ರಾಜಣ್ಣ ಮನೆಗೆ ಹಿಂದುಳಿದ ಸಮುದಾಯಗಳ ಶ್ರೀಗಳ ಭೇಟಿ; ಸಂಪುಟಕ್ಕೆ ಮರುಸೇರ್ಪಡೆಗೆ ಆಗ್ರಹ
ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, "ಕಾಂಗ್ರೆಸ್ ಹೈಕಮಾಂಡ್ ಸಣ್ಣ ತಪ್ಪಿಗಾಗಿ ರಾಜಣ್ಣ ಅವರಿಗೆ ದೊಡ್ಡ ಶಿಕ್ಷೆ ನೀಡಿದೆ. ಇದು ಅವರಿಗೆ ಮಾಡಿದ ಮೋಸ" ಎಂದು ಆರೋಪಿಸಿದರು.;
ಮಾಜಿ ಸಚಿವ ಕೆ.ಎನ್. ರಾಜಣ್ಣನವರ ಮನೆಗೆ ವಿವಿಧ ಮಾಠಾಧೀಶರು ಭೇಟಿ ನೀಡಿ ಬೆಂಬಲ ವ್ಯಕ್ತಪಡಿಸಿದರು.
ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರನ್ನು ಸಚಿವ ಸಂಪುಟದಿಂದ ಕೈಬಿಟ್ಟಿರುವ ಕ್ರಮಕ್ಕೆ ದಲಿತ ಮತ್ತು ಹಿಂದುಳಿದ ಸಮುದಾಯಗಳ ಮಠಾಧೀಶರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ರಾಜಣ್ಣ ಅವರಿಗೆ ಬೆಂಬಲ ಸೂಚಿಸಿರುವ ಶ್ರೀಗಳು, ಅವರನ್ನು ತಕ್ಷಣವೇ ಮರಳಿ ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಕಾಂಗ್ರೆಸ್ ಹೈಕಮಾಂಡ್‌ಗೆ ಆಗ್ರಹಿಸಿದ್ದಾರೆ.
ಭಾನುವಾರ, ದಲಿತ-ಹಿಂದುಳಿದ ಮಠಾಧೀಶರ ಒಕ್ಕೂಟದ 15ಕ್ಕೂ ಹೆಚ್ಚು ಸ್ವಾಮೀಜಿಗಳು ತುಮಕೂರಿನ ಕ್ಯಾತಸಂದ್ರದಲ್ಲಿರುವ ರಾಜಣ್ಣ ಅವರ ನಿವಾಸಕ್ಕೆ ಭೇಟಿ ನೀಡಿ ತಮ್ಮ ಬೆಂಬಲವನ್ನು ಘೋಷಿಸಿದರು. ಭೇಟಿ ನೀಡಿದವರಲ್ಲಿ ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಕನಕ ಗುರುಪೀಠದ ಈಶ್ವರಾನಂದಪುರಿ ಶ್ರೀ ಹಾಗೂ ವಾಲ್ಮೀಕಿ ಸಮುದಾಯದ ಪ್ರಸನ್ನಾನಂದಪುರಿ ಶ್ರೀಗಳು ಪ್ರಮುಖರಾಗಿದ್ದರು.
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ವಾಮೀಜಿಗಳು, "ಕಾಂಗ್ರೆಸ್ ಹೈಕಮಾಂಡ್ ಸಣ್ಣ ತಪ್ಪಿಗಾಗಿ ರಾಜಣ್ಣ ಅವರಿಗೆ ದೊಡ್ಡ ಶಿಕ್ಷೆ ನೀಡಿದೆ. ಇದು ಅವರಿಗೆ ಮಾಡಿದ ಮೋಸ" ಎಂದು ಆರೋಪಿಸಿದರು. ರಾಜಣ್ಣ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳದಿದ್ದರೆ, ಮುಂಬರುವ ದಿನಗಳಲ್ಲಿ ದಲಿತ ಮತ್ತು ಹಿಂದುಳಿದ ಸಮುದಾಯಗಳ ಮತಗಳು ಕಾಂಗ್ರೆಸ್‌ನಿಂದ ವಿಮುಖವಾಗಲಿವೆ ಎಂದು ಎಚ್ಚರಿಕೆ ನೀಡಿದರು.