ನು ಮುಂದುವರಿಸುವಂತೆ ಒತ್ತಾಯಿಸಿ, ಪ್ರತಿಭಟನಾಕಾರರು ಫಲಕಗಳನ್ನು ಹಿಡಿದು, ಘೋಷಣೆಗಳನ್ನು ಕೂಗುತ್ತಾ ಹೆದ್ದಾರಿಯಲ್ಲಿ ಮೆರವಣಿಗೆ ನಡೆಸಿದರು. 2010ರಿಂದ ಜಾರಿಯಲ್ಲಿರುವ ಈ ನಿಷೇಧವು ವನ್ಯಜೀವಿಗಳ ರಕ್ಷಣೆಗೆ ಅಗತ್ಯ ಎಂದು ಪ್ರತಿಭಟನಾಕಾರರು ಹೇಳಿದರು.

ಕೇರಳದಿಂದ ಒತ್ತಡ?

ಬಂಡೀಪುರದ ಮೂಲಕ ದಿನದ 24 ಗಂಟೆಯೂ ಸಂಚಾರಕ್ಕೆ ಅವಕಾಶ ನೀಡುವಂತೆ ಕೇರಳದಿಂದ ಹೆಚ್ಚುತ್ತಿರುವ ಒತ್ತಡದ ಬಗ್ಗೆ ಕಾರ್ಯಕರ್ತರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಈ ಹೆದ್ದಾರಿಯು ಕರ್ನಾಟಕದ ಗುಂಡ್ಲುಪೇಟೆಯನ್ನು ಕೇರಳದ ವಯನಾಡ್‌ನೊಂದಿಗೆ ಸಂಪರ್ಕಿಸುತ್ತದೆ. ಪ್ರಿಯಾಂಕಾ ಗಾಂಧಿ ಅವರು ವಯನಾಡ್ ಸಂಸದರಾಗಿ ಆಯ್ಕೆಯಾದ ಬಳಿಕ ಕೇರಳದ ಒತ್ತಡ ಹೆಚ್ಚಾಗಿದೆ ಎಂದು ಕಾರ್ಯಕರ್ತರು ಆರೋಪಿಸಿದ್ದಾರೆ. ಕರ್ನಾಟಕದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರವು ತನ್ನ ಹತ್ತು ವರ್ಷಗಳ ನಿಲುವನ್ನು ಬದಲಾಯಿಸಲು ಯೋಜಿಸುತ್ತಿದೆ ಎಂಬ ಆತಂಕವನ್ನು ಅವರು ವ್ಯಕ್ತಪಡಿಸಿದರು.

ವನ್ಯಜೀವಿಗೆಳಿಗೆ ಸುರಕ್ಷತೆ

ರಾತ್ರಿ ಸಂಚಾರ ನಿಷೇಧವು 2010ರಲ್ಲಿ ಜಾರಿಗೆ ಬಂದಾಗಿನಿಂದ ವನ್ಯಜೀವಿಗಳ ಸಾವು ಮತ್ತು ಅವುಗಳಿಗೆ ಎದುರಾಗುವ ತೊಂದರೆಯನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ನಿಷೇಧ ಕಾನೂನುಬದ್ಧವಾಗಿ ಪ್ರಶ್ನಿಸಲಾಗಿತ್ತಾದರೂ, ಕರ್ನಾಟಕ ಹೈಕೋರ್ಟ್ ಮತ್ತು ನಂತರ ಸುಪ್ರೀಂ ಕೋರ್ಟ್ ಈ ಪ್ರದೇಶದ ಸಮೃದ್ಧ ಜೈವಿಕ ವೈವಿಧ್ಯತೆಯನ್ನು ರಕ್ಷಿಸುವ ಅಗತ್ಯತೆಯನ್ನು ಒತ್ತಿಹೇಳಿ ನಿಷೇಧವನ್ನು ಎತ್ತಿಹಿಡಿದಿತ್ತು. ಆದರೆ, ಕೇರಳದ ಬೈಜು ಪೌಲ್ ಮ್ಯಾಥ್ಯೂಸ್ ಎಂಬುವವರು ಈ ರಸ್ತೆ ಹೆಚ್ಚಿನ ಬಸ್‌ಗಳ ಸಂಚಾರಕ್ಕೆ ಅವಕಾಶ ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದಾಗ, ಕರ್ನಾಟಕವು ತನ್ನ ಪ್ರತಿಜ್ಞಾಪತ್ರವನ್ನು ಹಿಂಪಡೆದುಕೊಂಡಿದೆ ಎಂದು ಪ್ರತಿಭಟನಾಕಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಕರ್ನಾಟಕವು ಸುಪ್ರೀಂ ಕೋರ್ಟ್‌ನಲ್ಲಿ ಈ ನಿಷೇಧವನ್ನು ಸಮರ್ಥಿಸಿಕೊಂಡಿದೆ. ಈಗ ಇದ್ದಕ್ಕಿದ್ದಂತೆ ನಿಲುವು ಬದಲಾಯಿಸುವುದರ ಹಿಂದೆ ರಾಜಕೀಯ ಒತ್ತಡವಿದೆ ಎಂಬುದು ಸ್ಪಷ್ಟವಾಗಿದೆ," ಎಂದು ಪ್ರತಿಭಟನಾಕಾರರು ಹೇಳಿದರು.

ರೈತರು ಮತ್ತು ಯುವಕರ ಬೆಂಬಲ

ಪ್ರತಿಭಟನಾ ರ‍್ಯಾಲಿಯಲ್ಲಿ ಗ್ರಾಮಗಳ ರೈತರು ಮತ್ತು ಯುವಕರು ಭಾಗವಹಿಸಿದ್ದರು. ರಾತ್ರಿಯಲ್ಲಿ ಸಂಚಾರವನ್ನು ಮುಕ್ತಗೊಳಿಸಿದರೆ ಮಾನವ-ಪ್ರಾಣಿ ಸಂಘರ್ಷ ಹೆಚ್ಚಾಗುವ ಭೀತಿ ಎದುರಾಗಿದೆ.     

Tags:    

Similar News