B R Patil | ಸಿಎಂ ರಾಜಕೀಯ ಸಲಹೆಗಾರರ ಸ್ಥಾನಕ್ಕೆ ಬಿ ಆರ್ ಪಾಟೀಲ್ ರಾಜೀನಾಮೆ
ಸಚಿವ ಸ್ಥಾನ ವಂಚಿತರಾದ ಹಿನ್ನೆಲೆಯಲ್ಲಿ ಸರ್ಕಾರ ರಚನೆಯಾದ ಆರಂಭದಿಂದಲೂ ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಹಿರಿಯ ನಾಯಕ ಬಿ ಆರ್ ಪಾಟೀಲ್ ಅವರು ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.
ಕಲಬುರ್ಗಿ ಜಿಲ್ಲೆಯ ಆಳಂದ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಬಿ ಆರ್ ಪಾಟೀಲ್ ಅವರು ಕಾಂಗ್ರೆಸ್ನ ಹಿರಿಯ ಮುಖಂಡರಾಗಿದ್ದು, ಒಂದು ಕಾಲದ ಸಿದ್ದರಾಮಯ್ಯ ಅವರ ಪರಮಾಪ್ತರು ಕೂಡ. ಆದರೆ, ಕಳೆದ ಬಾರಿ ಸಂಪುಟ ರಚನೆಯ ವೇಳೆ ತಮಗೆ ಅವಕಾಶ ಸಿಗದೇ ಇರುವ ಹಿನ್ನೆಲೆಯಲ್ಲಿ ಅಸಮಾಧಾನಗೊಂಡಿದ್ದ ಅವರನ್ನು ಸಮಾಧಾನಪಡಿಸುವ ಯತ್ನವಾಗಿ ಮುಖ್ಯಮಂತ್ರಿಗಳ ರಾಜಕೀಯ ಸಲಹೆಗಾರರನ್ನಾಗಿ(ನೀತಿ ಮತ್ತು ಕಾರ್ಯಕ್ರಮ) ನೇಮಕ ಮಾಡಲಾಗಿತ್ತು.
ಆದರೆ, ಆ ಸ್ಥಾನದ ಬಗ್ಗೆಯೂ ಅವರಿಗೆ ಅಸಮಾಧಾನ ಇತ್ತು. ಆ ಹಿನ್ನೆಲೆಯಲ್ಲಿಯೇ ಹಲವು ಬಾರಿ ಅವರು ಸರ್ಕಾರದ ವಿರುದ್ಧವೇ ಬಹಿರಂಗ ಟೀಕೆಗಳನ್ನು ಮಾಡಿದ್ದರು.
ಸಂಪುಟ ಪುನರ್ರಚನೆ ಅಥವಾ ವಿಸ್ತರಣೆಯ ವೇಳೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದ ಅವರು, ಸದ್ಯಕ್ಕೆ ಅಂತಹ ಸಾಧ್ಯತೆಗಳು ಕ್ಷೀಣಿಸಿದ ಹಿನ್ನೆಲೆಯಲ್ಲಿ ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ. ಪಾಟೀಲರು ತಮ್ಮ ರಾಜೀನಾಮೆ ಪತ್ರವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ್ದಾರೆ ಎನ್ನಲಾಗಿದೆ.
ಸಾಮಾಜಿಕ ಹೋರಾಟ ಮತ್ತು ರೈತ ಪರ ಧೋರಣೆಯ ಪಾಟೀಲರು, ಕಳೆದ ಕೆಲವು ದಿನಗಳ ಹಿಂದೆ ಕೃಷಿ ಉತ್ಪನ್ನಗಳಿಗೆ ಕನಿಷ್ಟ ಬೆಂಬಲ ಬೆಲೆ(ಎಂಎಸ್ಪಿ) ವ್ಯವಸ್ಥೆಗೆ ಕಾನೂನು ಬಲ ನೀಡಬೇಕು ಎಂದು ದೆಹಲಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ವಿಧಾನಸೌಧದ ಮುಂದೆ ಏಕಾಂಗಿಯಾಗಿ ಧರಣಿ ನಡೆಸಿದ್ದರು.